ADVERTISEMENT

ಪಡಿತರ ಚೀಟಿಗೆ ಇನ್ನೂ 25 ಲಕ್ಷ ಅರ್ಜಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST
ಗುಂಡೂರಾವ್
ಗುಂಡೂರಾವ್   

ಬೆಂಗಳೂರು: ಪಡಿತರ ಚೀಟಿ ಸಲುವಾಗಿ 25 ಲಕ್ಷ ಹೊಸ ಅರ್ಜಿಗಳು ಬಂದಿದ್ದು, ಅವುಗಳ ವಿಲೇವಾರಿಗೆ ನ್ಯಾಯಬೆಲೆ ಅಂಗಡಿಗಳ ಮಟ್ಟದಲ್ಲಿ ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ರಾಜ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಇಲ್ಲಿ ತಿಳಿಸಿದರು.

`ಅನ್ನಭಾಗ್ಯ' ಯೋಜನೆಯ ಅನುಷ್ಠಾನ ಮತ್ತು ಹೊಸ ಪಡಿತರ ಚೀಟಿಗಳ ವಿಲೇವಾರಿ ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

`ಅಪಾರ ಸಂಖ್ಯೆಯ ಹೊಸ ಅರ್ಜಿಗಳನ್ನು ಹಾಲಿ ಇರುವ ವ್ಯವಸ್ಥೆ ಪ್ರಕಾರ ವಿಲೇವಾರಿ ಮಾಡಲು ತುಂಬಾ ಸಮಯ ಹಿಡಿಯುತ್ತದೆ. ಈ ಕಾರಣಕ್ಕೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸ್ಥಳೀಯವಾಗಿ ಅರ್ಜಿಗಳ ಪರಿಶೀಲನೆಗೆ ನೇಮಿಸಲಾಗುವುದು. ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಒಪ್ಪಿಗೆ ಸಿಕ್ಕ ನಂತರ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಎರಡು ತಿಂಗಳಲ್ಲಿ ಎಲ್ಲ ಅರ್ಜಿಗಳನ್ನೂ ವಿಲೇವಾರಿ ಮಾಡಿ ಅರ್ಹರಿಗೆ ಪಡಿತರ ಚೀಟಿ ನೀಡಲಾಗುವುದು' ಎಂದು ಹೇಳಿದರು.
`ರಾಜ್ಯದಲ್ಲಿ 20 ಸಾವಿರ ನ್ಯಾಯಬೆಲೆ ಅಂಗಡಿಗಳು ಇದ್ದು, ಪ್ರತಿಯೊಂದಕ್ಕೂ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗುವುದು. ಒಂದೊಂದು ನ್ಯಾಯಬೆಲೆ ಅಂಗಡಿಗೂ 100ರಿಂದ 150 ಅರ್ಜಿಗಳು ಹೊಸದಾಗಿ ಬಂದಿದ್ದು, ಎರಡು ವಾರದಲ್ಲಿ ಈ ಅರ್ಜಿಗಳ ವಿಲೇವಾರಿಯನ್ನು ಈ ಅಧಿಕಾರಿಗಳು ಮಾಡಲಿದ್ದಾರೆ. ಇದರಿಂದ ವಿಳಂಬ ಕೂಡ ತಪ್ಪಿಸಬಹುದು' ಎಂದು ವಿವರಿಸಿದರು.

`ಮತದಾರರ ಪಟ್ಟಿಯನ್ನು ಪರಿಷ್ಕರಿಸುವಾಗ ಪ್ರತಿವರ್ಷ ಪಡಿತರ ಚೀಟಿಗಳ ಪರಿಷ್ಕರಣೆ ಮಾಡಲಾಗುವುದು. ಬೂತ್ ಮಟ್ಟದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಹೊಸ ಅರ್ಜಿಗಳ ವಿಲೇವಾರಿಗಾಗಿ ನಿಯೋಜಿಸುವ ಸಿಬ್ಬಂದಿಗೆ ಗೌರವ ಧನ ನೀಡಲಾಗುವುದು' ಎಂದರು.

ಪಡಿತರ ಚೀಟಿಗಳನ್ನು `ಆಧಾರ್' ಕಾರ್ಡ್ ಸಂಖ್ಯೆಗೂ ಹೊಂದಾಣಿಕೆ ಮಾಡಲಾಗುವುದು. ಇದರಿಂದ ದುರುಪಯೋಗ ತಪ್ಪಿಸಬಹುದು ಎಂದು ವಿವರಿಸಿದರು.

ಸೀಮೆ ಎಣ್ಣೆ: ಸೀಮೆ ಎಣ್ಣೆಗೆ ಇಡೀ ರಾಜ್ಯದಲ್ಲಿ ಒಂದೇ ದರ ನಿಗದಿ ಮಾಡಲಾಗಿದೆ. ಪ್ರತಿ ಲೀಟರ್‌ಗೆ ರೂ16.20   ದರ ನಿಗದಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಚಿಂತನೆ ಇದೆ. ಮೊದಲು ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದರು.

ಟೆಂಡರ್: ಅನ್ನಭಾಗ್ಯ ಯೋಜನೆ ವ್ಯಾಪ್ತಿಯಲ್ಲಿ ಜೋಳ ಮತ್ತು ರಾಗಿ ಸೇರಿಸಿದ್ದು, ಅವುಗಳ ಖರೀದಿಗೆ ಮಂಗಳವಾರ ಟೆಂಡರ್ ಕರೆಯಲಾಗುವುದು. 20 ದಿನಗಳಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ. ಪ್ರಸ್ತುತ 30 ಸಾವಿರ ಟನ್ ಜೋಳ ಮತ್ತು 20 ಸಾವಿರ ಟನ್ ರಾಗಿ ಅಗತ್ಯ ಇದ್ದು, ಇಷ್ಟು ಪ್ರಮಾಣದ ಧಾನ್ಯಗಳ ಲಭ್ಯತೆ ಕುರಿತು ಖಚಿತ ಮಾಹಿತಿ ಇಲ್ಲ ಎಂದು ಅವರು ವಿವರಿಸಿದರು.

ಪ್ರತಿ ತಿಂಗಳ 30ರೊಳಗೆ ಆಹಾರ ಧಾನ್ಯಗಳ ಸಂಗ್ರಹ ಮುಗಿಯಲಿದೆ. 1ರಿಂದ 10ರೊಳಗೆ ಅವುಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸಲಾಗುವುದು. ಅದರ ನಂತರ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು. ಈ ಪ್ರಕಾರವೇ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಕ್ಕರೆ ಮುಟ್ಟುಗೋಲು
ಸರ್ಕಾರಕ್ಕೆ 13 ಸಾವಿರ ಟನ್ ಲೆವಿ ಸಕ್ಕರೆ ನೀಡದ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರಲ್ಲಿನ ಸಕ್ಕರೆ  ಮುಟ್ಟುಗೋಲು ಹಾಕಲು ಅಲ್ಲಿನ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಆದರೆ ಈ ಕಾರ್ಖಾನೆ ಹೆಸರು ಬಹಿರಂಗಕ್ಕೆ ನಿರಾಕರಿಸಿದರು.

ಪ್ರತಿ ಕೆ.ಜಿ ಲೆವಿ ಸಕ್ಕರೆಗೆ ರಾಜ್ಯ ಸರ್ಕಾರ ರೂ 18.50 ನೀಡುತ್ತದೆ. ಉತ್ಪಾದನೆಯಲ್ಲಿ ಇಂತಿಷ್ಟು ಸಕ್ಕರೆಯನ್ನು ಲೆವಿ ರೂಪದಲ್ಲಿ ಸರ್ಕಾರಕ್ಕೆ ಮಾರಾಟ ಮಾಡುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.