ADVERTISEMENT

ಪಕ್ಷಿಗಳ ಸಾವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 19:30 IST
Last Updated 6 ಜೂನ್ 2017, 19:30 IST
ಪಕ್ಷಿಗಳ ಜೀವಕ್ಕೆ ಕಂಟಕವಾಗಿದ್ದ ಬಲೆಯನ್ನು ತೆಗೆಸಲಾಯಿತು
ಪಕ್ಷಿಗಳ ಜೀವಕ್ಕೆ ಕಂಟಕವಾಗಿದ್ದ ಬಲೆಯನ್ನು ತೆಗೆಸಲಾಯಿತು   

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಗಂಜಾಂನಲ್ಲಿ ಪನ್ನೇರಳೆ ಹಣ್ಣಿನ ತೋಟಕ್ಕೆ ಹಾಕಿದ್ದ ಬಲೆಗೆ ಸಿಲುಕಿ ಪಕ್ಷಿಗಳು ಮೃತಪಟ್ಟಿರುವ ಪ್ರಕರಣದ ಸಂಬಂಧ ತೋಟದ ಮಾಲೀಕ ಅಂದಾನಯ್ಯ ಅವರ ಪುತ್ರ ರಾಘವ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತೋಟದ ಸುತ್ತ ಹಾಕಿದ್ದ ಬಲೆಗೆ ಸಿಲುಕಿ ಮೃತಪಟ್ಟಿರುವ ಕೋಗಿಲೆ, ಬಾವಲಿ, ಪಾರಿವಾಳ, ಗಿಳಿ, ಚುಕ್ಕೆ ಗೂಬೆ, ಬುಲ್‌ಬುಲ್‌, ಮರಕುಟುಕ, ಮಿಂಚುಳ್ಳಿ, ಸನ್‌ಬರ್ಡ್‌ ಇತರ ಜಾತಿಯ ಪಕ್ಷಿಗಳ ಕಳೇಬರಗಳನ್ನು ಸಂಗ್ರಹಿಸಿ ಪಂಚನಾಮೆಗಾಗಿ ಪಶು ವೈದ್ಯಕೀಯ ಇಲಾಖೆಗೆ ಕಳುಹಿಸಲಾಗಿದೆ.

ADVERTISEMENT

‘ಆರೇಳು ತಿಂಗಳ ಹಿಂದೆಯೇ ತೋಟಕ್ಕೆ ಬಲೆ ಹಾಕಿರುವುದಾಗಿ ಆರೋಪಿ ಒಪ್ಪಿಕೊಂಡ ಕಾರಣ ಆತನನ್ನು ಬಂಧಿಸಲಾಯಿತು’ ಎಂದು ಉಪ  ಅರಣ್ಯ ಸಂರಕ್ಷಣಾಧಿಕಾರಿ ಆನಂದಗೌಡ ತಿಳಿಸಿದರು.

ನಂತರ ಬಲೆಯನ್ನು ತೆಗೆಸಿದ ಅಧಿಕಾರಿಗಳು ಮತ್ತೆ ಬಲೆ ಹಾಕದಂತೆ  ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.