ADVERTISEMENT

ನ್ಯಾಯಾಂಗ ಸೌಕರ್ಯ: ಸರ್ಕಾರಕ್ಕೆ ಹೈಕೋರ್ಟ್ ಚಾಟಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಬೆಂಗಳೂರು: ‘ನಮ್ಮ ಸಂಬಳ ಹೆಚ್ಚು ಮಾಡಿ ಎಂದು ನಿಮ್ಮನ್ನು ಕೇಳುತ್ತಿಲ್ಲ. ನ್ಯಾಯಾಂಗಕ್ಕೆ ಮೂಲ ಸೌಕರ್ಯ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಕೇಳುತ್ತಿದ್ದೇವೆ. ಇಷ್ಟೂ ಮಾಡಲು ಆಗದ ಸರ್ಕಾರವೇನು ದಿವಾಳಿ ಆಗಿದೆಯಾ? ಇದು ನಾಚಿಕೆಗೇಡಿನ ವಿಷಯ..’ -ಇದು ಹೈಕೋರ್ಟ್ ಬುಧವಾರ ಸರ್ಕಾರ ವಿರುದ್ಧ ಚಾಟಿಏಟು ಬೀಸಿದ ಪರಿ.

ನ್ಯಾಯಾಂಗಕ್ಕೆ ಸರಿಯಾದ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಸರ್ಕಾರಕ್ಕೆ ಆದೇಶಿಸಲು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ. ಈ ಹಿಂದೆ ನ್ಯಾಯಮೂರ್ತಿಗಳು ಅನೇಕ ಬಾರಿ ಆದೇಶ ಹೊರಡಿಸಿದ್ದರೂ, ಸೌಕರ್ಯ ಒದಗಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ಬೇಕು ಎಂದು ಸರ್ಕಾರದ ಪರ ವಕೀಲರು ಕೋರಿಕೊಂಡ ಹಿನ್ನೆಲೆಯಲ್ಲಿ ಅವರು ಈ ಮಾತು ಹೇಳಿದರು.

‘ದೇಶ-ವಿದೇಶಗಳಿಗೆ ಪ್ರವಾಸ ಮಾಡಲು ನಿಮ್ಮಲ್ಲಿ ಹಣ ಇದೆಯಾ? ಒಂದು ವೇಳೆ ಇದೇ ರೀತಿ ಮುಂದುವರಿದರೆ ನಿಮ್ಮ ಎಲ್ಲ ಪ್ರವಾಸ ಕಾರ್ಯಗಳನ್ನೂ ಸ್ಥಗಿತಗೊಳಿಸಬೇಕಾಗುತ್ತದೆ. ಅದರ ಜೊತೆಗೆ ಯಾವ ಪ್ರವಾಸಕ್ಕೆ ಎಷ್ಟು ಖರ್ಚು ಮಾಡಿದ್ದೀರಿ ಎಂಬ ಬಗ್ಗೆ ಲೆಕ್ಕ ತರಿಸಬೇಕಾಗುತ್ತದೆ’ ಎಂದು ಪೀಠ ಎಚ್ಚರಿಕೆ ನೀಡಿದೆ. ‘ಎಷ್ಟೋ ಅಧೀನ ಕೋರ್ಟ್‌ಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ನ್ಯಾಯಾಂಗಕ್ಕೆ ಸಾಕಷ್ಟು ಸೌಲಭ್ಯ ಕೊಟ್ಟಿರುವುದಾಗಿ ಭ್ರಮೆಯಲ್ಲಿ ನೀವು ಇರಬಹುದು. ಆದರೆ ಹೈಕೋರ್ಟ್‌ನಲ್ಲಿಯೇ ಸಿಬ್ಬಂದಿ ಕೊರತೆ ಇದೆ. ಅದನ್ನೂ ಭರ್ತಿ ಮಾಡಿಲ್ಲ. ಕೇಂದ್ರ ಸರ್ಕಾರ ನೀಡುವ ಹಣವನ್ನು ಸರಿಯಾಗಿ ವಿನಿಯೋಗ ಮಾಡುವುದಿಲ್ಲ’ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.

ಬೇಕಂತಲೇ ಮಾಡುತ್ತಿದ್ದೀರಾ..?
ಹೈಕೋರ್ಟ್ ನ್ಯಾಯಮೂರ್ತಿಗಳ ಕಾಲೋನಿ ನಿರ್ಮಾಣಕ್ಕೆ ವಿವಾದಿತ ಜಮೀನನ್ನೇ ಗೊತ್ತು ಮಾಡುತ್ತಿರುವ  ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಯಾವಾಗ ನೋಡಿದರೂ ಸರ್ಕಾರ ವಿವಾದಿತ ಜಾಗವನ್ನೇ ಗುರುತು ಮಾಡುತ್ತಿದೆ. ಇದು ಉದ್ದೇಶಪೂರ್ವಕವಾಗಿಯೇ ನಡೆಯುತ್ತಿದ್ದಂತೆ ಕಾಣುತ್ತಿದೆ. ಸರ್ಕಾರವೇನು ಕಿವುಡಾಗಿದೆಯೇ ಅಥವಾ ಮಲಗಿಕೊಂಡಿದೆಯೇ’ ಎಂದು ನ್ಯಾ.ಕೇಹರ್ ಕಿಡಿ ಕಾರಿದರು. (ಎಚ್‌ಎಸ್‌ಆರ್ ಲೇಔಟ್, ಪಶುವೈದ್ಯಕೀಯ ಶಾಲೆ, ಮೈಸೂರು ಮಿನರಲ್ಸ್ ಜಾಗ ಇತ್ಯಾದಿ ವಿವಾದಿತ ಜಾಗ ಮಂಜೂರು ಮಾಡುವ ಬಗ್ಗೆ ನ್ಯಾಯಮೂರ್ತಿ ಅಸಮಾಧಾನ ಸೂಚಿಸಿದರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.