ADVERTISEMENT

ಪ್ರಜಾಪ್ರಗತಿ ರಂಗ-ಜನಾಧಿಕಾರಕ್ಕಾಗಿ ಜನಾಂದೋಲನ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST

ಬೆಂಗಳೂರು: ಶೋಷಿತ ಜನರ ಕೈಗೆ ಅಧಿಕಾರದ ಸೂತ್ರ ನೀಡುವ ಜನಪರ ಪರ್ಯಾಯ ರಾಜಕಾರಣದ ಉದ್ದೇಶದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜಯಂತಿಯ ಸಂದರ್ಭದಲ್ಲಿ `ಪ್ರಜಾಪ್ರಗತಿ ರಂಗ-ಜನಾಧಿಕಾರಕ್ಕಾಗಿ ಜನಾಂದೋಲನ~ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಅಸ್ವಿತ್ವಕ್ಕೆ ಬಂತು.

ಪ್ರಜಾಪ್ರಗತಿ ರಂಗದ ಸಂಚಾಲನ ಸಮಿತಿಯಲ್ಲಿ ರಾಜ್ಯ ರೈತ ಸಂಘ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬಿಎಸ್‌ಪಿ, ಎಲ್‌ಜೆಪಿ, ಸರ್ವೋದಯ ಕರ್ನಾಟಕ ಪಕ್ಷ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಸಮತಾ ಸೈನಿಕ ದಳ, ಪಾಪ್ಯುಲರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ), ಅಲೆಮಾರಿ ಬುಡಕಟ್ಟು ಮಹಾಸಭಾ, ಆಲ್ ಇಂಡಿಯಾ ಕ್ರಿಶ್ಚಿಯನ್ ಕೌನ್ಸಿಲ್, ದಲಿತ- ಕ್ರಿಶ್ಚಿಯನ್ ಒಕ್ಕೂಟ, ದಲಿತ ಸೇನೆ ಇವೆ. ಈ ರಂಗ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗೆ ಪರ್ಯಾಯವಾಗಿ ಜನಪರ ಹೋರಾಟ ಮಾಡುವ ಉದ್ದೇಶ ಹೊಂದಿದೆ. 

ರೈತ ಚಳವಳಿಯ ಸಂಸ್ಥಾಪಕ ಕಡಿದಾಳ್ ಶಾಮಣ್ಣ ಪ್ರಜಾಪ್ರಗತಿ ರಂಗ ಉದ್ಘಾಟಿಸಿ ಮಾತನಾಡಿ, `ಪ್ರಜಾಪ್ರಗತಿ ರಂಗ ಹೊಸ ಪ್ರಯತ್ನ ಅಲ್ಲ. ಈ ಹಿಂದೆ ಪ್ರಗತಿ ರಂಗಕ್ಕೆ ಚಾಲನೆ ನೀಡಲಾಗಿತ್ತು. ಲಂಕೇಶ್, ರಾಮದಾಸ್ ಅವರ ಕಾಲದಲ್ಲಿ ಪಕ್ಷ ಯಶಸ್ವಿಯಾಗುವ ನಿರೀಕ್ಷೆ ವ್ಯಕ್ತವಾಗಿತ್ತು. ಪ್ರಗತಿರಂಗ ಹಾಗೂ ರಾಜ್ಯ ರೈತ ಸಂಘವನ್ನು ಶ್ರೀರಂಗಪಟ್ಟಣದಲ್ಲಿ ಒಟ್ಟಿಗೆ ಸೇರಿಸುವ ಪ್ರಯತ್ನ ಆಗಿತ್ತು. ಕೊನೆಯ ಕ್ಷಣದಲ್ಲಿ ರೈತ ಸಂಘದ ಅಧ್ಯಕ್ಷ ಪ್ರೊ. ನಂಜುಂಡಸ್ವಾಮಿ ಒಟ್ಟಿಗೆ ಸೇರಲು ನಿರಾಕರಿಸಿದರು. ಅಲ್ಲಿಗೆ ಪ್ರಗತಿರಂಗದ ಯತ್ನಕ್ಕೂ ಹಿನ್ನಡೆಯಾಯಿತು~ ಎಂದು ನೆನಪಿಸಿಕೊಂಡರು.

`ಈಗ ರೈತ ಸಂಘ ಪ್ರಗತಿರಂಗವನ್ನು ಸೇರಿದೆ. ಈ ಪ್ರಯತ್ನ ಯಶಸ್ವಿಯಾಗಬೇಕು. ನಾವೆಲ್ಲ ಮೂರು ತಿಂಗಳು ಮನೆ ಬಿಟ್ಟು ಹೋರಾಟ ಮಾಡಿದರೆ ಪಕ್ಷಕ್ಕೆ ಭದ್ರ ಬುನಾದಿ ಹಾಕಲು ಸಾಧ್ಯ~ ಎಂದು ಅವರು ಪ್ರತಿಪಾದಿಸಿದರು.
`ಮತದಾರರು ನಮ್ಮ ಜೇಬಿನಲ್ಲಿದ್ದಾರೆ ಎಂಬ ಭ್ರಮೆಯಲ್ಲಿ ರಾಜಕೀಯ ನಾಯಕರು ಇದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ವಿಶ್ವದ ಯಾವುದೇ ರಾಷ್ಟ್ರದಲ್ಲೂ ಕಂಡು ಕೇಳರಿಯದ ಹಿಂಸಾಚಾರ ನಮ್ಮಲ್ಲಿ ಸಂಭವಿಸಲಿದೆ. ಮಹಾತ್ಮ ಗಾಂಧೀಜಿ ಹಾಗೂ ಜಯಪ್ರಕಾಶ್ ನಾರಾಯಣ್ ಅವರಂತಹ 100 ಮಂದಿ ಹುಟ್ಟಿ ಬಂದರೂ ಹಿಂಸಾಚಾರ ತಡೆಗಟ್ಟುವುದು ಅಸಾಧ್ಯ~ ಎಂದು ಅವರು ಎಚ್ಚರಿಸಿದರು.

ಪ್ರಜಾಪ್ರಗತಿ ರಂಗದ ವಕ್ತಾರ ಡಾ.ಸಿ.ಎಸ್. ದ್ವಾರಕಾನಾಥ್ ಮಾತನಾಡಿ, `ಜೈಲಿಗೆ ಹೋಗಿ ಬಂದ ರಾಜಕಾರಣಿಗಳಿಗೆ ಮಠಾಧಿಪತಿಗಳು ಬೀದಿಗಿಳಿದು ಬೆಂಬಲ ಸೂಚಿಸುತ್ತಿರುವುದು ಖಂಡನೀಯ. ಈಗಿನ ಕಾಲಘಟ್ಟದಲ್ಲಿ ಪರ್ಯಾಯ ರಾಜಕಾರಣ ಅಗತ್ಯ. ಶಾಂತವೇರಿ ಗೋಪಾಲಗೌಡ ಅವರಂತಹ ರಾಜಕಾರಣಿ ಈಗ ಯಾರೂ ಇಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಆಶಯ ಭಾಷಣ ಮಾಡಿ, `ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಹಾಗೂ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಇರುವವರೆಗೆ ಖಾಸಗೀಕರಣ ಹಾಗೂ ಕೇಸರೀಕರಣ ಜೀವಂತ ಇರುತ್ತದೆ. ಇವರು ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಸದಾ ಅಪಾಯಕಾರಿಗಳು~ ಎಂದು ಆರೋಪಿಸಿದರು.

ಪ್ರಜಾಪ್ರಗತಿ ರಂಗ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ರಜಾ ಪ್ರಗತಿ ರಂಗದ ರಾಜ್ಯ ಸಂಚಾಲಕ ಅಬ್ದುಲ್ ಮಜೀದ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್. ಮೋಹನರಾಜ್, ಅಹಿಂದ ಮುಖಂಡ ಲೋಲಾಕ್ಷ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಮಹಮ್ಮದ್ ಇಲಿಯಾಸ್ ತುಂಬೆ, ಲೋಕಜನಶಕ್ತಿ ಪಾರ್ಟಿಯ ಎಂ. ಪ್ರಭಾವತಿ ಮತ್ತಿತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.