ADVERTISEMENT

ಪಠ್ಯದಲ್ಲಿ ವ್ಯಂಗ್ಯಚಿತ್ರ ಅಳವಡಿಕೆ; ಕಿಮ್ಮನೆ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ಶಿವಮೊಗ್ಗ: `ವ್ಯಂಗ್ಯಚಿತ್ರಗಳು ಮಕ್ಕಳ ಕಲಿಕೆಗೆ ಸುಲಭದ ಮಾರ್ಗವಾಗಿರುವುದರಿಂದ ಪ್ರಾಥಮಿಕ ಶಾಲೆಗಳಲ್ಲಿ ವ್ಯಂಗ್ಯಚಿತ್ರಗಳ ಮೂಲಕ ಪಾಠಗಳನ್ನು ಹೇಳಿಕೊಡುವ ಕಾಮಿಕ್ಸ್ ಪಠ್ಯಕ್ರಮದ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಭರವಸೆ ನೀಡಿದರು.

ತೀರ್ಥಹಳ್ಳಿಯ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಹೇಮಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ವಾರ್ತಾ ಇಲಾಖೆ ಹಮ್ಮಿಕೊಂಡಿರುವ ರಾಜ್ಯಮಟ್ಟದ ವ್ಯಂಗ್ಯಚಿತ್ರಕಾರರ ಕಾರ್ಯಾಗಾರದಲ್ಲಿ ಶನಿವಾರ `ಕರ್ನಾಟಕದಲ್ಲಿ ವ್ಯಂಗ್ಯಚಿತ್ರಕಲೆ' ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಪಠ್ಯ ಹೇಳಿಕೊಡುವುದಕ್ಕೆ ಸುಲಭದ ವಿನೂತನ ಮಾರ್ಗಗಳ ಅನ್ವೇಷಣೆ ನಡೆದಿದೆ. ಅದರಲ್ಲಿಯೂ ವ್ಯಂಗ್ಯಚಿತ್ರಗಳ ಮೂಲಕ ಕಲಿಕೆ ಸುಲಭ ಮತ್ತು ಸರಳವಾಗಿದೆ. ಈ ಮಾರ್ಗದ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ.  ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಸ್ತಾಪಿಸಿರುವ ಮಹಾತ್ಮಗಾಂಧಿ ಮಾಧ್ಯಮ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ವಿಷಯದ ಸಾಧಕ-ಬಾಧಕಗಳ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ರಾಜ್ಯದಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಇಲಾಖೆಗೆ ಸುಮಾರು ್ಙ 3,500 ಕೋಟಿ ಅಗತ್ಯವಿದೆ. ಆದರೆ, ಅಷ್ಟೊಂದು ಬಜೆಟ್ ಇಲಾಖೆಗೆ ಲಭ್ಯವಾಗುವುದಿಲ್ಲ.  ಹಂತಹಂತವಾಗಿ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಬೇಕಿದೆ ಎಂದರು.

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ಎಸ್.ವಿ.ಪದ್ಮನಾಭ ಮಾತನಾಡಿ, ಶಿಕ್ಷಣ ಇಲಾಖೆ ಪಠ್ಯಪುಸ್ತಕ ರಚನಾ ಸಮಿತಿಗೆ ವ್ಯಂಗ್ಯಚಿತ್ರಕಾರರನ್ನು ಸದಸ್ಯರನ್ನಾಗಿ ನೇಮಿಸಬೇಕು ಎಂದು ಸಚಿವರಿಗೆ ಸಲಹೆ ನೀಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.