ADVERTISEMENT

ಪುರಾವೆ ಒದಗಿಸಿ, ನೀರು ತನ್ನಿ: ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ತುಮಕೂರು: ‘ನೇತ್ರಾವತಿ ನದಿ ನೀರನ್ನು ಬಯಲು ಸೀಮೆಗೆ ಹರಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ಯೋಜನೆಗೆ ಆ ಭಾಗದ ಜನರ ಪರವಾಗಿ ತಾವು ಒಪ್ಪುವುದಿಲ್ಲ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಗ್ರಾಮೀಣ ಕೃಷಿಕರು ಮತ್ತು ಮಹಿಳೆಯರ ಆರ್ಥಿಕಾಭಿವೃದ್ಧಿಗೆ ತುಮಕೂರು ಜಿಲ್ಲೆಗೂ ವಿಸ್ತರಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಘೋಷಣಾ ಕಾರ್ಯಕ್ರಮವನ್ನು ನಗರದಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನೇತ್ರಾವತಿ ನೀರು ಸಮುದ್ರಕ್ಕೆ ಸುಮ್ಮನೆ ಹರಿದು ಹೋಗುವುದಿಲ್ಲ. ಆ ನೀರಿನೊಂದಿಗೆ ಮೀನುಗಾರಿಕೆ, ಭೂಮಿಯ ಫಲವತ್ತತೆ, ಇನ್ನಿತರ ವ್ಯವಹಾರಗಳು ಬೆಸೆದುಕೊಂಡಿವೆ. ಬಯಲು ಸೀಮೆಗೆ ನೀರು ಕೊಡಲೇಬಾರದೆನ್ನುವುದು ನಮ್ಮ ನಿಲುವಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಪರ್ಯಾಯ ವ್ಯವಸ್ಥೆ ಮತ್ತು ಸೂಕ್ತ ಪರಿಹಾರ ಕಲ್ಪಿಸಿದ ಮೇಲೆ, ಅಲ್ಲಿನ ಜನಜೀವನ, ಪರಿಸರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬುದನ್ನು ನೀರಾವರಿ ತಜ್ಞರು, ಎಂಜಿನಿಯರ್‌ಗಳು ಮನದಟ್ಟು ಮಾಡಿದ ಮೇಲೆ ಯೋಜನೆಯ ಬಗ್ಗೆ ಯೋಚಿಸಬಹುದು. ಯೋಜನೆಯ ಬಗ್ಗೆ ಚರ್ಚೆ ನಡೆಯಲಿ. ನಾನು ಅಲ್ಲೊಂದು, ಇಲ್ಲೊಂದು ಮಾತನಾಡಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲವೆಂದು ನೀರಾವರಿ ತಜ್ಞ ಪರಮಶಿವಯ್ಯ ವರದಿ ನೀಡಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ‘ಒಬ್ಬ ವಿಜ್ಞಾನಿ ಹೇಳಿದ ಸತ್ಯ ನೂರು ಬಾರಿ ಬದಲಾಗುತ್ತವೆ. ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ನೇತ್ರಾವತಿ ನದಿ ತಿರುವು ಯೋಜನೆಗೆ ವಿರೋಧವಿದೆ’ ಎಂದು ಹೆಗ್ಗಡೆ ತಿಳಿಸಿದರು.

ಸಮಾರಂಭದಲ್ಲೇ ಹೆಗ್ಗಡೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಜಿ.ಎಸ್.ಬಸವರಾಜು, ‘ನೇತ್ರಾವತಿ ನದಿಯನ್ನೇ ತಿರುಗಿಸುವುದಿಲ್ಲ. ಸಮುದ್ರಕ್ಕೆ 600ರಿಂದ 700 ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಅದರಲ್ಲಿ ಕೇವಲ 50ರಿಂದ 60 ಟಿಎಂಸಿ ನೀರನ್ನು ಬಯಲು ಸೀಮೆಗೆ ಸುರಂಗ ಮಾರ್ಗದಲ್ಲಿ ಕುಡಿಯುವ ಬಳಕೆಗೆ ಮಾತ್ರ ತರುವುದು ಯೋಜನೆ ಉದ್ದೇಶ. ವೀರೇಂದ್ರ ಹೆಗ್ಗಡೆಯವರ ಇಚ್ಛೆಗೆ ವಿರುದ್ಧವಾಗಿ ಯೋಜನೆಗೆ ಹೋರಾಡುವುದಿಲ್ಲ. ಅವರ ಆಶೀರ್ವಾದದಿಂದಲೇ ಬಯಲು ಸೀಮೆಗೆ ಕುಡಿಯುವ ನೀರು ತರುತ್ತೇವೆ’ ಎಂದರು.

‘ಬಯಲು ಸೀಮೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಜತೆಗೆ ಫ್ಲೋರೈಡ್ ಸಮಸ್ಯೆಯಿಂದಾಗಿ ಜನರ ಆರೋಗ್ಯ ಕ್ಷೀಣಿಸುತ್ತಿದೆ. ಜೀವಿತಾವಧಿಯೂ ಕುಸಿಯುತ್ತಿದೆ. ಹರೆಯದ ಯುವಕ, ಯುವತಿಯರಿಗೂ ಮುಪ್ಪು ಕಾಣಿಸುತ್ತಿದೆ. ನೇತ್ರಾವತಿ ಯೋಜನೆ ಸಂಬಂಧ ವಿವಾದ ಸೃಷ್ಟಿಸಲು ಬಯಸುವುದಿಲ್ಲ. ವೀರೇಂದ್ರ ಹೆಗ್ಗಡೆಯವರು ಜಿಲ್ಲೆಯ ಅಭಿವೃದ್ಧಿಗೆ ಈಗ ದೇವರಾಗಿ ಕಾಲಿಟ್ಟಿದ್ದಾರೆ. ಅವರ ಆಶೀರ್ವಾದದ ಮೂಲಕವೇ ಜಿಲ್ಲೆಗೆ ನೀರು ತರೋಣ’ ಎಂದರು.

ತುಮಕೂರು, ಚಿತ್ರದುರ್ಗ, ಕೋಲಾರ ಸೇರಿದಂತೆ ಬಯಲು ಸೀಮೆಯ ಆರೇಳು ಜಿಲ್ಲೆಗಳು ಫ್ಲೋರೈಡ್ ಸಮಸ್ಯೆ ಎದುರಿಸುತ್ತಿವೆ. ಕಡಿಯುವ ನೀರಿನ ಸಮಸ್ಯೆ ನೀಗಿಸಲು ನೇತ್ರಾವತಿ ನೀರು ಕೊಡಲು ವೀರೇಂದ್ರ ಹೆಗ್ಗಡೆಯವರು ನೆರವಾಗಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.