ADVERTISEMENT

ಪಶ್ಚಿಮಘಟ್ಟ ಸಂರಕ್ಷಣೆ: ಗಾಡ್ಗೀಳ್ ವರದಿ ಸೂಕ್ತ

ಮೇಧಾ ಪಾಟ್ಕರ್‌ಗೆ ‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2014, 19:30 IST
Last Updated 14 ಜನವರಿ 2014, 19:30 IST

ಕೂಡಲಸಂಗಮ (ಬಾಗಲಕೋಟೆ): ಪರಿಸರವಾದಿ ಮೇಧಾ ಪಾಟ್ಕರ್‌ ಅವರಿಗೆ ‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ’ಯನ್ನು ಮಂಗಳವಾರ ಕೂಡಲ­ಸಂಗಮದಲ್ಲಿ ನಡೆದ ಐದನೇ ಕೃಷಿ ಸಂಕ್ರಾಂತಿ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ₨ 50 ಸಾವಿರ ನಗದು ಪುರಸ್ಕಾರ, ತಾಮ್ರ ಪತ್ರ ಹಾಗೂ ಸ್ಮರಣ ಫಲಕ ಒಳಗೊಂಡ ಪ್ರಶಸ್ತಿಯನ್ನು ಕೂಡಲ­ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರದಾನ ಮಾಡಿದರು.

‘ಪಶ್ಚಿಮಘಟ್ಟ ಸಂರಕ್ಷಣೆಗೆ ಕೈಗೊಳ್ಳ­ಬೇಕಾದ ಕ್ರಮಗಳ ಕುರಿತು ಪ್ರೊ. ಮಾಧವಗಾಡ್ಗೀಳ್‌ ಮತ್ತು ಡಾ.ಕಸ್ತೂರಿ ರಂಗನ್‌ ನೀಡಿರುವ ವರದಿಗಳಲ್ಲಿ ಗಾಡ್ಗೀಳ್‌ ವರದಿ ಅತ್ಯಂತ ಸಮರ್ಪಕ ಮತ್ತು ಔಚಿತ್ಯದಿಂದ ಕೂಡಿದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೇಧಾ ಪಾಟ್ಕರ್‌ ಅಭಿಪ್ರಾಯಪಟ್ಟರು.

‘ಗಾಡ್ಗೀಳ್‌ ವರದಿಯಲ್ಲಿ ಪರಿಸರ ಕಾಳಜಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಜತೆಗೆ  ಕೈಗಾರಿಕಾ ಬೆಳವಣಿಗೆಗೂ ಒತ್ತು ನೀಡಿರುವುದರಿಂದ ಇದೊಂದು ವೈಜ್ಞಾನಿಕ ವರದಿಯಾಗಿದೆ’ ಎಂದರು. ದೇಶದ ನದಿ ಜೋಡಣೆಗೆ ವಿರೋಧ ವ್ಯಕ್ತಪಡಿಸಿದ ಅವರು, ‘ನದಿ ಜೋಡಣೆ ಕುರಿತು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಪ್ರಸ್ತಾವ ಅವಾಸ್ತವಿಕ’ ಎಂದರು.

‘ಚುನಾವಣೆ ಪ್ರಣಾಳಿಕೆ ಅನುಷ್ಠಾನದ ಬಗ್ಗೆ ರಾಜಕೀಯ ಪಕ್ಷಗಳನ್ನು ಹೊಣೆ-­ಗಾರ­ರನ್ನಾಗಿ ಮಾಡಲು ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು’ ಎಂದರು. ‘ಬೃಹತ್‌ ಅಣೆಕಟ್ಟೆ ನಿರ್ಮಾಣದ ಬದಲು ಸಣ್ಣಪುಟ್ಟ ಬಾಂದಾರಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು, ದೇಶದಲ್ಲಿ ಅಣೆಕಟ್ಟೆ ನಿರ್ಮಿಸುವಾಗ ಮುಳುಗಡೆ ವ್ಯಾಪ್ತಿಯನ್ನು ಸರಿಯಾಗಿ ಗುರುತಿಸುವಲ್ಲಿ ತಜ್ಞರು ವಿಫಲವಾದ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿದೆ’ ಎಂದರು.

‘ಬಸವಣ್ಣ ಪ್ರತಿಪಾದಿಸಿರುವ ಶ್ರಮ ಸಂಸ್ಕೃತಿಗೆ ಪ್ರಸ್ತುತ ದಿನಗಳಲ್ಲಿ ಪುರಸ್ಕಾರ ಸಿಗದೇ ಅವಹೇಳನಕ್ಕೆ ಒಳಗಾಗುತ್ತಿದೆ. ಜಾಗತೀಕರಣದ ಕೊಡುಗೆಯಾದ ಕೊಳ್ಳು­­ಬಾಕ ಸಂಸ್ಕೃತಿ ಮತ್ತು ರಿಯಲ್‌ ಎಸ್ಟೇಟ್‌ ದಂಧೆಯಿಂದ ಕೃಷಿ ಸಂಸ್ಕೃತಿ ಮೇಲೆ ಆಕ್ರಮಣ ನಡೆಯುತ್ತಿದ್ದು, ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿವೆ’ ಎಂದು ವಿಷಾದಿಸಿದರು.

ಸಮರ್ಥನೆ: ಅಕ್ರಮ ಗಣಿಗಾರಿಕೆಯಿಂದ ಅಪಖ್ಯಾತಿಗೆ ಒಳಗಾಗಿದ್ದ ಈ ಹಿಂದಿನ ಬಿಜೆಪಿ ಸರ್ಕಾರ  ‘ಬಸವ’ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದಾಗ ನಾನು ಪ್ರಶಸ್ತಿಯನ್ನು ತಿರಸ್ಕರಿಸಿದೆ. ಬಳಿಕ ವಿಧಾನಸಭೆ ಅಧಿವೇಶನದಲ್ಲೇ ಬಿಜೆಪಿ ಶಾಸಕರು ಅಶ್ಲೀಲ ದೃಶ್ಯ ವೀಕ್ಷಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಾಗ ನನ್ನ ನಿರ್ಧಾರ ಸರಿ ಎನಿಸಿತು’ ಎಂದು ಸಮರ್ಥಿಸಿಕೊಂಡರು.

ಚುನಾವಣಾ ಕಣಕ್ಕೆ: ‘ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲ ಮಾತ್ರ ನೀಡಬೇಕೇ ಅಥವಾ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯಬೇಕೇ ಎಂಬ ಕುರಿತು ಇದೇ 17 ಮತ್ತು 18ರಂದು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈ­ಗೊಳ್ಳಲಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.