ADVERTISEMENT

ಪಶ್ಚಿಮ ಘಟ್ಟದಲ್ಲಿ ಜಲ ವಿದ್ಯುತ್ ಯೋಜನೆ:ಹೈಕೋರ್ಟ್ ತಂಡದಿಂದ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ಸಕಲೇಶಪುರ: ಕಾಡಾನೆಗಳು ಹಾಗೂ ಜನರ ಮಧ್ಯೆ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸ್ವಯಂ ಮೊಕದ್ದಮೆ ದಾಖಲಿಸಿಕೊಂಡಿರುವ ರಾಜ್ಯ ಹೈಕೋರ್ಟ್‌ನ ತಂಡವು ಭಾನುವಾರ ಪಶ್ಚಿಮಘಟ್ಟದ  ರಕ್ಷಿತ ಅರಣ್ಯದಲ್ಲಿರುವ ಜಲ ವಿದ್ಯುತ್ ಯೋಜನೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು. 

ವಲಯ ಅರಣ್ಯ ವ್ಯಾಪ್ತಿ ಹಾಗೂ ಯಸಳೂರು ವಲಯ ಅರಣ್ಯ ವ್ಯಾಪ್ತಿಯ ರಕ್ಷಿತ ಅರಣ್ಯಗಳಲ್ಲಿ ಎಂಟಕ್ಕೂ ಹೆಚ್ಚು ಜಲ ವಿದ್ಯುತ್ ಯೋಜನೆಗಳು ಆರಂಭಗೊಂಡಿವೆ. ಇವುಗಳಿಂದಾಗಿ ಸಾಕಷ್ಟು ಅರಣ್ಯ ನಾಶ, ಶಬ್ದ ಮಾಲಿನ್ಯ, ಜಲ ಮಾಲಿನ್ಯಗಳಿಂದ ಕಾಡಾನೆಗಳು ಸೇರಿದಂತೆ ವನ್ಯಜೀವಿಗಳು ಕಾಡು ಬಿಟ್ಟು ಗ್ರಾಮೀಣ ಪ್ರದೇಶಗಳಿಗೆ ದಾಳಿ ನಡೆಸುತ್ತಿವೆ.
 
ಇದರಿಂದ ಪ್ರಾಣ ಹಾನಿ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಉಂಟಾಗುತ್ತಿದೆ. ಆನೆಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದಕ್ಕೆ  ಜಲ ವಿದ್ಯುತ್ ಯೋಜನೆಗಳು ಪ್ರಮುಖ ಕಾರಣ ಎಂಬ ಆರೋಪಗಳ ಕುರಿತು ರಾಜ್ಯ ಹೈಕೋರ್ಟ್ ಮೊಕದ್ದಮೆ ದಾಖಲಿಸಿಕೊಂಡಿತ್ತು.

ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಈ ಹಿಂದೆಯೂ ಸಹ ಆನೆ ಸಮಸ್ಯೆ ಇರುವ ಪ್ರದೇಶಗಳಿಗೆ ನ್ಯಾಯಾಲಯ ನೇಮಿಸಿದ್ದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಎರಡನೇ ಬಾರಿ ಭೇಟಿ ನೀಡಿದ ತಂಡದಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ವಿಶ್ವನಾಥ ಅಂಗಡಿ, ಆನೆ ಕಾರಿಡಾರ್ ಟಾಸ್ಕ್‌ಪೋರ್ಸ್ ಅಧ್ಯಕ್ಷ ಸುಕುಮಾರ್, ಪಿಸಿಸಿಎಫ್ ದೀಪಕ ಶರ್ಮಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್, ಅರಣ್ಯ ಅಧಿಕಾರಿ ಕರಿಯಪ್ಪ, ವಕೀಲ ದೀಪಕ್, ಎಸಿಎಫ್ ಚಂದ್ರೇಗೌಡ, ಆರ್‌ಎಫ್‌ಓ ರತ್ನಪ್ರಭ, ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್ ಇದ್ದರು.

ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆಯ ಹೊಂಗಡಹಳ್ಳ, ಬಟ್ಟೆಕುಮರಿ, ಯಡಕೇರಿಗಳಲ್ಲಿ ಮಾರುತಿ ಪವರ್ ಜೆನ್ ಕಂಪೆನಿಯು ಕಾನೂನು ಉಲ್ಲಂಘಿಸಿ ಈಗಾಗಲೇ ಕೈಗೊಂಡಿರುವ ಯೋಜನೆಯ ಕಾಮಗಾರಿ ಹಾಗೂ ಪರವನಾಗಿ ಇಲ್ಲದೇ ಬೆಟ್ಟವನ್ನು ಕೊರೆದು ನಿರ್ಮಿಸಿರುವ ಸುರಂಗ, ಸಾವಿರಾರು ಟಿಪ್ಪರ್ ಲೋಡ್‌ನಷ್ಟು ಕಲ್ಲು, ಮಣ್ಣನ್ನು ಅರಣ್ಯ ಹಾಗೂ ನದಿಗೆ ಸುರಿದು  ಹಾನಿ ಮಾಡಿರುವ ಪ್ರದೇಶಗಳು, ಸರ್ಕಾರದ ಅನುಮತಿ ಇಲ್ಲದೆ ಎರಡು ಕಬ್ಬಿಣದ ಸೇತುವೆಗಳ ನಿರ್ಮಾಣ,  ಕಾಡಿನೊಳಗೆ ನಿರ್ಮಿಸಿರುವ ಕಾಂಕ್ರೀಟ್ ಕಟ್ಟಡ, ಪರವಾನಿಗೆ ಇಲ್ಲದೆ ಸಾವಿರಾರು ಮರಗಳನ್ನು ಕಡಿದು ರಸ್ತೆಗಳನ್ನು ನಿರ್ಮಿಸಿರುವುದನ್ನು ತಂಡವು ಪರಿಶೀಲಿಸಿತು.

ನಂತರ ನಾಗಾರ್ಜುನ ಜಲ ವಿದ್ಯುತ್ ಉತ್ಪಾದನಾ ಘಟಕ ಯೋಜನೆಯಿಂದ ಅರಣ್ಯ ನಾಶಗೊಂಡಿರುವುದು, ಕಾಡಿನ ಮಧ್ಯದಲ್ಲಿ ನಿರ್ಮಿಸಿರುವ ಹೈಟೆನ್ಷನ್ ವಿದ್ಯುತ್ ಮಾರ್ಗಗಳನ್ನೂ ತಂಡದ ಸದಸ್ಯರು ಪರಿಶೀಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.