ADVERTISEMENT

ನಿಷೇಧಾಜ್ಞೆ ಉಲ್ಲಂಘಿಸಿ ಹಿಂದೂ ಹಿತರಕ್ಷಣಾ ವೇದಿಕೆ ಪ್ರತಿಭಟನೆ: ನಳಿನ್‌, ಶೋಭಾ ಸೇರಿ 30 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 8:05 IST
Last Updated 7 ಜುಲೈ 2017, 8:05 IST
ಬಂಟ್ವಾಳ ಬಸ್‌ ನಿಲ್ದಾಣದ ಎದುರು ಹಿಂದೂ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅವರನ್ನು ಸಂಘ ಪರಿವಾರದ ಕಾರ್ಯಕರ್ತರು ಎತ್ತಿ ಹಿಡಿದಿರುವುದು. – ಪ್ರಜಾವಾಣಿ ಚಿತ್ರ
ಬಂಟ್ವಾಳ ಬಸ್‌ ನಿಲ್ದಾಣದ ಎದುರು ಹಿಂದೂ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅವರನ್ನು ಸಂಘ ಪರಿವಾರದ ಕಾರ್ಯಕರ್ತರು ಎತ್ತಿ ಹಿಡಿದಿರುವುದು. – ಪ್ರಜಾವಾಣಿ ಚಿತ್ರ   

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿರುವ ಬಂಟ್ವಾಳ ಬಸ್‌ ನಿಲ್ದಾಣದ ಎದುರು ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗೆ ಯತ್ನಿಸಿದ ಸಂಸದರಾದ ನಳಿನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಸುನೀಲ್‌ಕುಮಾರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್‌ ಕಾರ್ಣಿಕ್‌ ಸೇರಿದಂತೆ 30 ಜನರನ್ನು ಬಂಧಿಸಲಾಗಿದೆ. 800 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸರು ತಿಳಿಸಿದ್ದಾರೆ.

ಬಿ.ಸಿ.ರೋಡ್‌ನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಶರತ್‌ಕುಮಾರ್‌ ಎಂಬುವವರ ಮೇಲೆ ಮಂಗಳವಾರ ನಡೆದ ದಾಳಿಯನ್ನು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಈ ಪ್ರತಿಭಟನೆಗೆ ಕರೆನೀಡಿತ್ತು. ಬಂಟ್ವಾಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಸುಳ್ಯ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಸಂಘ ಪರಿವಾರದ ಕಾರ್ಯಕರ್ತರು ಈ ಪ್ರತಿಭಟನೆಗೆ ಬಂದಿದ್ದರು. ಮೂರು ಸಾವಿರಕ್ಕೂ ಹೆಚ್ಚು ಜನರು ಬಂಟ್ವಾಳ ಬಸ್‌ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಾವೇಶಗೊಂಡ ಕಾರಣದಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗೆ ಯತ್ನಿಸಿದ ಆರೋಪದ ಮೇಲೆ ನಳಿನ್‌ಕುಮಾರ್‌, ಶೋಭಾ, ಸುನೀಲ್‌ಕುಮಾರ್‌, ಗಣೇಶ್ ಕಾರ್ಣಿಕ್‌, ಬಿಜೆಪಿ ಮುಖಂಡರಾದ ಬಿ.ನಾಗರಾಜ ಶೆಟ್ಟಿ, ಸತ್ಯಜಿತ್‌ ಸುರತ್ಕಲ್‌, ಬಜರಂಗದಳದ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕರೆದೊಯ್ದರು. ಆರ್‌ಎಸ್‌ಎಸ್‌ ಮುಖಂಡ  ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಕೂಡ ಪ್ರತಿಭಟನೆಗೆ ಬಂದಿದ್ದರು. ಕೆಲವೇ ಕ್ಷಣಗಳಲ್ಲಿ ಅವರು ಪ್ರತಿಭಟನಾ ಸ್ಥಳದಿಂದ ಹೊರಟುಹೋದರು.

ADVERTISEMENT

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಸಂಘ ಪರಿವಾರದ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬೆಳ್ತಂಗಡಿ ಮತ್ತು ಪುತ್ತೂರಿಗೆ ಕರೆದೊಯ್ಯಲಾಗಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಜನರನ್ನು ಕರೆದೊಯ್ದಿದ್ದು, ಉಳಿದವರನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್‌, ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳುತ್ತಿದ್ದಾರೆ.

ಉದ್ವಿಗ್ನ ಸ್ಥಿತಿ: ನಿಷೇಧಾಜ್ಞೆಯ ನಡುವೆಯೇ ಸಾವಿರಾರು ಮಂದಿ ಸೇರಿ ಪ್ರತಿಭಟನೆ ಆರಂಭಿಸಿದ್ದರಿಂದ ಬಂಟ್ವಾಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಬಂಟ್ವಾಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಪ್ರತಿಭಟನೆಯಿಂದ ಬೆದರಿದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ದಿಢೀರ್‌ ಬಂದ್‌ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.