ADVERTISEMENT

ನಿಮ್ಹಾನ್ಸ್ ವ್ಯಾಪ್ತಿಗೆ ಧಾರವಾಡ ಆಸ್ಪತ್ರೆ: ಸಚಿವ ಎಸ್.ಎ.ರಾಮದಾಸ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಬೆಂಗಳೂರು: `ಧಾರವಾಡದ ಮಾನಸಿಕ ಆರೋಗ್ಯ ಆಸ್ಪತ್ರೆಯ ನಿರ್ವಹಣೆಯನ್ನು ನಿಮ್ಹಾನ್ಸ್‌ಗೆ ವಹಿಸಿಕೊಡಲು ಚಿಂತನೆ ನಡೆದಿದೆ~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

ನಿಮ್ಹಾನ್ಸ್ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ವಿಶ್ವ ಮಾನಸಿಕ ಆರೋಗ್ಯ ಸಪ್ತಾಹ~, `ಎಂಆರ್‌ಐ ಸೌಲಭ್ಯ ಕೇಂದ್ರ~, ಹಾಗೂ ಬಿಟಿಎಂ ಬಡಾವಣೆಯ `ಉತ್ತಮ ಬದುಕಿಗೆ ನಿಮ್ಹಾನ್ಸ್ ಕೇಂದ್ರ~ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರಾಜ್ಯದಲ್ಲಿ 36 ಲಕ್ಷ ಮಂದಿ ವಿವಿಧ ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದಾರೆ ಎಂಬುದು ಭೀತಿ ಹುಟ್ಟಿಸುವ ವಿಚಾರ. ನಿಮ್ಹಾನ್ಸ್‌ನಂತಹ ಉತ್ಕೃಷ್ಟ ಸಂಸ್ಥೆ ಇದ್ದರೂ ದೇಶದ ಅತಿ ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿರುವ ನಗರ ಎಂಬ ಅಪಖ್ಯಾತಿಯನ್ನು ಬೆಂಗಳೂರು ಹೊಂದಿದೆ. ಇತರೆ ರೋಗಿಗಳಂತೆ ಮಾನಸಿಕ ಅಸ್ವಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಸಂಸ್ಥೆಯೇ ಜನರ ಬಳಿಗೆ ಸಾಗಿ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಬೇಕಿದೆ~ ಎಂದು ಹೇಳಿದರು.

ADVERTISEMENT

ಸಪ್ತಾಹ ಹಾಗೂ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ ಕುಮಾರ್, `ನಗರದ ಉತ್ತರ ಭಾಗದಲ್ಲಿ ಹೊರವಲಯ ಘಟಕವನ್ನು ಸ್ಥಾಪಿಸಲು ನಿಮ್ಹಾನ್ಸ್ ಮುಂದಾಗಿರುವುದು ಉತ್ತಮ ಸಂಗತಿ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು~ ಎಂದರು.

ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ಡೀಮ್ಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸತೀಶ್‌ಚಂದ್ರ, ರಿಜಿಸ್ಟ್ರಾರ್ ಡಾ. ವಿ.ರವಿ ಮತ್ತಿತರರು ಉಪಸ್ಥಿತರಿದ್ದರು.

ಆಸ್ಪತ್ರೆಗಳ ನಡುವೆ ಬಸ್ ಸಂಪರ್ಕ:
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ ಕುಮಾರ್, `ನಗರದ ವಿಕ್ಟೋರಿಯಾ ಆಸ್ಪತ್ರೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೌರಿಂಗ್ ಆಸ್ಪತ್ರೆ ಇತ್ಯಾದಿ ಆರೋಗ್ಯ ಕೇಂದ್ರಗಳಿಗೆ ಶಟಲ್ ಬಸ್ ವ್ಯವಸ್ಥೆ ಒದಗಿಸುವ ಸಂಬಂಧ ಸಾರಿಗೆ ಸಚಿವರ ಜತೆ ಚರ್ಚೆ ನಡೆಸಲಾಗುವುದು. ನವೆಂಬರ್ 1ರ ವೇಳೆಗೆ ಈ ವ್ಯವಸ್ಥೆ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.

ಉತ್ತಮ ಬದುಕಿಗೆ `ನಿಮ್ಹಾನ್ಸ್ ಕೇಂದ್ರ~
ಬದಲಾಗುತ್ತಿರುವ ಜೀವನ ಶೈಲಿ, ನಗರೀಕರಣದ ಒತ್ತಡ, ಒತ್ತಡದ ನೌಕರಿ, ಒಂಟಿತನ ಮುಂತಾದ ಸಮಸ್ಯೆಗಳಿಗೆ ಪರಿಹಾರ ಬೇಕೆ? ಹಾಗಿದ್ದರೆ ನಗರದ ಬಿಟಿಎಂ ಬಡಾವಣೆಯಲ್ಲಿ ಆರಂಭಿಸಲಾಗಿರುವ ಉತ್ತಮ ಬದುಕಿಗೆ ನಿಮ್ಹಾನ್ಸ್ ಕೇಂದ್ರಕ್ಕೆ ಭೇಟಿ ನೀಡಿ. ಇಲ್ಲಿ ವರ್ತನೆ ವಿಧಾನ, ಒತ್ತಡ ನಿಭಾಯಿಸುವ ಕೌಶಲ್ಯ, ಹಾಗೂ ಧ್ಯಾನದ ಬಗ್ಗೆ ತಿಳುವಳಿಕೆ ನೀಡಲಾಗುವುದು. ಇಲ್ಲಿನ ಸಲಹಾ ಕೇಂದ್ರದಲ್ಲಿ (ಸಿಎಲ್‌ಪಿ) ವಾರಕ್ಕೆ ಎರಡು ಬಾರಿ ಮಾನಸಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಾದಕ ವಸ್ತು ವ್ಯಸನಿಗಳಿಗೆ ಕೂಡ ಚಿಕಿತ್ಸೆ, ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಂಬಂಧ ವೃದ್ಧಿ ಸೇವೆ ಒದಗಿಸಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಅಂಗವಿಕಲರು, ಚಿಕ್ಕಮಕ್ಕಳೊಂದಿಗೆ ಬದುಕುತ್ತಿರುವ ಮಹಿಳೆಯರು ಹಾಗೂ ಕುಟುಂಬದಿಂದ ದೂರ ಉಳಿದ ಮಹಿಳೆಯರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸಗಳನ್ನು ಕೇಂದ್ರ ಮಾಡಲಿದೆ. ಪೋಷಕರು,  ವಿದ್ಯಾರ್ಥಿಗಳಿಗೆ ಕೂಡ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ. ಸಂಪರ್ಕಿಸಬಹುದಾದ ವಿಳಾಸ: ನಂ 1/ಬಿ, ಮೊದಲನೇ ಘಟ್ಟ, 9ನೇ ಮುಖ್ಯರಸ್ತೆ, ಬಿಟಿಎಂ ಮೊದಲನೇ ಹಂತ, ಬೆಂಗಳೂರು 560019.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.