ADVERTISEMENT

ನಾಯಿಗೆ ಬಿಸ್ಕಿಟ್ ಹೇಳಿಕೆಗೆ ಸಂಸದ ವಿಶ್ವನಾಥ್ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ಮೈಸೂರು: ಬೀದಿ ನಾಯಿಗಳಿಗೆ ಬಿಸ್ಕಿಟ್ ಹಾಕುವೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ನೀಡಿರುವ ಹೇಳಿಕೆ ಸಮಸ್ತ ರಾಜಕಾರಣಿಗಳಿಗೆ ಮಾಡಿದ ಅವಮಾನ ಎಂದು ಸಂಸದ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸದಾನಂದ ಗೌಡ ಈಗ ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಈ ಹೇಳಿಕೆಯನ್ನು ಅವರು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ಜೀವನದಲ್ಲಿ ಟೀಕೆ-ಟಿಪ್ಪಣೆಗಳು ಸಾಮಾನ್ಯ. ಇದನ್ನು ಅರಿತಿದ್ದೂ ನಾಯಕರಾದವರು ಇಂಥ ಮಾತುಗಳನ್ನು ಆಡುವುದು ಸಾರ್ವಜನಿಕ ಸೇವಾ ಕ್ಷೇತ್ರಕ್ಕೇ ಅಪಚಾರ ಮಾಡಿದಂತೆ ಎಂದು ಅವರು ಹೇಳಿದರು.

ಮಂಜುಳಾ ರಾಜೀನಾಮೆ ನೀಡಲಿ: `ಮಾರ್ನಿಂಗ್ ಮಿಸ್ಟ್~ ಹೋಂಸ್ಟೇ ಪ್ರಕರಣದಲ್ಲಿ ಪೊಲೀಸ್ ವರದಿಗಳು ಸ್ಪಷ್ಟವಾಗಿ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದರೂ, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳಾ ವ್ಯತಿರಿಕ್ತ ವರದಿ ನೀಡಿರುವುದು ಹೊಡೆಸಿಕೊಂಡವರಿಗೇ ಮತ್ತೆ ಶಿಕ್ಷೆ ಕೊಟ್ಟಂತಿದೆ. ತಪ್ಪು ವರದಿ ನೀಡಿರುವ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳು ಸಂಘ ಪರಿವಾರದ ಕೈಗೆ ಸಿಕ್ಕು ನರಳುತ್ತಿವೆ. ಕಲ್ಲಡ್ಕ ಪ್ರಭಾಕರ್ ಭಟ್ಟರೇ ಅಲ್ಲಿಯ ಸರ್ಕಾರವಿದ್ದಂತೆ. ಮುಖ್ಯಮಂತ್ರಿಯಾಗಲೀ ಗೃಹಮಂತ್ರಿಗಳಿಗಾಗಲೀ ಅವರ ವಿರುದ್ಧ ಮಾತನಾಡುವ ತಾಕತ್ತು ಇಲ್ಲ. ಇನ್ನು ಉಸ್ತುವಾರಿ ಸಚಿವರೂ ಅಂಥವರೇ ಆಗಿರುವಾಗ ನ್ಯಾಯ ಸಿಗುತ್ತದೆಯೇ ಎಂದು ಟೀಕಿಸಿದರು. ಕೋಮು ಗಲಭೆಯೆಬ್ಬಿಸುವುದೇ ಬಿಜೆಪಿಯ ಚುನಾವಣಾ ತಯಾರಿ ಎಂದೂ ಅಭಿಪ್ರಾಯಪಟ್ಟರು.

ಗ್ರಾಮ ವಾಸ್ತವ್ಯದ ಹರಿಕಾರ ಎಂದು ಹೇಳಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೀಘ್ರದಲ್ಲೇ ಜೈಲು ವಾಸ್ತವ್ಯಕ್ಕೂ ಸಿದ್ಧರಾಗಲಿ ಎಂದು ವ್ಯಂಗ್ಯವಾಡಿದ ವಿಶ್ವನಾಥ್, ಈಗಾಗಲೇ ಅವರ ಸಹೋದರ ಬಾಲಕೃಷ್ಣೇ ಗೌಡರು ಲೋಕಾಯುಕ್ತ ದಾಳಿಗೆ ಸಿಲುಕಿದ್ದಾರೆ. ಕಾನೂನು ಪಾಲಿಸದ ಎಚ್‌ಡಿಕೆ ಅವರಿಗೂ ಇದು ತಪ್ಪಿದ್ದಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.