ADVERTISEMENT

ನಂದಿದ ಯದುವಂಶ ಕುಡಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 11:39 IST
Last Updated 11 ಡಿಸೆಂಬರ್ 2013, 11:39 IST
ನಂದಿದ ಯದುವಂಶ ಕುಡಿ
ನಂದಿದ ಯದುವಂಶ ಕುಡಿ   

ಬೆಂಗಳೂರು: ಮೈಸೂರು ರಾಜ­ಮನೆ­ತನವಾದ ಯದುವಂಶದ ಕೊನೆಯ ಕುಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಶ್ರೀಕಂಠ­ದತ್ತ ನರಸಿಂಹರಾಜ ಒಡೆಯರ್ (60) ಅವರು ನಗರದ ವಿಕ್ರಮ್‌ ಆಸ್ಪತ್ರೆ­ಯಲ್ಲಿ ಮಂಗಳವಾರ ಮಧ್ಯಾಹ್ನ ಹೃದಯಾ­ಘಾತದಿಂದ ನಿಧನರಾದರು.

ಕೆಲದಿನಗಳಿಂದ ಅಸ್ವಸ್ಥರಾಗಿದ್ದ ಅವರು ನಗರದ ಜಯಮಹಲ್‌ ಅರಮನೆಯಲ್ಲಿ ವಿಶ್ರಾಂತಿ ಪಡೆ­ಯು­ತ್ತಿ­ದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಅವರಿಗೆ ಹೃದಯಾ­ಘಾತ­ವಾಯಿತು. ಕೂಡಲೇ ಅವರನ್ನು ವಸಂತನಗರದ ವಿಕ್ರಮ್‌ ಆಸ್ಪತ್ರೆಗೆ ದಾಖಲಿಸಲಾಯಿತು. 3.30ಕ್ಕೆ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದರು.

‘ಅವರನ್ನು ಆಸ್ಪತ್ರೆಗೆ ಕರೆ­ತಂದಾ­ಗಲೇ ಅವರ ಉಸಿರಾಟ ನಿಂತಿತ್ತು. ಕೂಡಲೇ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಿ ಚಿಕಿತ್ಸೆ ಆರಂಭಿಸ­ಲಾಯಿತು. ಹೃದ್ರೋಗ ತಜ್ಞರ ತಂಡ ಸುಮಾರು ಒಂದೂವರೆ ಗಂಟೆ ಚಿಕಿತ್ಸೆ ನಡೆಸಿತು. ಆದರೆ ಪ್ರಯೋಜನ­ವಾಗಲಿಲ್ಲ ಎಂದು ಆಸ್ಪತ್ರೆ ವೈದ್ಯ ಡಾ.ಮದನ್‌ ತಿಳಿಸಿದರು.

‘15 ದಿನಗಳ ಹಿಂದೆ ಎದೆನೋವಿನ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಲಘು ಹೃದಯಾ­ಘಾತವಾಗಿದ್ದ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಚೇತರಿಕೆ ಕಂಡ ಬಳಿಕ ಅವರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು’ ಎಂದು ಹೇಳಿದರು.

ಒಡೆಯರ್‌ ಪತ್ನಿ ಪ್ರಮೋದಾದೇವಿ ಸಂಜೆ 5.15ರ ವೇಳೆಗೆ ಆಸ್ಪತ್ರೆಗೆ ಬಂದರು. ಅವರ ಹಿಂದೆಯೇ ಕುಟುಂಬ ಸದಸ್ಯರು, ಕುಟುಂಬದ ಆಪ್ತರು ಆಸ್ಪತ್ರೆಗೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ರಾತ್ರಿ 9 ಗಂಟೆಗೆ ವಿಶೇಷ ವಾಹನದಲ್ಲಿ ಪಾರ್ಥಿವ ಶರೀರವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಯಿತು.


ಆಸ್ಪತ್ರೆ ಎದುರು ಜಮಾಯಿಸಿದ ಜನ: ಒಡೆಯರ್‌ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಆಸ್ಪತ್ರೆಯ ಎದುರು ಜಮಾಯಿಸಿದರು. ಸಂಜೆ 4 ಗಂಟೆ ನಂತರ ಮಿಲ್ಲರ್ಸ್‌ ರಸ್ತೆಯಲ್ಲಿ ಅಲಿಅಕ್ಬರ್‌ ರಸ್ತೆ ಮತ್ತು ಕನ್ನಿಂಗ್‌ಹ್ಯಾಮ್‌ ರಸ್ತೆ ನಡುವೆ ಸಂಚಾರ ನಿರ್ಬಂಧಿಸಲಾಗಿತ್ತು.

ಪ್ರಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬರುವ ಕುಟುಂಬ ಸದಸ್ಯರು ಹಾಗೂ ಗಣ್ಯವ್ಯಕ್ತಿಗಳಿಗೆ ಮಾತ್ರ ಆಸ್ಪತ್ರೆಗೆ ಪ್ರವೇಶ ನೀಡಲಾಯಿತು. ಆಸ್ಪತ್ರೆಯ ಪ್ರವೇಶದ್ವಾರದ ಎದುರು ಬ್ಯಾರಿಕೇಡ್‌­ಗಳನ್ನು ಹಾಕಿದ್ದ ಪೊಲೀಸರು ಜನದಟ್ಟಣೆ­ಯನ್ನು ನಿಯಂತ್ರಿಸಲು ಕಷ್ಟಪಟ್ಟರು.

ಇಂದು ಸರ್ಕಾರಿ ರಜೆ, 2 ದಿನ ಶೋಕ
ಒಡೆಯರ್‌ ಗೌರವಾರ್ಥ ರಾಜ್ಯ ದಾದ್ಯಂತ ಬುಧ­ವಾರ (ಡಿ. 11) ರಾಜ್ಯ ಸರ್ಕಾರಿ ಕಚೇರಿ­ಗಳು ಮತ್ತು ಶಾಲಾ– ಕಾಲೇಜು­ಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಬ್ಯಾಂಕುಗಳಿಗೆ ರಜೆ ಇರು­ವುದಿಲ್ಲ. ಬುಧವಾರ ಮತ್ತು ಗುರು­ವಾರ  ಶೋಕಾ­ಚರಣೆ ಇರು ತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮನರಂಜನಾ ಕಾರ್ಯಕ್ರ ಗಳನ್ನು ರದ್ದುಪಡಿಸ ಲಾಗಿದೆ ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT