ADVERTISEMENT

ಧರ್ಮಸ್ಥಳ ಧರ್ಮಾಧಿಕಾರಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST
ಧರ್ಮಸ್ಥಳ ಧರ್ಮಾಧಿಕಾರಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ
ಧರ್ಮಸ್ಥಳ ಧರ್ಮಾಧಿಕಾರಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ   

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳ ದಕ್ಷ ಕುಶಲಕರ್ಮಿಗಳನ್ನು ಗುರುತಿಸಿ, ಅವರ ಕೌಶಲವನ್ನು ಪಟ್ಟಣ ಮತ್ತು ಅರೆಪಟ್ಟಣಗಳಲ್ಲಿ ಬಳಸಿಕೊಳ್ಳುವ ನೂತನ ಯೋಜನೆಯೊಂದನ್ನು ಮುಂದಿನ ದಿನಗಳಲ್ಲಿ ಆರಂಭಿಸುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಘೋಷಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಸಂಸ್ಥಾಪಕರ ದಿನಾಚರಣೆಯಲ್ಲಿ `ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ~ ಸ್ವೀಕರಿಸಿ ಮಾತನಾಡಿದ ಅವರು, `ಈ ಯೋಜನೆಯ ಕುರಿತು ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರ ಅವರೊಂದಿಗೆ ಚರ್ಚಿಸಿದ್ದೇನೆ. ಧರ್ಮಸ್ಥಳ ಕ್ಷೇತ್ರ, ಎಫ್‌ಕೆಸಿಸಿಐ ಒಟ್ಟಾಗಿ ಈ ಯೋಜನೆಗೆ ಚಾಲನೆ ನೀಡಲಿವೆ~ ಎಂದು ತಿಳಿಸಿದರು.

ರುಡ್‌ಸೆಟ್ ಸಾಧನೆ: ಧರ್ಮಸ್ಥಳ ಕ್ಷೇತ್ರ ನಡೆಸುತ್ತಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಯೋಜನೆಯ (ರುಡ್‌ಸೆಟ್) ಕುರಿತು ಮಾಹಿತಿ ಹಂಚಿಕೊಂಡ ಅವರು, `ದೇಶದ ವಿವಿಧ ಭಾಗಗಳಲ್ಲಿರುವ ರುಡ್‌ಸೆಟ್ ಕೇಂದ್ರಗಳ ಮೂಲಕ ಇದುವರೆಗೆ 1.27 ಲಕ್ಷ ಜನರಿಗೆ ಸ್ವಉದ್ಯೋಗ ಕುರಿತ ತರಬೇತಿ ನೀಡಲಾಗಿದೆ. ಅವರಲ್ಲಿ 93 ಸಾವಿರ ಮಂದಿ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ~ ಎಂದು ತಿಳಿಸಿದರು.

ದೇಶದ ಪ್ರತಿ ಜಿಲ್ಲೆಯಲ್ಲೂ ಒಂದು ರುಡ್‌ಸೆಟ್ ಕೇಂದ್ರ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆ ಕೇಂದ್ರಗಳ ಉಸ್ತುವಾರಿಯನ್ನು ಧರ್ಮಸ್ಥಳ ಕ್ಷೇತ್ರವೇ ವಹಿಸಿಕೊಳ್ಳಲಿದೆ ಎಂದರು.

`ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ~ಯ ಮೂಲಕ ಇದುವರೆಗೆ ಒಟ್ಟು ರೂ. 1,200 ಕೋಟಿ  ಕಿರುಸಾಲ ವಿತರಿಸಲಾಗಿದೆ. ಈ ಯೋಜನೆಯ ವಾರ್ಷಿಕ ವ್ಯವಹಾರ ಈಗ ರೂ. 3,000 ಕೋಟಿ ತಲುಪಿದೆ ಎಂದರು. ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ, ಸಚಿವರಾದ ಮುರುಗೇಶ ನಿರಾಣಿ,   ಎಸ್. ಸುರೇಶ್‌ಕುಮಾರ್, ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರ ಇದ್ದರು.

ಹೆಗ್ಗಡೆ ಹೇಳಿದ ಸರ್.ಎಂ.ವಿ ದೃಷ್ಟಾಂತ
ಬೆಂಗಳೂರು:
ವಿಶ್ವೇಶ್ವರಯ್ಯ ಅವರ ಜೀವನ ಕ್ರಮದ ಕುರಿತು ಭಾಷಣದ ಮಧ್ಯೆ ಪ್ರಸ್ತಾಪಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು, `ವಿಶ್ವೇಶ್ವರಯ್ಯನವರು ದಿವಾನರಾಗಿ ಅಧಿಕಾರ ಸ್ವೀಕರಿಸಲು ಎರಡು ದಿನ ಇರುವಾಗ ತಮ್ಮ ಸಂಬಂಧಿಕರನ್ನು ಕರೆದು ಮನೆಯಲ್ಲಿ ಊಟ ಹಾಕಿಸಿದರಂತೆ. ಊಟದ ನಂತರ, ನಾನು ಮೈಸೂರು ಸರ್ಕಾರದ ಅಧಿಕಾರಿಯಾದ ನಂತರ ಯಾರೂ ನನ್ನ ಮನೆಗೆ ಬರಬೇಡಿ, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಸೂಚಿಸಿದರಂತೆ~ ಎಂದು ಹೆಗ್ಗಡೆ ಹೇಳಿದರು.

ನಂತರ ವೇದಿಕೆಯ ಮೇಲೆ ಕುಳಿತಿದ್ದವರತ್ತ ನಗುಮುಖದಿಂದಲೇ ತಿರುಗಿದ ಅವರು, `ವಿಶ್ವೇಶ್ವರಯ್ಯ ಅವರ ಜೀವನದ ಈ ದೃಷ್ಟಾಂತವನ್ನು ನಮ್ಮ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು ಅಳವಡಿಸಿಕೊಂಡರೆ ಚೆನ್ನಾಗಿತ್ತು~ ಎಂದರು. ಹೆಗ್ಗಡೆಯವರ ಮಾತಿಗೆ ಮುರುಗೇಶ ನಿರಾಣಿ, ಸದಾನಂದ ಗೌಡ, ಜೆ.ಆರ್. ಬಂಗೇರ ಮತ್ತಿತರರೂ ನಕ್ಕರು!

ಹೆಗ್ಗಡೆಯವರ ಮಾತಿಗೆ ತಮ್ಮ ಭಾಷಣದಲ್ಲಿ ದನಿಗೂಡಿಸಿದ ಗೌಡ ಅವರು, `ಇಂದು ಅಧಿಕಾರ ಸ್ವೀಕರಿಸುವವರೂ ಔತಣಕೂಟ ಏರ್ಪಡಿಸುತ್ತಾರೆ. ನೀವು ಸ್ವಲ್ಪ ಮಾಡಿಕೊಳ್ಳಿ, ನಮಗೂ ಸ್ವಲ್ಪ ಕೊಡಿ ಎನ್ನಲು~ ಎಂದು ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT