ADVERTISEMENT

ನಾನೊಬ್ಬ ರಾಜಕೀಯ ಕಾರ್ಯಕರ್ತ: ಹಿರೇಮಠ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:40 IST
Last Updated 16 ಡಿಸೆಂಬರ್ 2013, 19:40 IST

ಬಳ್ಳಾರಿ: ‘ನಾನು ಸಾಮಾಜಿಕ ಕಾರ್ಯಕರ್ತನಲ್ಲ. ಬದಲಿಗೆ, ಅಪ್ಪಟ ರಾಜಕೀಯ ಕಾರ್ಯಕರ್ತ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಸೋಮವಾರ ಇಲ್ಲಿ ತಿಳಿಸಿದರು.

‘ರಾಜಕೀಯ ಚಳವಳಿಗಳ ಬಗ್ಗೆ ನನಗೆ ಒಲವು ಇದೆ. ಆದರೆ ರಾಜಕೀಯ ಪಕ್ಷಗಳ ಬಗ್ಗೆ ಆಸಕ್ತಿ ಇಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌, ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರಿಂದ ಪ್ರೇರೇಪಿತನಾಗಿ ಚಳವಳಿಗೆ ಇಳಿದಿದ್ದೇನೆ’ ಎಂದು ಅವರು ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದರು.

‘ದೆಹಲಿಯಲ್ಲಿ ಹೊಸದಾಗಿ ರೂಪು­ಗೊಂಡಿರುವ ಅರವಿಂದ್‌ ಕೇಜ್ರಿವಾಲ್ ನೇತೃತ್ವದ  ಆಮ್‌ ಆದ್ಮಿ ಪಕ್ಷ ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ
ಚುನಾ­ವಣೆಯಲ್ಲಿ ಗೆಲುವು ಸಾಧಿಸಿರುವುದು ಅಭಿನಂದನೀಯ ಎಂದ ಅವರು, ಆರಂಭಿಕ ಹಂತದಲ್ಲೇ ಉತ್ತಮ ಫಲಿತಾಂಶ ಗಳಿಸಿರುವ ಆ ಪಕ್ಷಕ್ಕೆ ನನ್ನ ಬೆಂಬಲ ಇದೆ’ ಎಂದು ಹೇಳಿದರು.

ನ್ಯಾಯಾಲಯಕ್ಕೆ ಹೋಗುವುದಿಲ್ಲ: ‘ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅಳಿಯ ಸಿದ್ಧಾರ್ಥ ಬೆಂಗಳೂರು ಹೊರ ವಲಯದಲ್ಲಿರುವ ಬಿಡಿಎ ಒಡೆತನದ 1.39 ಎಕರೆ ಜಮೀನು ಕಬಳಿಕೆ ಆರೋಪಕ್ಕೆ ನ್ಯಾಯಾಲಯದ ಮೊರೆ ಹೋಗುವಂತೆ ಕೃಷ್ಣ ಸಲಹೆ ಮಾಡಿದ್ದಾರೆ. ಆದರೆ, ಕಾರ್ಯಾಂಗವು ಅಕ್ರಮದ ಬಗ್ಗೆ ಗಮನ ಹರಿಸಬೇಕಿದೆ. ಕಾರ್ಯಾಂಗದ ಮೇಲಿನ ನಂಬಿಕೆ ದೂರವಾಗದಿರಲಿ ಎಂಬ ಉದ್ದೇಶ­ದಿಂದಲೇ ನಾನು ನ್ಯಾಯಾಲಯದ ಮೊರೆ ಹೋಗದಿರಲು ನಿರ್ಧರಿಸಿದ್ದೇನೆ’ ಎಂದರು.

‘ಭೂ ಕಬಳಿಕೆ ಕುರಿತಂತೆ, ಸಾಮಾನ್ಯ ನಾಗರಿಕನಾಗಿ ನಾನು ಸಂವಿಧಾನದ ಹಕ್ಕಿಗೆ ಅನುಗುಣವಾಗಿ ದನಿ ಎತ್ತಿದ್ದೇನೆ. ಆ ಹಕ್ಕಿನ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಕರ್ತವ್ಯ ಕಾರ್ಯಾಂಗ­ದ್ದಾಗಿದೆ ಎಂದು ಅವರು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.