ADVERTISEMENT

ನೀರು ನಿಲ್ಲಿಸಲು ಪ್ರಧಾನಿಗೆ ಕೃಷ್ಣ ಪತ್ರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಬೆಂಗಳೂರು: ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರು ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ಅಧ್ಯಕ್ಷರೂ ಆದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಕೋರಿದ್ದಾರೆ.

`ಕಾವೇರಿ ಜಲಾನಯನ ಪ್ರದೇಶದ ವಸ್ತುಸ್ಥಿತಿ ಅಧ್ಯಯನ ನಡೆಸುತ್ತಿರುವ ಪರಿಣತರ ತಂಡ ಇದೇ 20ರೊಳಗೆ ವರದಿ ಸಲ್ಲಿಸಲಿದೆ. ರಾಜ್ಯದ ಜನ ಕಾವೇರಿ ನದಿ ನೀರಿನ ಹಂಚಿಕೆ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಲಿದೆ ಎಂದು ಕಾಯುತ್ತಿದ್ದಾರೆ. ಪರಿಹಾರ ದೊರೆಯುವುದು ತಡವಾದರೆ, ಜಲಾನಯನ ಪ್ರದೇಶದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಾಗಾಗಿ, ಪರಿಣತರ ತಂಡದಿಂದ ಮಧ್ಯಂತರ ವರದಿ ತರಿಸಿಕೊಳ್ಳಬೇಕು~ ಎಂದು ಅವರು ಪ್ರಧಾನಿಯವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

`ಕರ್ನಾಟಕದ ಪರಿಸ್ಥಿತಿ ದುರ್ಭರವಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದರಿಂದ ಕಾವೇರಿ ನದಿ ತೀರದ ರೈತರು ಮಾತ್ರವಲ್ಲ, ಬೆಂಗಳೂರಿನ ಜನರೂ ಕುಡಿಯುವ ನೀರು ಮುಂದಿನ ದಿನಗಳಲ್ಲಿ ದೊರೆಯುತ್ತದೆಯೋ, ಇಲ್ಲವೋ ಎಂಬ ಆತಂಕದಲ್ಲಿದ್ದಾರೆ~ ಎಂದು ವಿದೇಶ ಪ್ರವಾಸದಲ್ಲಿರುವ ಕೃಷ್ಣ ಶುಕ್ರವಾರ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

`ರಾಜ್ಯದಲ್ಲಿ ಮುಂಗಾರು ಮುಗಿದಿದೆ. ತಮಿಳುನಾಡಿಗೆ ಈಶಾನ್ಯ ಮಳೆಯ ಪ್ರಯೋಜನ ದೊರೆಯಲಿದೆ. ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ನೀರು ಲಭ್ಯವಾಗುವ ಸಾಧ್ಯತೆಗಳು ಇದ್ದು, ನೀರಿನ ಕೊರತೆ ಇನ್ನಷ್ಟು ತೀವ್ರವಾಗಬಹುದು ಎಂಬ ಭಾವನೆ ಕರ್ನಾಟಕದ ಜನರಲ್ಲಿ ಈಗಾಗಲೇ ಇದೆ. ರಾಜ್ಯದ ಪರಿಸ್ಥಿತಿ ಇನ್ನಷ್ಟು ಕೆಡುವುದನ್ನು ತಪ್ಪಿಸಲು ನೀವು ತಕ್ಷಣ ಮುಂದಾಗಬೇಕು~ ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.