ADVERTISEMENT

ನರ್ಸಿಂಗ್‌ನಲ್ಲೂ ಪಿಎಚ್‌.ಡಿಗೆ ಅವಕಾಶ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ರವೀಂದ್ರನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
ಡಾ.ಕೆ.ಎಸ್‌.ರವೀಂದ್ರನಾಥ್‌
ಡಾ.ಕೆ.ಎಸ್‌.ರವೀಂದ್ರನಾಥ್‌   

ಬೆಂಗಳೂರು: ‘ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (ಆರ್‌ಜಿಯುಎಚ್‌ಎಸ್‌) ಪ್ರಸಕ್ತ ಸಾಲಿನಿಂದ ನರ್ಸಿಂಗ್‌ ವಿಷಯದಲ್ಲಿ ಪಿಎಚ್‌.ಡಿ ಹಾಗೂ ಎಂ.ಡಿ. ನ್ಯೂಟ್ರಿಷನ್‌ ಕೋರ್ಸ್‌ ಆರಂಭಿಸಲಾಗುತ್ತಿದೆ’ ಎಂದು  ಕುಲಪತಿ ಡಾ.ಕೆ.ಎಸ್‌.ರವೀಂದ್ರನಾಥ್‌ ಹೇಳಿದರು.

ಅವರ ಅವಧಿ ಜುಲೈ 14ಕ್ಕೆ ಕೊನೆಗೊಳ್ಳುತ್ತಿದೆ. ಮೂರು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಲು ಅವರು ಪತ್ರಿಕಾಗೋಷ್ಠಿ ಕರೆದಿದ್ದರು.

‘ಭಾರತೀಯ ನರ್ಸಿಂಗ್‌ ಪರಿಷತ್‌ ಹಾಗೂ ನಿಮ್ಹಾನ್ಸ್‌ ಸಹಯೋಗದಲ್ಲಿ ನರ್ಸಿಂಗ್‌ನಲ್ಲೂ ಪಿಎಚ್‌.ಡಿಗೆ ಅವಕಾಶ ನೀಡಲಾಗುತ್ತಿತ್ತು. ಈ ವರ್ಷದಿಂದ ವಿ.ವಿ.ಯಿಂದಲೇ ಪಿಎಚ್‌.ಡಿ ಪದವಿಗೆ ಪ್ರವೇಶ ನೀಡುತ್ತಿದ್ದೇವೆ. ಇದಕ್ಕೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಶೇ 50ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮಾರ್ಗದರ್ಶಕರ ಲಭ್ಯತೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಈ ವರ್ಷದಿಂದ ಎಂ.ಡಿ. ನ್ಯೂಟ್ರಿಷನ್‌ ಕೋರ್ಸ್‌ ಆರಂಭಿಸಲಾಗುತ್ತಿದೆ. ಇದು ಮೂರು ವರ್ಷಗಳ ಸ್ನಾತಕೋತ್ತರ ಕೋರ್ಸ್‌ ಆಗಿದೆ. ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಪದವಿ (ಬಿಎನ್‌ವೈಎಸ್‌) ಪಡೆದವರು ಅರ್ಜಿ ಸಲ್ಲಿಸಬಹುದು’ ಎಂದರು.

‘ಎಂಬಿಬಿಎಸ್‌ ಮೊದಲ ವರ್ಷದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಬ್ಯಾಚ್‌ ಮಾಡಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಇದರಿಂದ ಅವರಿಗೆ ಕೀಳರಿಮೆ ಬರುತ್ತಿತ್ತು. ಹೀಗಾಗಿ ಈ ಪದ್ಧತಿಯನ್ನು ರದ್ದುಪಡಿಸುತ್ತಿದ್ದೇವೆ. ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಲೇ ಮೊದಲ ವರ್ಷದ ವಿಷಯಗಳನ್ನು ಪಾಸು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಐದು ಕಾಲೇಜುಗಳಿಂದ ಅರ್ಜಿ: ‘ವಿ.ವಿ.ಯಿಂದ 650 ಕಾಲೇಜುಗಳು ಹಾಗೂ ಸಂಸ್ಥೆಗಳು ತಾತ್ಕಾಲಿಕ ಸಂಯೋಜನೆ ಪಡೆದಿವೆ. ಶಾಶ್ವತ ಸಂಯೋಜನೆಗಾಗಿ ಅರ್ಜಿ ಆಹ್ವಾನಿಸಿದ್ದು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಆರ್‌.ವಿ. ದಂತ ಮಹಾವಿದ್ಯಾಲಯ, ಧಾರವಾಡದ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು,  ಆದಿಚುಂಚನಗಿರಿಯ ಫಾರ್ಮಸಿ ಕಾಲೇಜು ಹಾಗೂ ಆಚಾರ್ಯ ಫಾರ್ಮಸಿ ಕಾಲೇಜುಗಳು ಅರ್ಜಿ ಸಲ್ಲಿಸಿವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳೂ ಅರ್ಜಿ ಸಲ್ಲಿಸಲಿವೆ. ಪರಿಶೀಲನೆ ನಡೆಸಿ ನಿಯಮಾನುಸಾರ ಸಂಯೋಜನೆ ನೀಡುತ್ತೇವೆ’ ಎಂದರು.

‘ಸಂಯೋಜಿತ ಕಾಲೇಜುಗಳು  ಮಾರ್ಗಸೂಚಿಗಳನ್ನು ಅನುಸರಿಸುತ್ತಿವೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ವಿ.ವಿ.ಯು ತನ್ನ ನಾಮನಿರ್ದೇಶಿತರನ್ನು ಆಡಳಿತ ಮಂಡಳಿಗಳ ಸದಸ್ಯರನ್ನಾಗಿ ನೇಮಕ ಮಾಡಿದೆ’ ಎಂದು ಹೇಳಿದರು.

‘ಬೆಳಗಾವಿಯ ಕನ್ನಡ ಬಳಗ ಸೊಸೈಟಿಯ ಗ್ರಾಮೀಣ ಆಯುರ್ವೇದ ಕಾಲೇಜಿನಲ್ಲಿ ಮೂಲಸೌಕರ್ಯ, ಸಿಬ್ಬಂದಿ ಇಲ್ಲ. ಈ ಕಾಲೇಜಿನ ಸಂಯೋಜನೆಯನ್ನು ರದ್ದುಪಡಿಸಲಾಗಿದೆ’ ಎಂದು ತಿಳಿಸಿದರು.

‘ಎಂ.ಡಿ, ಎಂ.ಎಸ್‌ ಮುಗಿಸಿದವರಿಗೆ ಕೌಶಲ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಈವರೆಗೆ 32 ಫೆಲೋಶಿಪ್‌ ಕಾರ್ಯಕ್ರಮಗಳನ್ನು ನಡೆಸಲಾಗಿದೆ’ ಎಂದರು. ‘ಪ್ರತಿ ಕೋರ್ಸ್‌ನಲ್ಲೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದಕ್ಕಾಗಿ ₹5 ಕೋಟಿ ಕಾರ್ಪಸ್‌ ನಿಧಿ ಮೀಸಲಿಡಲಾಗಿದೆ’ ಎಂದು ತಿಳಿಸಿದರು.
*
‘ರಾಮನಗರ: ಮೂಲಸೌಕರ್ಯಕ್ಕೆ ಟೆಂಡರ್‌’
‘ಆರೋಗ್ಯ ವಿ.ವಿಯನ್ನು ರಾಮನಗರದ ಕಂದಾಯ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುತ್ತಿದೆ. ನಮಗೆ 1.50 ಲಕ್ಷ ಚದರ ಅಡಿ ಜಾಗ ಬೇಕು. ಆದರೆ, ಕಂದಾಯ ಭವನದಲ್ಲಿ 68 ಸಾವಿರ ಚದರ ಅಡಿ ಜಾಗವಿದೆ. ಈಗ ಆ ಭವನದಲ್ಲಿ 5–6 ಕಚೇರಿಗಳಿದ್ದು, ಅವುಗಳನ್ನು ಸ್ಥಳಾಂತರ ಮಾಡಬೇಕು. ವಿ.ವಿ.ಯ ಎಂಜಿನಿಯರಿಂಗ್‌ ವಿಭಾಗದವರು ಈಗಾಗಲೇ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ₹5 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಟೆಂಡರ್‌ ಕರೆದಿದ್ದೇವೆ’ ಎಂದು ಡಾ.ರವೀಂದ್ರನಾಥ್‌ ತಿಳಿಸಿದರು.

‘ವಿ.ವಿ. ಸ್ಥಳಾಂತರಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ರಾಮನಗರಕ್ಕೆ ವಿ.ವಿ. ಸ್ಥಳಾಂತರ ಮಾಡಿ ಎಂದು ರಾಜಕಾರಣಿಗಳು ಹೇಳಿದ್ದರೇ ಹೊರತು, ಒತ್ತಡ ಹಾಕಿರಲಿಲ್ಲ. ಎಲ್ಲ ಸಿದ್ಧತೆ ಮಾಡಿಕೊಂಡು ಸ್ಥಳಾಂತರ ಮಾಡಲಾಗುತ್ತದೆ’ ಎಂದರು.
*
‘ಕುಲಪತಿಯಾಗಿ ಎರಡನೇ ಅವಧಿಗೆ ಮುಂದುವರಿಯುವ ಆಸೆ ಇಲ್ಲ. ಮಾತೃ ಸಂಸ್ಥೆಯಾದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಬೋಧಕ, ವೈದ್ಯನಾಗಿ ಮುಂದುವರಿಯುವೆ.
ಡಾ.ಕೆ.ಎಸ್‌.ರವೀಂದ್ರನಾಥ್‌
ಕುಲಪತಿ, ಆರ್‌ಜಿಯುಎಚ್‌ಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT