ADVERTISEMENT

ಪೊಲೀಸ್‌ ವಾಹನದಲ್ಲಿ ಹಣ ಸಾಗಣೆ ಆರೋಪ: ದೇವೇಗೌಡ –ಸಿ.ಎಂ ಜಗಳ್ಬಂದಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 20:10 IST
Last Updated 5 ಏಪ್ರಿಲ್ 2018, 20:10 IST
ಪೊಲೀಸ್‌ ವಾಹನದಲ್ಲಿ ಹಣ ಸಾಗಣೆ ಆರೋಪ: ದೇವೇಗೌಡ –ಸಿ.ಎಂ ಜಗಳ್ಬಂದಿ
ಪೊಲೀಸ್‌ ವಾಹನದಲ್ಲಿ ಹಣ ಸಾಗಣೆ ಆರೋಪ: ದೇವೇಗೌಡ –ಸಿ.ಎಂ ಜಗಳ್ಬಂದಿ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಅಕ್ರಮ ನಡೆಸಲು ಗೃಹ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ನಾನು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ, ದೇವೇಗೌಡರೇ ಹಿಂದೆ ಆ ಕೆಲಸ ಮಾಡಿರಬಹುದು’ ಎಂದು ತಿರುಗೇಟು ನೀಡಿದ್ದಾರೆ.

ಗುರುವಾರ ಬೆಳಿಗ್ಗೆ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಅವರನ್ನು ಭೇಟಿ ಮಾಡಿ ಆರು ಪ್ರತ್ಯೇಕ ದೂರುಗಳನ್ನು ನೀಡಿದ ಬಳಿಕ ದೇವೇಗೌಡ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.  ಗೌಡರ ಹೇಳಿಕೆಗೆ ಸಿದ್ದರಾಮಯ್ಯವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು.

ಪೊಲೀಸ್‌ ವಾಹನದಲ್ಲಿ ಹಣ ಸಾಗಣೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಅಕ್ರಮ ನಡೆಸಲು ಪೊಲೀಸ್‌ ವಾಹನ ಮತ್ತು ಆಂಬುಲೆನ್ಸ್‌ಗಳಲ್ಲಿ ಹಣ ಸಾಗಿಸುತ್ತಿದೆ. ಈ ಅಕ್ರಮಕ್ಕೆ ಕೆಲವು ಅಧಿಕಾರಿಗಳು ರಕ್ಷಣೆ ನೀಡುತ್ತಿದ್ದಾರೆ.  ಮುಖ್ಯಮಂತ್ರಿ ಕಚೇರಿಯಲ್ಲಿರುವ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣೆಗಾಗಿ ಹಣ ಸಂಗ್ರಹಿಸುತ್ತಿರುವುದನ್ನೂ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇನೆ’ ಎಂದು ದೇವೇಗೌಡ  ತಿಳಿಸಿದರು.

ADVERTISEMENT

‘ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಇದರ ಬಗ್ಗೆ ನನಗೆ ಅನುಮಾನ ಇದೆ. ಕೆಂಪಯ್ಯ ಅವರನ್ನು ಗೃಹ ಇಲಾಖೆಗೆ ಸಲಹೆಗಾರರನ್ನಾಗಿ ನೇಮಿಸಿದ ಬಳಿಕ, ಗೃಹ ಇಲಾಖೆಯಲ್ಲಿ ಕಾನೂನು ಸಡಿಲವಾಗಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾ
ಗಿದೆ. ಸೂಪರ್‌ ಹೋಂ ಮಿನಿಸ್ಟರ್‌ ರೀತಿ ಕೆಂಪಯ್ಯ ವರ್ತಿಸುತ್ತಿದ್ದಾರೆ.

ಕಚೇರಿಯನ್ನು ವಿಕಾಸಸೌಧದಿಂದ ಬೇರೆಡೆಗೆ ವರ್ಗಾಯಿಸಿದ್ದರೂ ಇಲಾಖೆಯ ಮೇಲೆ ನಿಯಂತ್ರಣ ಸಾಧಿಸಿದ್ದಾರೆ’ ಎಂದು ವಿವರಿಸಿರುವುದಾಗಿ ಹೇಳಿದರು.

ದುರ್ಬಳಕೆ ಮಾಡಿಲ್ಲ: ಸಿದ್ದರಾಮಯ್ಯ

‘ನಾವು ಯಾವುದೇ ಅಧಿಕಾರಿಗಳನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಂಡಿಲ್ಲ. ಈ ರೀತಿ ಆರೋಪ ಮಾಡಿರುವ ದೇವೇಗೌಡರೇ ಹಿಂದೆ ಅಧಿಕಾರದಲ್ಲಿ ಇದ್ದಾಗ ದುರ್ಬಳಕೆ ಮಾಡಿಕೊಂಡಿರಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಒಂದು ವೇಳೆ ನಾವು ಅಕ್ರಮ ಮಾಡಿದ್ದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.