ADVERTISEMENT

ಪರಿಶಿಷ್ಟರ ಕಾಲೊನಿ ಅಭಿವೃದ್ಧಿಗೆ 242 ಕೋಟಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ದಾವಣಗೆರೆ: ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಪರಿಶಿಷ್ಟರ ಕಾಲೊನಿಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು 2012-13ನೇ ಸಾಲಿನಲ್ಲಿ ರೂ 242 ಕೋಟಿ ಅನುದಾನ ಒದಗಿಸಲು ಸರ್ಕಾರ ಉದ್ದೇಶಿಸಿದೆ.

ಪರಿಶಿಷ್ಟ ಜಾತಿ ಉಪ ಯೋಜನೆಯ ಕ್ರೋಡೀಕೃತ ಅನುದಾನದಲ್ಲಿ ಈ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಮೊದಲ ತ್ರೈಮಾಸಿಕ ಕಂತಾಗಿ ರೂ 60 ಕೋಟಿ ಮತ್ತು 2ನೇ ತ್ರೈಮಾಸಿಕ ಕಂತಾಗಿ ರೂ 50.30 ಕೋಟಿ ಬಿಡುಗಡೆ ಮಾಡಲಾಗಿದೆ. ಇದೀಗ, ಪರಿಶಿಷ್ಟ ಜಾತಿ ವಿಧಾನಸಭಾ ಕ್ಷೇತ್ರಕ್ಕೆ (ಮೀಸಲು ಕ್ಷೇತ್ರ) ರೂ 1.50 ಕೋಟಿ ಹಾಗೂ ಇತರ ವಿಧಾನಸಭಾ ಕ್ಷೇತ್ರಗಳಿಗೆ ರೂ 75 ಲಕ್ಷ ಮಂಜೂರು ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಪ್ರತಿ ಕಾಲೊನಿಯಲ್ಲಿ ಕನಿಷ್ಠ ರೂ 10 ಲಕ್ಷ ಹಾಗೂ ಗರಿಷ್ಠ ರೂ 25 ಲಕ್ಷಗಳಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನವೀನ್‌ರಾಜ್ ಸಿಂಹ ಈಚೆಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ನಿಬಂಧನೆ: ಕೈಗೊಂಡ ಕಾಮಗಾರಿ ಬಗ್ಗೆ `ಮೂರನೇ ವ್ಯಕ್ತಿ ಪರಿಶೀಲನೆ' ಕಾರ್ಯವನ್ನು ಕಡ್ಡಾಯವಾಗಿ ನಡೆಸಬೇಕು. ಉತ್ತಮ ಗುಣಮಟ್ಟದೊಂದಿಗೆ ಕಾರ್ಯ ನಿರ್ವಹಿಸುವ ಸರ್ಕಾರಿ ನಿರ್ಮಾಣ ಸಂಸ್ಥೆಯಿಂದ ಅಂದಾಜುಪಟ್ಟಿ ಸಿದ್ಧಪಡಿಸಿ, ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸಬೇಕು.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ, ಅನುದಾನವನ್ನು ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಮಾತ್ರ ವಿನಿಯೋಗಿಸಬೇಕು. ಮೂರು ಅಥವಾ ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಲಾಗಿದೆ. ಉಳಿಕೆಯಾದ ಅನುದಾನ ಇಲಾಖೆಯ ಆಯುಕ್ತರಿಗೆ ವಾಪಸ್ ನೀಡುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಯಾವುದೇ ಕಾಮಗಾರಿಯನ್ನು ಸ್ಥಳೀಯ ಸಂಸ್ಥೆಯ ಅನುದಾನ ಅಥವಾ ಇತರ ಮೂಲದ ಅನುದಾನದಿಂದ ಈಗಾಗಲೇ ಕೈಗೊಳ್ಳಲಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದ್ಯತೆ ಮತ್ತು ಅವಶ್ಯಕತೆ ಅನುಸರಿಸಿ ಕಾಮಗಾರಿ ನಡೆಸಬೇಕು. ಕಾಲಕಾಲಕ್ಕೆ ಕಾಮಗಾರಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.