ADVERTISEMENT

ನಿಗೂಢ ರೋಗ: ಲಂಬಾಣಿ ತಾಂಡಾಗಳಲ್ಲಿ ಅಂಗವೈಕಲ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 19:00 IST
Last Updated 17 ಏಪ್ರಿಲ್ 2011, 19:00 IST
ನಿಗೂಢ ರೋಗ: ಲಂಬಾಣಿ ತಾಂಡಾಗಳಲ್ಲಿ ಅಂಗವೈಕಲ್ಯ
ನಿಗೂಢ ರೋಗ: ಲಂಬಾಣಿ ತಾಂಡಾಗಳಲ್ಲಿ ಅಂಗವೈಕಲ್ಯ   

ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಜ್ಯೋತಿಪುರ, ಗಾಂಧಿನಗರ ಲಂಬಾಣಿ ತಾಂಡಾಗಳಲ್ಲಿ ಮೂರು ದಶಕಗಳಿಂದಲೂ ಒಂದಲ್ಲ ಒಂದು ಕುಟುಂಬಕ್ಕೆ ಅಂಗವೈಕಲ್ಯ ಶಾಪವಾಗಿ ಕಾಡುತ್ತಿದೆ. ಅಂಗವಿಕಲತೆ ಬರಲು ಕಾರಣ ಗೊತ್ತಾಗದಿರುವುದರಿಂದ ನಿವಾಸಿಗಳು ಕಂಗಾಲಾಗಿದ್ದಾರೆ.

ದಾವಣಗೆರೆ-ಬಳ್ಳಾರಿ ಗಡಿಭಾಗದಲ್ಲಿ ಅಂದರೆ, ರಾಷ್ಟ್ರೀಯ ಹೆದ್ದಾರಿ-4ರಿಂದ ಸುಮಾರು ನಾಲ್ಕೈದು ಕಿ.ಮೀ. ಸಾಗಿದರೆ ಈ ತಾಂಡಾಗಳು ಸಿಗುತ್ತವೆ. ಇಲ್ಲಿನ ಯಾರ ಮನೆಯಲ್ಲಾದರೂ ಹೆರಿಗೆಯಾಯಿತೆಂದರೆ ಜನ ಮೊದಲು ಹಸುಗೂಸಿನ ಅಂಗಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುವಷ್ಟರ ಮಟ್ಟಿಗೆ ಅಂಗವೈಕಲ್ಯ  ಭೀತಿ ಮೂಡಿಸಿದೆ.

ಕೆಲವು ಮಕ್ಕಳು ಹುಟ್ಟುತ್ತಲೇ ಅಂಗವೈಕಲ್ಯರಾಗಿದ್ದರೆ; ಹಲವು ಹುಟ್ಟಿದ ಮೂರ್ನಾಲ್ಕು ವರ್ಷಗಳಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಶಿವಕುಮಾರ ನಾಯ್ಕ (21), ಸತೀಶ್ ನಾಯ್ಕ (22), ತಿಪ್ಪೇಶ್ (28), ಪ್ರಶಾಂತ, ಯಶವಂತಕುಮಾರ್ (4) -ಹೀಗೆ ಜ್ಯೋತಿಪುರ, ಗಾಂಧಿನಗರ ಲಂಬಾಣಿ ತಾಂಡಾದಲ್ಲಿನ ಅಂಗವೈಕಲ್ಯವುಳ್ಳ ಮಕ್ಕಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎರಡೂ ಗ್ರಾಮದಲ್ಲಿ ಹುಡುಕುತ್ತಾ ಹೋದರೆ ಕನಿಷ್ಠ 100ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ಪತ್ತೆಯಾಗುತ್ತಾರೆ.

ಕಿತ್ತು ತಿನ್ನುವ ಬಡತನದಿಂದಾಗಿ ಚಿಕಿತ್ಸೆ ಕೊಡಿಸಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಅನೇಕ ತಂದೆ-ತಾಯಿಗಳು ಕಣ್ಣೀರಲ್ಲಿ ಕಾಲದೂಡುತ್ತಿದ್ದಾರೆ. ಕೆಲವು ಮಕ್ಕಳು ಪಾಲಕರಿಂದ ತ್ಯಜಿಸಲ್ಪಟ್ಟು ದಾವಣಗೆರೆ, ಜಗಳೂರು, ಚಿತ್ರದುರ್ಗ ನಗರಗಳಲ್ಲಿ ಭಿಕ್ಷುಕ ವೃತ್ತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಉಳಿದ ಮಕ್ಕಳು ಸನಿಹದ ಕಾನಾಮಡಗು ಗ್ರಾಮದ ಶರಣ ಬಸವೇಶ್ವರ ಮಠದಲ್ಲಿ ಆಶ್ರಯ ಪಡೆದಿದ್ದಾರೆ. ಆಶ್ರಮವೊಂದರಲ್ಲೇ 50ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿದ್ದಾರೆ.

‘ಆರೋಗ್ಯವಂತ ಮಗುವಿನ ತಲೆ ದಿಢೀರನೆ ಕುಂಬಳಕಾಯಿ ಗಾತ್ರ ಬೆಳೆಯಿತು... ದಾವಣಗೆರೆ, ಬೆಂಗಳೂರು, ಮಣಿಪಾಲ್‌ನ ಹೈಟೆಕ್ ಆಸ್ಪತ್ರೆಗಳಿಗೆಲ್ಲಾ ಅಲೆದ್ವಿ... ಮಗುವಿನ ಆರೋಗ್ಯ ಸುಧಾರಣೆ ಆಗಲಿಲ್ಲ... ಇದ್ದ ಹೊಲ ಮಾರಿದ್ರೂ ಹುಡ್ಗ ಗುಣವಾಗಲಿಲ್ಲ... ಹಣ ಕಳಕೊಂಡು ಮನೆ ಹಾದಿ ಹಿಡಿದ್ವಿ...’ 22 ವರ್ಷಗಳಿಂದ ಜೀವಂತ ಶವದಂತಿರುವ ಸತೀಶ್‌ನಾಯ್ಕನ ಪೋಷಕರಾದ ನಾಗರಾಜ ನಾಯ್ಕ, ಹಂತಿಬಾಯಿ ಅವರ ನೋವಿನ ಮಾತಿದು.

 ಪಿಯು ಓದಿರುವ ಶಿವಕುಮಾರ ನಾಯ್ಕ ಆರೋಗ್ಯವಾಗಿದ್ದಾನೆ. ಆದರೆ, ಎರಡೂ ಕಾಲುಗಳು ಸೆಂಟಿ ಮೀಟರ್ ಗಾತ್ರ ಇವೆ! ನಾಲ್ಕು ಗಾಲಿಯ ಬೈಸಿಕಲ್ಲಿಗೆ ಹತ್ತಿ ಇಳಿಯಲು ಇನ್ನೊಬ್ಬರ ಆಧಾರ ಅನಿವಾರ್ಯ. ಇನ್ನು ನಾಲ್ಕು ವರ್ಷ ಯಶವಂತಕುಮಾರನ ಒಂದು ಕೈ ಸ್ವಾಧೀನವಿಲ್ಲದಂತಾಗಿದೆ.

ರೋಗಲಕ್ಷಣ ಒಂದು ರೀತಿಯಲ್ಲಿ ಪೋಲಿಯೊ ಅನ್ನಿಸಿದರೂ,ಪೋಲಿಯೊ ಅಲ್ಲ ಎಂದು ವೈದ್ಯರೂ ತಳ್ಳಿ ಹಾಕಿರುವುದಾಗಿ ವಿಕಲಾಂಗ ಮಕ್ಕಳ ತಂದೆ-ತಾಯಿ ಹೇಳುತ್ತಾರೆ. ಇದು ದೇವಿಯ ಕಾಟ ಇದ್ದೀತು ಎಂಬುದಾಗಿ ಹಲವರು ನಂಬಿದ್ದಾರೆ. ಹಾಗಾಗಿ, ಅನೇಕರ ಮನೆಗಳಲ್ಲಿ ರೋಗ ತಡೆಯಲು ಮತ್ತ ನಿವಾರಣೆಗಾಗಿ ವೈವಿಧ್ಯ ರೀತಿಯಲ್ಲಿ ಪೂಜೆ, ನೈವೇದ್ಯ, ಮಡಿವಂತಿಕೆಯ ಕಟ್ಟಳೆಗಳನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿಧಿಸುತ್ತಾರೆ.

 ಜ್ಯೋತಿಪುರ, ಗಾಂಧಿನಗರದಲ್ಲಿ ಅಂಗವಿಕಲ ಮಕ್ಕಳ ಪ್ರಮಾಣ ಹೆಚ್ಚಿರುವ ಜತೆಗೆ ಗಡಿ ಗ್ರಾಮಗಳಾದ ಅಣಬೂರು, ಕಾನಾಮಡಗು, ಕೆಚ್ಚೆನಹಳ್ಳಿ, ಬ್ಯಾಟಗಾರನಹಳ್ಳಿ, ದೊಡ್ಡಬೊಮ್ಮನಹಳ್ಳಿ, ಮರಿಕಟ್ಟೆ, ಕಾನನಕಟ್ಟೆ, ಹುಚ್ಚವ್ವನಹಳ್ಳಿ, ಕೊರಚರಹಟ್ಟಿಗಳಲ್ಲಿಯೂ ಅಂಗವಿಕಲ ಮಕ್ಕಳು ಹುಟ್ಟುತ್ತಲೇ ಇದ್ದಾರೆ. 

 ಇಲ್ಲಿನ ಜನರು ಬಳಸುವ ಕುಡಿಯುವ ನೀರಿನಲ್ಲಿ ಲೀಟರ್‌ಗೆ 2.4 ಮಿಲಿ ಗ್ರಾಂ. ಪ್ರಮಾಣದಲ್ಲಿ ಫ್ಲೋರೈಡ್ ಅಂಶ ಇದೆ ಎಂದು ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆ ವರದಿ ಮಾಡಿದೆ. ಆದರೆ, ಫ್ಲೋರೈಡ್‌ನಿಂದಾಗಿ ಹಲ್ಲು, ಮೂಳೆ ಸವೆತದಂತಹ ಕಾಯಿಲೆ ಕ್ರಮೇಣ ಕಾಣಿಸಿಕೊಳ್ಳುತ್ತದೆಯೇ ಹೊರತು, ದಿಢೀರ್ ಅಂಗವೈಕಲ್ಯ ಮತ್ತು ಅಂಗ ಸ್ವಾಧೀನ ಕಳೆದುಕೊಳ್ಳುವಂತಹ ರೋಗಕ್ಕೆ ಕಾರಣವಾಗುವುದಿಲ್ಲ ಎನ್ನುತ್ತಾರೆ ತಜ್ಞವೈದ್ಯರು. ಒಟ್ಟಿನಲ್ಲಿ ಅಧುನಿಕ ವೈದ್ಯಲೋಕಕ್ಕೆ ‘ಜ್ಯೋತಿಪುರ, ಗಾಂಧಿನಗರ’ ತಾಂಡಾಗಳು ಸವಾಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.