ADVERTISEMENT

ದೇಶ ವಿರೋಧಿ ಘೋಷಣೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಹುಬ್ಬಳ್ಳಿ ವಿದ್ಯಾನಗರದಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
ಬೆಂಗಳೂರಿನ ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜಿನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ಮಂಗಳವಾರ ತ್ರಿವರ್ಣ ಬಣ್ಣದ ಬಟ್ಟೆ ಹಿಡಿದು ಮೆರವಣಿಗೆ ನಡೆಸಿದರು
ಬೆಂಗಳೂರಿನ ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜಿನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ಮಂಗಳವಾರ ತ್ರಿವರ್ಣ ಬಣ್ಣದ ಬಟ್ಟೆ ಹಿಡಿದು ಮೆರವಣಿಗೆ ನಡೆಸಿದರು   

ಹುಬ್ಬಳ್ಳಿ: ಬೆಂಗಳೂರಿನ ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜಿನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿದ್ಯಾನಗರದ ಚೌಗಲ ಪದವಿಪೂರ್ವ ಕಾಲೇಜಿನಿಂದ ಹೊರಟ ಮೆರವಣಿಗೆಯು ಹೊಸೂರು ವೃತ್ತ, ಚನ್ನಮ್ಮ ವೃತ್ತ ಹಾದು ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿತು. ಸುಮಾರು ಅರ್ಧ ತಾಸು ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಬಳಿಕ ಮಿನಿವಿಧಾನಸೌಧಕ್ಕೆ ತೆರಳಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ನಗರ ಘಟಕದ ಕಾರ್ಯದರ್ಶಿ ನವೀನಗೌಡ ಪಾಟೀಲ ‘ಜಮ್ಮು–ಕಾಶ್ಮೀರದಲ್ಲಿ ಶಾಂತಿ ಕಾಪಾಡುವಲ್ಲಿ ಸೇನೆಯು ಪ್ರಮುಖ ಪಾತ್ರ ವಹಿಸಿದೆ. ಅಲ್ಲಿನ ಜನರ ರಕ್ಷಣೆಗೆ ಸದಾ ಬದ್ಧವಾಗಿದೆ. ಪ್ರವಾಹ, ಭೂಕಂಪ ಸಂದರ್ಭಗಳಲ್ಲಿ ಸೇನೆಯ ಕಾರ್ಯ ಮೆಚ್ಚುವಂತಹದ್ದು. ಕಳೆದ ಎರಡು ವರ್ಷಗಳಿಂದ ಕಣಿವೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಇದು ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳಿಗೆ ನುಂಗಲಾರದ ತುತ್ತಾಗಿದೆ. ಸೇನೆಯನ್ನು ಹೇಗಾದರೂ ವಾಪಸ್‌ ಕರೆಸಿಕೊಳ್ಳುವ ಹುನ್ನಾರ ಅಡಗಿದೆ’ ಎಂದು ಆರೋಪಿಸಿದರು.

‘ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆ ಪದಾಧಿಕಾರಿಗಳು ಭಾಷಣದಲ್ಲಿ ಪಾಕಿಸ್ತಾನ ಮತ್ತು ಉಗ್ರ ಸಂಘಟನೆಗಳಿಗೆ ಬೆಂಬಲ ಸೂಚಿಸುವ ಮೂಲಕ ಭಾರತೀಯ ಸೈನಿಕರಿಗೆ ಧಿಕ್ಕಾರ ಕೂಗಿರುವುದು ದೇಶದ್ರೋಹ. ಭಯೋತ್ಪಾದನೆಯಲ್ಲಿ ತೊಡಗಿ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸಿ ಸೇನೆಯಿಂದ ಹತ್ಯೆಗೀಡಾದವರು ಹಾಗೂ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾದವರನ್ನೂ ಹುತಾತ್ಮರಂತೆ ಬಿಂಬಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ದೇಶಭಕ್ತರು ವಿರೋಧ ವ್ಯಕ್ತಪಡಿಸಿದಾಗ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಇದರ ವಿಡಿಯೊ ತುಣುಕುಗಳನ್ನು ಪೊಲೀಸ್‌ ಇಲಾಖೆಗೆ ನೀಡಲಾಗಿದೆ’ ಎಂದರು.

ದೂರು ದಾಖಲಿಸಿಕೊಳ್ಳಲು ತಡ ಮಾಡಿದರೆ ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕಾರ್ಯಕ್ರಮ ಆಯೋಜಿಸಿದ್ದವರು ಮತ್ತು ಘೋಷಣೆಗಳನ್ನು ಕೂಗಿದವರನ್ನು ತಕ್ಷಣವೇ ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಬಳಿಕ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖ್ಯಾಂಶಗಳು
* ಭಾರತೀಯ ಸೇನೆ ವಿರುದ್ಧ ಆರೋಪ ಸಲ್ಲ
* ಮುಗ್ಧ ಜನರ ಬಲಿ ತೆಗೆದುಕೊಳ್ಳುವ ಆರೋಪ ಸುಳ್ಳು
* ಕಾರ್ಯಕ್ರಮ ಆಯೋಜಕರ ಬಂಧನಕ್ಕೆ ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.