ADVERTISEMENT

ದೇಶದಲ್ಲಿ ಅನಧಿಕೃತ ತುರ್ತು ಸ್ಥಿತಿ

ಸಂಕಷ್ಟ ಎದುರಿಸಲು ಸಮ್ಮೇಳನದಲ್ಲಿ ಅಜೆಂಡಾ: ಚಂಪಾ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ದೇಶದಲ್ಲಿ ಅನಧಿಕೃತ ತುರ್ತು ಸ್ಥಿತಿ
ದೇಶದಲ್ಲಿ ಅನಧಿಕೃತ ತುರ್ತು ಸ್ಥಿತಿ   

ಕಾಗಿನೆಲೆ (ಹಾವೇರಿ ಜಿಲ್ಲೆ): ‘ಅಂದು ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದರೂ ಮುಕ್ತ ಅಭಿವ್ಯಕ್ತಿ ಸಾಧ್ಯವಿತ್ತು. ಈಗ ಅಧಿಕೃತವಾಗಿ ಆ ಪರಿಸ್ಥಿತಿ ಇಲ್ಲದೇ ಇದ್ದರೂ ಕ್ರೌರ್ಯದ ಮೂಲಕ ಬಾಯಿ ಮುಚ್ಚಿಸುವ ಪ್ರಯತ್ನ ನಡೆದಿದೆ’ ಎಂದು ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಕಳವಳ ವ್ಯಕ್ತಪಡಿಸಿದರು.

ಶನಿವಾರ ಇಲ್ಲಿ ಆಯೋಜಿಸಿದ್ದ ‘ಚಂಪಾ: ಅಭಿವ್ಯಕ್ತಿ ಮತ್ತು ವ್ಯಕ್ತಿತ್ವ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ನಿಮ್ಮ ಮಾತನ್ನು ಯಾರೋ ಎಲ್ಲೋ ಕುಳಿತು ಮೈಯೆಲ್ಲ ಕಣ್ಣು– ಕಿವಿಯಾಗಿ ಕೇಳುತ್ತಾರೆ. ಮಾತನ್ನು ಮಾತಿನಿಂದ, ವಿಚಾರವನ್ನು ವಿಚಾರದಿಂದ ಎದುರಿಸಲಾಗದೇ, ಕ್ರೌರ್ಯ ಮೆರೆಯುತ್ತಿದ್ದಾರೆ. ಆದರೆ, ಅದಕ್ಕೆಲ್ಲ ನಾವು ಹೆದರಬೇಕಾಗಿಲ್ಲ’ ಎಂದರು.

‘ಇದು ಸಂಕಷ್ಟದ ಸಮಯ. ಇದಕ್ಕೆ ನಾವೆಲ್ಲ ಬಲಿ’ ಎಂದ ಅವರು, ‘ನಾವೆಲ್ಲ ಸಮ್ಮೇಳನದಲ್ಲಿ ಸೇರಿಕೊಂಡು ದೇಶದಲ್ಲಿನ ಸಮಸ್ಯೆಗಳನ್ನು ಎದುರಿಸಲು ಅಜೆಂಡಾ ಸಿದ್ಧಪಡಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ನನ್ನ ಕಾಯಕ ಭೂಮಿ ಧಾರವಾಡ. ಅಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಕುವೆಂಪು ಅಧ್ಯಕ್ಷರಾಗಿದ್ದರು. ನನಗೀಗ ಅವರ ಕಾಯಕ ಭೂಮಿಯಲ್ಲಿ ಅಧ್ಯಕ್ಷತೆಯ ಅವಕಾಶ ಸಿಕ್ಕಿದೆ’ ಎಂದರು.

‘ಸಮ್ಮೇಳನದ ನನ್ನ ಭಾಷಣದಲ್ಲಿ ಝಲಕ್‌ ಇದ್ದೇ ಇರುತ್ತದೆ. ಆದರೆ, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದಂತೆ, ‘ಘನತೆ, ವಿವೇಕ ಮತ್ತು ಸಂಯಮ’ ಇಟ್ಟುಕೊಂಡು ಹೇಳುವುದನ್ನೆಲ್ಲ ಹೇಳುತ್ತೇನೆ’ ಎಂದರು.

**

ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಧರ್ಮ

ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ಕರೆ, ಅದು ಭವಿಷ್ಯದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಸ್ವತಂತ್ರವಾಗಿ ಮುನ್ನಡೆಸಲಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

‘ಇಂದು, ದನಗಳಿಗಾಗಿ ಜನರನ್ನು ಕೊಲ್ಲುವ ಪರಿಸ್ಥಿತಿ ಇದೆ. ದನದ ರಕ್ತ–ಮಾಂಸದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಈ ಆಲೋಚನೆಯನ್ನು ಸರಿ ದಾರಿಗೆ ತರಬೇಕಾದ ಅವಶ್ಯಕತೆ ಇದೆ. ರಸ್ತೆ ಮೇಲೆ ರಕ್ತ ಚೆಲ್ಲಿದ ಇಂಥ ಸಂದರ್ಭದಲ್ಲಿ ಚಂಪಾ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ಮಹತ್ವದ್ದು’ ಎಂದರು.

‌‌‘ನಮಗೆ ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ಗೌರವ ಇದೆ. ಆದರೆ, ಅವರಲ್ಲಿಯೇ ದ್ವಂದ್ವ ಇದ್ದು, ತಾತ್ವಿಕ ಗಟ್ಟಿತನ ಬಂದಿಲ್ಲ. ಅವರು, ಕೃಷ್ಣನ ಮೂರ್ತಿಯ ಜೊತೆಗೆ ಕನಕರ ಮೂರ್ತಿಯನ್ನೂ ಪ್ರತಿಷ್ಠಾಪಿಸಲಿ’ ಎಂದರು.

‘ಕುವೆಂಪು ಗಂಭೀರ ಆನೆಯಾದರೆ, ಬೇಂದ್ರೆ ಅವರು ಭಾಷೆಯನ್ನು ಭಾವನಾತ್ಮಕವಾಗಿ ಬಳಸುವ ಜಿಂಕೆ. ಚಂಪಾ ಭಾಷೆಯ ಜೊತೆ ಚೆಲ್ಲಾಟವಾಡುತ್ತಾ ಸುತ್ತೆಲ್ಲ ಒದೆಯುವ ಕುದುರೆ’ ಎಂದು ಬಣ್ಣಿಸಿದರು.

**

ಲಿಂಗಾಯತ ಪ್ರತ್ಯೇಕಧರ್ಮದ ಹೋರಾಟ ಧಾರ್ಮಿಕ ಚಳವಳಿಯಾಗಿದೆ. ಗುಪ್ತಗಾಮಿನಿಯಾಗಿದ್ದ ಬಸವಾದಿ ಶರಣರ ಪ್ರಯತ್ನಕ್ಕೆ ಮತ್ತೆ ಹೋರಾಟದ ರೂಪ ಸಿಕ್ಕಿದೆ.

–ಪ್ರೊ. ಚಂದ್ರಶೇಖರ ಪಾಟೀಲ, ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.