ಬೆಂಗಳೂರು: ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದ ಕೈದಿಗಳ ಪೈಕಿ 47 ಜನ ಜೈಲಿಗೆ ವಾಪಸ್ ಬಂದಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.
ಪೆರೋಲ್ ಪಡೆದು ಜೈಲಿನಿಂದ ಹೊರಹೋಗಿರುವ ಅಪರಾಧಿಗಳ ಕುರಿತು ವಿವರ ನೀಡುವಂತೆ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಡಾ.ಕೆ. ಭಕ್ತವತ್ಸಲ ಮತ್ತು ಕೆ.ಎನ್. ಕೇಶವ ನಾರಾಯಣ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿತ್ತು.
ವಾಪಸು ಬಾರದ ಕೈದಿಗಳ ಪೈಕಿ 30 ಜನ ಬೆಂಗಳೂರಿನ ಜೈಲಿನಲ್ಲಿದ್ದವರು. ವಾಪಸ್ ಬಾರದವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ನ್ಯಾ. ಪದ್ಮರಾಜ ಆಯೋಗ: ಅರ್ಜಿ ವಜಾ
1995ರ ನಂತರ ನಡೆದ ಎಲ್ಲ ಡಿನೋಟಿಫಿಕೇಷನ್ (ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದು) ಪ್ರಕರಣಗಳ ತನಿಖೆಗೆ ರಚಿಸಲಾಗಿದ್ದ ನ್ಯಾಯಮೂರ್ತಿ ಬಿ. ಪದ್ಮರಾಜ ಆಯೋಗದ ಅವಧಿ ವಿಸ್ತರಿಸಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಲು ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಆಯೋಗದ ಅವಧಿಯನ್ನು ವಿಸ್ತರಿಸುವಂತೆ, ಎಲ್ಲ ಡಿನೋಟಿಫಿಕೇಷನ್ ಪ್ರಕರಣಗಳ ತನಿಖೆಯನ್ನು ಆಯೋಗದಿಂದಲೇ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿ ವಕೀಲ ಎನ್.ಪಿ. ಅಮೃತೇಶ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ನಡೆಸಿತ್ತು. ಅರ್ಜಿ ವಜಾಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.