ADVERTISEMENT

ನಿವೇಶನ ರಹಿತರಿಂದ ಸರ್ಕಾರಿ ಜಾಗಕ್ಕೆ ಲಗ್ಗೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST
ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಲ್ಲಿರುವ ಸರ್ಕಾರಿ ಜಮೀನಿನಲ್ಲಿ ನಿವೇಶನ ರಹಿತ ಪರಿಶಿಷ್ಟ ಜಾತಿ, ಪಂಗಡದವರು ಸಿಪಿಎಂ ಮುಖಂಡರ ನೇತೃತ್ವದಲ್ಲಿ  ಶುಕ್ರವಾರ ಗುಡಿಸಲುಗಳನ್ನು ಹಾಕಿಕೊಂಡರು.
ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಲ್ಲಿರುವ ಸರ್ಕಾರಿ ಜಮೀನಿನಲ್ಲಿ ನಿವೇಶನ ರಹಿತ ಪರಿಶಿಷ್ಟ ಜಾತಿ, ಪಂಗಡದವರು ಸಿಪಿಎಂ ಮುಖಂಡರ ನೇತೃತ್ವದಲ್ಲಿ ಶುಕ್ರವಾರ ಗುಡಿಸಲುಗಳನ್ನು ಹಾಕಿಕೊಂಡರು.   

ಗೌರಿಬಿದನೂರು: ತಾಲ್ಲೂಕಿನ ಕಾದಲವೇಣಿ ಗ್ರಾಮದ ಸರ್ವೇ ನಂ. 188ರಲ್ಲಿರುವ 3 ಎಕರೆ 36 ಗುಂಟೆ ಸರ್ಕಾರಿ ಬೀಳು ಜಮೀನಿನಲ್ಲಿ ಗ್ರಾಮದ ನಿವೇಶನ ರಹಿತ ಪರಿಶಿಷ್ಟ ಜಾತಿ, ಪಂಗಡದ 100ಕ್ಕೂ ಹೆಚ್ಚು ಜನರು ಸಿಪಿಎಂ ಮುಖಂಡರ ನೇತೃತ್ವದಲ್ಲಿ   ಶುಕ್ರವಾರ ಗುಡಿಸಲುಗಳನ್ನು ಹಾಕಿಕೊಂಡರು.

ತಾಲ್ಲೂಕಿನಲ್ಲಿರುವ ಗೋಮಾಳ ಅಥವಾ ಸರ್ಕಾರಿ ಜಮೀನು ಗುರುತಿಸಿ, ವಾಸಯೋಗ್ಯವಾಗಿದ್ದರೆ ವಸತಿ ನಿರ್ಮಾಣಕ್ಕೆ ಇಲ್ಲವೇ ಭೂ ರಹಿತ ರೈತರಿಗೆ ಉಳುಮೆ ಮಾಡಲು ನೀಡಬೇಕು ಎಂಬ ನಿಯಮವಿದೆ. ಆದರೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಕಾದಲವೇಣಿ ಗ್ರಾಮದಲ್ಲಿರುವ ಸರ್ಕಾರಿ ಬೀಳು ಭೂಮಿಯನ್ನು ನಿವೇಶನಗಳನ್ನಾಗಿ ವಿಂಗಡಿಸಬೇಕು. ಗ್ರಾಮದ ವಸತಿ ರಹಿತರಿಗೆ ನೀಡಬೇಕು ಎಂದು ಸಿಪಿಎಂ ಮುಖಂಡರು ಆಗ್ರಹಿಸಿದರು.

ಗ್ರಾಮದ ಸುತ್ತಮುತ್ತ ಇರುವ ಸರ್ಕಾರಿ ಜಮೀನು ಗುರುತಿಸಿ ವಸತಿ ರಹಿತರಿಗೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಸರ್ಕಾರಿ ಜಮೀನು ಪತ್ತೆ ಹಚ್ಚಿ, ವಸತಿ ರಹಿತರಿಗೆ ನೀಡುವ ಉದ್ದೇಶ ಇದೆ ಎಂದು ಈಗಾಗಲೇ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೂ ಬೇಡಿಕೆ ಈಡೇರಿಲ್ಲ ಎಂದು ಮುಖಂಡರು ತಿಳಿಸಿದರು.

ಇಲ್ಲಿನ 3 ಎಕರೆ 36 ಗುಂಟೆ ಜಮೀನಿನ ಸ್ಥಳವನ್ನು ಜಿಲ್ಲಾಧಿಕಾರಿ ಪರಿಶೀಲಿಸಿ, ನಿವೇಶನಗಳನ್ನು ವಸತಿ ರಹಿತರಿಗೆ ಹಂಚಿ, ಹಕ್ಕುಪತ್ರಗಳನ್ನು ನೀಡಬೇಕು ಎಂದು ಸಿಪಿಎಂ ಮುಖಂಡ ಸಿದ್ದಗಂಗಪ್ಪ ಆಗ್ರಹಿಸಿದರು. ತಾಲ್ಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ರವಿಚಂದ್ರ ರೆಡ್ಡಿ, ತಾಲ್ಲೂಕು ಕೃಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ, ಕಾದಲವೇಣಿ ನಾಗರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.