ADVERTISEMENT

ನಾಳೆಯಿಂದಲೇ ಬಿಜೆಪಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST

ಬೆಂಗಳೂರು: ಇದೇ 8ರಂದು (ಸೋಮವಾರ) ನಗರದಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲೇ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೂ ಚಾಲನೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಶನಿವಾರ ಇಲ್ಲಿ ತಿಳಿಸಿದರು.

ಅರಮನೆ ಮೈದಾನದಲ್ಲಿ ಸಮಾವೇಶಕ್ಕೆ ನಡೆದಿರುವ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯದ ವಿವಿಧೆಡೆ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶಗಳನ್ನು ನಡೆಸಲಾಯಿತು. ವ್ಯಾಪಕ ಜನಬೆಂಬಲ ಸಿಕ್ಕಿದೆ. ಅದರ ಸಮಾರೋಪ ಸಮಾರಂಭದಲ್ಲೇ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

`ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿಗಳ ಹಿನ್ನೆಲೆಯನ್ನು ಪರಿಶೀಲಿಸಿಯೇ ಟಿಕೆಟ್ ನೀಡಲಾಗಿದೆ. ಕೆಲವು ಕಡೆ ಅಸಮಾಧಾನ ಇದೆ. ಅದನ್ನು ಪರಿಹರಿಸಲಾಗುವುದು. ಕಾಂಗ್ರೆಸ್ಸಿನಂತೆ ನಮ್ಮದು ದೆಹಲಿಯಲ್ಲಿ ಸಿದ್ಧವಾದ ಪಟ್ಟಿ ಅಲ್ಲ. ಕಾರ್ಯಕರ್ತರು ಸಿದ್ಧಪಡಿಸಿದ ಪಟ್ಟಿ. ಭಿನ್ನಾಭಿಪ್ರಾಯಗಳನ್ನೂ ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಲಾಗುವುದು' ಎಂದರು.

ಹಲವು ಆರೋಪಗಳನ್ನು ಎದುರಿಸುತ್ತಿರುವವರಿಗೂ ಟಿಕೆಟ್ ನೀಡಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜೋಶಿ, `ಕಾನೂನಿನ ಅಂಶಗಳನ್ನು ಪರಿಗಣಿಸಿಯೇ ಟಿಕೆಟ್ ನೀಡಲಾಗಿದೆ' ಎಂದು ಸಮರ್ಥಿಸಿಕೊಂಡರು.

ಕಟ್ಟಾ, ಕೃಷ್ಣಯ್ಯ ಶೆಟ್ಟಿಗೆ ಟಿಕೆಟ್ ಖಚಿತ
ಬೆಂಗಳೂರು:
ಭೂಹಗರಣ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತ ಎನ್ನಲಾಗಿದೆ.

ಮೊದಲ ಪಟ್ಟಿಯಲ್ಲೇ ಇವರಿಗೆ ಟಿಕೆಟ್ ನೀಡಿದರೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ ಎನ್ನುವ ಕಾರಣಕ್ಕೆ ತಡೆಹಿಡಿಯಲಾಗಿದೆ. 2ನೇ ಪಟ್ಟಿಯಲ್ಲಿ ಇವರ ಹೆಸರು ಇರುತ್ತದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಇವರ ಬೆಂಬಲಿಗರು ಪಕ್ಷದ ಮುಖಂಡರಿಗೆ ದೂರವಾಣಿ ಕರೆ ಮಾಡಿ, ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ. ಗೆಲ್ಲುವ ಸಾಮರ್ಥ್ಯ ಆಧರಿಸಿ ಕೃಷ್ಣಯ್ಯ ಶೆಟ್ಟಿ ಮತ್ತು ಕಟ್ಟಾ ಅವರಿಗೆ ಟಿಕೆಟ್ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಹಾಲಿ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯರಿಂದ ವಿರೋಧ ಇದೆ. ಮತ್ತೊಂದು ಸುತ್ತಿನ ಮಾತುಕತೆ ಮೂಲಕ ಸ್ಥಳೀಯರ ಮನವೊಲಿಸುವ ಪ್ರಯತ್ನ ನಡೆಯಲಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT