ADVERTISEMENT

ನಮ್ಮದು ಕೆಲಸ ಮಾಡುವ ಸರ್ಕಾರ: ಸಿದ್ದರಾಮಯ್ಯ

‘ಮನ್‌ ಕಿ ಬಾತ್‌’ಗೆ ಪರ್ಯಾಯವಾಗಿ ‘ಕಾಮ್‌ ಕಿ ಬಾತ್’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:00 IST
Last Updated 2 ಅಕ್ಟೋಬರ್ 2017, 19:00 IST
ನಮ್ಮದು ಕೆಲಸ ಮಾಡುವ ಸರ್ಕಾರ:  ಸಿದ್ದರಾಮಯ್ಯ
ನಮ್ಮದು ಕೆಲಸ ಮಾಡುವ ಸರ್ಕಾರ: ಸಿದ್ದರಾಮಯ್ಯ   

ಬೆಂಗಳೂರು: ‘ನಮ್ಮದು ಬರೀ ಮಾತನಾಡುವ ಸರ್ಕಾರವಲ್ಲ. ಕೆಲಸ ಮಾಡುವ ಸರ್ಕಾರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಆವರಣದಲ್ಲಿರುವ ಮಹಾತ್ಮಾಗಾಂಧಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಪ್ರತಿಮೆಗಳಿಗೆ ಸೋಮವಾರ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ‘ಮನ್‌ ಕಿ ಬಾತ್’ ಕಾರ್ಯಕ್ರಮದಲ್ಲಿ ಕೇವಲ ಮನದ ಮಾತುಗಳನ್ನಷ್ಟೇ ಹೇಳುತ್ತಾರೆ. ಆದರೆ ನಾವು ಮಾಡಿರುವ ಜನಪರ ಕಾರ್ಯಗಳನ್ನು ಜನರಿಗೆ ಮುಟ್ಟಿಸುವುದಕ್ಕಾಗಿ ‘ಕಾಮ್‌ ಕಿ ಬಾತ್’ ಯೋಜನೆ ರೂಪಿಸಲಾಗಿದೆ ಎಂದರು.

ADVERTISEMENT

‘ಕಾಮ್‌ ಕಿ ಬಾತ್ ಹಿಂದಿ ಪದ ಅಲ್ಲವೇ’ ಎಂಬ ಪ್ರಶ್ನೆಗೆ, ‘ಬಸ್ಸು, ಕಾರು ಇವುಗಳಿಗೆ ಪರ್ಯಾಯ ಕನ್ನಡ ಪದ ಇವೆಯೇ? ಇಂಗ್ಲಿಷ್ ಪದಗಳಿಗೆ ಅರ್ಥ ಸಿಗದಿದ್ದರೆ ‘ಉ’ ಕಾರ ಸೇರಿಸಿ ಎಂದು ಕುವೆಂಪು ಹೇಳಿದ್ದರು. ಅದೇ ರೀತಿ ಹಿಂದಿಗೆ ಪರ್ಯಾಯ ಪದ ಹುಡುಕಿದ್ದೇವೆ’ ಎಂದರು.

‘ಗಾಂಧೀಜಿ ಕೇವಲ ಭಾರತಕ್ಕಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ನಾಯಕರು. ಯುದ್ಧ ಮಾಡದೆ ಕೇವಲ ಶಾಂತಿ ಮತ್ತು ಅಹಿಂಸೆಯಿಂದಲೇ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಒಬ್ಬ ಮತಾಂಧನಿಗೆ ಅವರು ಬಲಿಯಾಗಿದ್ದು ದುರದೃಷ್ಟಕರ. ಈಗಿನ ಪರಿಸ್ಥಿತಿಯಲ್ಲಿ ಅವರ ತತ್ವ ಮತ್ತು ಆದರ್ಶಗಳು ಅನಿವಾರ್ಯವಾಗಿವೆ’ ಎಂದು ಹೇಳಿದರು.

**

ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ

‘ಆಸ್ಪತ್ರೆಗೆ ಬಂದು ನನ್ನನ್ನು ಭೇಟಿ ಮಾಡುವ ಬದಲು ಸಮಸ್ಯೆಲ್ಲಿರುವ ಜನರನ್ನು ಭೇಟಿ ಮಾಡಿದ್ದರೆ ಹೆಚ್ಚು ಸಂತೋಷವಾಗುತ್ತಿತ್ತು’ ಎಂದು ಜೆಡಿಎಸ್ ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

‘ಕುಮಾರಸ್ವಾಮಿ ಅವರನ್ನು ಸೌಜನ್ಯಕ್ಕಾಗಿ ಭೇಟಿ ನೀಡಿದ್ದೆ. ಈ ಬಗ್ಗೆ ಏನೂ ಮಾತನಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.