ಬೆಳಗಾವಿ: ಹಣಕಾಸಿನ ವಿಷಯದಲ್ಲಿ ವ್ಯಾಪಾರಿಯೊಬ್ಬರ ಕುಟುಂಬವೊಂದು ವಂಚನೆ ಮಾಡಿದ್ದರಿಂದ ಮನನೊಂದ ಹುಬ್ಬಳ್ಳಿ ಮೂಲದ ಉದ್ಯಮಿಯೊಬ್ಬರು ವಿಷ ಸೇವಿಸಿ, ಪತ್ನಿ ಮತ್ತು ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿ ಮಹಾಂತೇಶ ಮಲ್ಲಿಕಾರ್ಜುನ ಧವನ್ (45), ಪತ್ನಿ ಶೋಭಾ (38) ಹಾಗೂ ಪುತ್ರ ಅಮೋಘ (12) ಸಾವಿಗೆ ಶರಣಾಗಿದ್ದಾರೆ.
ಘಟನೆಯ ಹಿನ್ನೆಲೆ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಮೋಘನಿಗೆ ಚಿಕಿತ್ಸೆ ಕೊಡಿಸಲು ಗೋವಾಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿದ್ದ ಮಹಾಂತೇಶ ಅವರು, ಪತ್ನಿ ಹಾಗೂ ಪುತ್ರನೊಂದಿಗೆ ಮಂಗಳವಾರ ಸಂಜೆ ಬೆಳಗಾವಿಗೆ ಬಂದು ಗಾಂಧಿ ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು.
ರಾತ್ರಿ 11.30ರ ಸಮೀಪ ಶೋಭಾ ಅವರು ತಮ್ಮ ಸಹೋದರನ ಮೊಬೈಲ್‌ಗೆ ಕರೆ ಮಾಡಿ, ‘ನಮ್ಮ ಬದುಕು ಇನ್ನು ಮುಗಿಯಿತು’ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಸುಳಿವು ನೀಡಿ ಮಾತು ಮುಗಿಸಿದ್ದಾರೆ. ಅವರು ತಕ್ಷಣವೇ ಆಕೆಯ ಮೊಬೈಲ್‌ಗೆ ವಾಪಸ್ ಕರೆ ಮಾಡಿದರೂ ಸ್ವೀಕರಿಸಿಲ್ಲ. ಹೀಗಾಗಿ ಅವರು ಬೆಳಗಾವಿಯ ಪೊಲೀಸ್ ಕಂಟ್ರೋಲ್ ರೂಮ್‌ಗೆ ವಿಷಯ ತಿಳಿಸಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಸಂಜೀವ ಕುಮಾರ ನೇತೃತ್ವದಲ್ಲಿ ಪೊಲೀಸರು ರಾತ್ರಿ 12.15ರ ಸುಮಾರಿಗೆ ಹೋಟೆಲ್‌ಗೆ ಬಂದು ಮಹಾಂತೇಶ ಅವರಿದ್ದ ಕೊಠಡಿಯ ಬಾಗಿಲು ಬಡಿದರೂ ತೆರೆಯಲಿಲ್ಲ. ಬಳಿಕ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಮೂವರೂ ಮೃತಪಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮರಣ ಪತ್ರ: ‘ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿರುವ ‘ಶ್ರೀ ಸಿಲ್ವರ್ ಪ್ಯಾಲೇಸ್’ ಮಳಿಗೆಯ ಮಾಲೀಕರಾದ ನಿತಿನ್ ಸುರೇಶ ಪಟಾಡಿಯಾ, ಆದರ್ಶ ಸುರೇಶ ಪಟಾಡಿಯಾ ಹಾಗೂ ಅವರ ತಂದೆ ಸುರೇಶ ಪಟಾಡಿಯಾ ಅವರು ನನಗೆ ಹಣಕಾಸಿನ ವಿಷಯದಲ್ಲಿ ವಂಚನೆ ಮಾಡಿ ವಿಶ್ವಾಸದ್ರೋಹ ಎಸಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಠೋರ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ, ಹಾಳೆ ಮೇಲೆ ಮಹಾಂತೇಶ ಸಹಿ ಹಾಕಿದ್ದಾರೆ.
‘ನಿತಿನ್ ಪಟಾಡಿಯಾ ಅವರು ನೀಡಿರುವ ಪೊಟ್ಯಾಶಿಯಂ ಸಯನೈಯ್ಡ್ ಅನ್ನು ನಾವು ಸೇವಿಸಿದ್ದೇವೆ. ನಮ್ಮ ಅಂತ್ಯ ಸಂಸ್ಕಾರವನ್ನು ಹುಬ್ಬಳ್ಳಿಯಲ್ಲೇ ನೆರವೇರಿಸಿ’ ಎಂದು ಬಾಲ್ ಪೆನ್ನಿನಿಂದ ಕೆಳಗಡೆ ಬರೆದಿದ್ದಾರೆ.
ಬಿಜೆಪಿ ಮುಖಂಡ ಜಗದೀಶ ಶೆಟ್ಟರ್ ಅವರ ಸಹೋದರ ಪ್ರದೀಪ ಶೆಟ್ಟರ್, ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ವೀರಣ್ಣ ಸವಡಿ ಹಾಗೂ ತಮ್ಮ ಪತ್ನಿಯ ಇಬ್ಬರು ಸಹೋದರರು ಸೇರಿದಂತೆ ಕೆಲವು ಸ್ನೇಹಿತರ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ, ತಾವು ಮೃತಪಟ್ಟಿರುವ ಸುದ್ದಿಯನ್ನು ಇವರಿಗೆಲ್ಲ ತಿಳಿಸುವಂತೆ ಇನ್ನೊಂದು ಹಾಳೆಯ ಮೇಲೆ ಬರೆದಿಟ್ಟಿದ್ದಾರೆ. ಇದರ ಜೊತೆಗೆ ತಮ್ಮ, ಪತ್ನಿ ಹಾಗೂ ಪುತ್ರನ ಪಾಸ್ಪೋರ್ಟ್ ಸೈಜಿನ ಫೋಟೊ ಇಟ್ಟಿದ್ದಾರೆ.
‘ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಮಹಾಂತೇಶ ಅವರು ಧಾರವಾಡದ ಬೇಲೂರಿನಲ್ಲಿ ಕೈಗಾರಿಕೆಗಳ ವಾಲ್ವ್ ಫ್ಯಾಕ್ಟರಿಯನ್ನು ಸುಮಾರು 18 ವರ್ಷಗಳಿಂದ ನಡೆಸುತ್ತಿದ್ದರು. ಇವರು ತಯಾರಿಸುತ್ತಿದ್ದ ವಾಲ್ವ್‌ಗಳನ್ನು ರಾಜ್ಯದ ಪ್ರಮುಖ ಕೈಗಾರಿಕೆಗಳು ಖರೀದಿಸುತ್ತಿದ್ದರಿಂದ ಆರ್ಥಿಕವಾಗಿ ಸದೃಢವಾಗಿಯೇ ಇದ್ದರು. ನಿತಿನ್ ಪಟಾಡಿಯಾ ಅವರ ಸಿಲ್ವರ್ ಪ್ಯಾಲೇಸ್‌ಗೆ ಆಗಾಗ ಹೋಗುತ್ತಿರುವುದನ್ನು ನೋಡಿದ್ದೇನೆ.
ಆದರೆ, ಅವರೊಂದಿಗೆ ಹಣಕಾಸಿನ ವ್ಯವಹಾರ ನಡೆಸಿರುವ ವಿಷಯವನ್ನು ಆತ ನಮ್ಮೊಂದಿಗೆ ಎಂದಿಗೂ ಹಂಚಿಕೊಂಡಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ವಿಷಯ ತಲುಪಿದೆ ಎಂದರೆ, ಪಟಾಡಿಯಾ ಅವರು ಬಹಳ ದೊಡ್ಡ ಮೊತ್ತದ ಹಣ ನೀಡದೇ ವಂಚಿಸಿರುವ ಸಾಧ್ಯತೆ ಇದೆ’ ಎಂದು ಶವ ಪಡೆಯಲು ಬೆಳಗಾವಿಗೆ ಬಂದಿದ್ದ ಮಹಾಂತೇಶರ ಅವರ ಸಂಬಂಧಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಿಲ್ವರ್ ಪ್ಯಾಲೇಸ್‌ನ ನಿತಿನ್, ಆದರ್ಶ ಹಾಗೂ ಸುರೇಶ ಪಟಾಡಿಯಾ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕವೇ ಮಹಾಂತೇಶ ಧವನ್ ಹಾಗೂ ಇವರ ನಡುವೆ ಯಾವ ರೀತಿಯ ಹಣಕಾಸಿನ ವ್ಯವಹಾರ ನಡೆದಿತ್ತು ಎಂಬುದು ಬಹಿರಂಗಗೊಳ್ಳಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.