ವಿಜಾಪುರ: ಅಲ್ಲಿ ಅತ್ಯಾಚಾರದ ವಿರುದ್ಧ ಆಕ್ರೋಶ ಮಡುಗಟ್ಟಿತ್ತು, ನೆಲ, ಜಲ, ಭಾಷೆಯ ಬಗ್ಗೆ ಪ್ರೀತಿ ತಾನೇ ತಾನಾಗಿತ್ತು. ಅದು ಹತ್ತಾರು ಭಾವಗಳ, ಹಲವಾರು ಸಂವೇದನೆಗಳ, ವಿಭಿನ್ನ ದನಿಗಳ ಸಂಗಮವಾಗಿತ್ತು.
ಇಂಥದ್ದೊಂದು ಮಧುರ ಭಾವನೆಗಳ ಪ್ರವಾಹ ಹರಿದದ್ದು ಸೋಮವಾರ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ. ಸುಮಾರು 30 ಕವಿಗಳು ತಮ್ಮ ಕವಿತೆಯನ್ನು ಓದಿ ಭಾವನೆಗಳನ್ನು ಹರುವಿದರು.
`ಹುತ್ತದೊಳಗಿನ ಮಾತ ಚಿಲ್ಲಂತ ಚೆಲ್ಲಿದವು ಹಾಡಕ್ಕಿ ಗಂಟಲೊಳಗೆ' ಎಂಬ ಸಾಲುಗಳಿರುವ `ಮದಗಕ್ಕೆ ಮಳೆಯಿಲ್ಲವೆ...' ಕವಿತೆ ವಾಚಿಸಿದ ಶಂಕರ ಕಟಗಿ ಕೇಳುಗರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದರು.
`ಈ ಲೋಕದ ಒಂದು ಗಿಡ ನನ್ನನ್ನು ಬದಲಾಯಿಸುತ್ತದೆ' ಎಂದು ಹೇಳುತ್ತ ಗಿಡ, ಮರ, ಪ್ರಕೃತಿಯೊಂದಿಗಿನ ಮನುಷ್ಯನ ಅನನ್ಯ ಸಂಬಂಧವನ್ನು ತಮ್ಮ `ಮೂರು ಗಿಡ ಮರಗಳು' ಕವಿತೆಯಲ್ಲಿ ಅನಾವರಣ ಗೊಳಿಸಿದವರು ರಾಯಚೂರಿನ ಕವಿ ಶಿವರಾಜ ಬೆಟ್ಟದೂರು.
ಸೋಮಣ್ಣ ಹೊಂಗಾಳೆ, ತಮ್ಮ ಕವಿತೆ `ಮತ್ತೆ ಏಕೆ ಹುಟ್ಟಿ ಬರಲಿಲ್ಲ ಅಂಬೇಡ್ಕರ್ ಅವರು' ಎಂದು ಕೇಳಿಕೊಳ್ಳುತ್ತಲೇ `ಭ್ರಷ್ಟತೆಯ ಕತ್ತಲೆ ಕಳೆಯಲು ಮತ್ತೆ ಹುಟ್ಟಿ ಬಾ' ಎಂಬ ಆಶಯ ವ್ಯಕ್ತಪಡಿಸಿದರು. ಮಾಯಾದೇವಿ ಮಾಲಿಪಾಟೀಲ ತಮ್ಮ `ಹಳದಿ ಹಾಲು' ಕವಿತೆಯಲ್ಲಿ ಅಂತರಂಗದ ಅನಿಸಿಕೆಗೆ ಮಾತಿನ ರೂಪ ನೀಡಿದ್ದರು. `ಆಕ್ರೋಶ ಆಗಲಿ ಆಂದೋಲನ' ಕವಿತೆಯಲ್ಲಿ ಆಧುನಿಕ ಭಾರತದ ವಾಸ್ತವ ಚಿತ್ರಣ ನೀಡಿದವರು ಮಂಜುನಾಥ ಪಾಳ್ಯ.
ಟಿ.ಎ. ಅಂಬಿಕಾ, `ಅಮ್ಮನ ಅಡಿ' ಕವಿತೆಯಲ್ಲಿ ನನ್ನ ಅಮ್ಮ ಜಾನಪದ ಅಮ್ಮ ಅಲ್ಲ ಎನ್ನುತ್ತಲೇ `ಏನೆಂದು ಹೇಳಲಿ ಮಗಳಿಗೆ ಕಥೆ ಕಟ್ಟಿ ಅಮ್ಮ ಹೇಳಿದ ಕಥೆಯನ್ನು' ಎಂದು ಚಿಂತನೆಗೆ ಹಚ್ಚಿದರು. ರೇಖಾ ಪಾಟೀಲರು `ಕಿಚ್ಚು ಹೊತ್ತಿಸಿಟ್ಟು ಅತ್ಯಾಚಾರ ಎಸಗುವರು ಎಂದರೇನು ಫಲ?' ಎಂದು ಪ್ರಶ್ನಿಸಿದರೆ, `ಕಲ್ಯಾಣದ ಮುಂದಿನ ದಾರಿ' ಕುರಿತು ಚೆನ್ನಪ್ಪ ಅಂಗಡಿ ಬೊಮ್ಮನಹಳ್ಳಿ ಕವಿತೆ ವಾಚಿಸಿದರು. ವೀರಣ್ಣ ಮಡಿವಾಳರ `ಹೀಗೆ ಮುಂದುವರಿದರೆ...' ಕವಿತೆಯಲ್ಲಿ ದೇಶದ ವಾಸ್ತವದ ಹಸಿ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟರು. ಬಸು ಬೇವಿನಗಿಡದ ಅವರು `ಹೊಲ ಮಾರಿ ಉಳಿದದ್ದು' ಕವಿತೆಯಲ್ಲಿ ವರ್ತಮಾನದ ಚಿತ್ರಣ ನೀಡಿದರು.
ಇನ್ನು ಕೆಲವರು ದೇಶ, ಭಾಷೆ, ಜಲದ ಕುರಿತಾಗಿ ತಾವು ಕಟ್ಟಿದ ಕವಿತೆಗಳನ್ನು ವಾಚಿಸಿದರು. ಈ ವಿಷಯ ಕುರಿತು ಆವೇಶಭರಿತರಾಗಿ ಕವಿಗಳು ವಾಚಿಸಿದ ಕವಿತೆಗಳಿಗೆ ಚಪ್ಪಾಳೆಗಳು ಜೋರಾಗಿ ಬಿದ್ದವು. ಇನ್ನು ಕೆಲವು ಕವಿತೆಗಳಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.
ಕವಿಗೋಷ್ಠಿಯಲ್ಲಿ ವ್ಯಕ್ತವಾದ ಆಕ್ರೋಶ, ಅಸಮಾನತೆ, ಅತ್ಯಾಚಾರದ ವಿರುದ್ಧ ಸಿಡಿದ ಕವಿತೆಗಳ ಬಗ್ಗೆ ಪ್ರತಿಕ್ರಿಯಿಸಿದ ಗೋಷ್ಠಿಯ ಅಧ್ಯಕ್ಷ ವಿಷ್ಣು ನಾಯ್ಕ, `ನಮ್ಮ ಕನ್ನಡ ಕಾವ್ಯ ಪರಂಪರೆಯಲ್ಲಿ ಸ್ವಾತಂತ್ರ್ಯದ ಕನಸು, ಸಮಾನತೆಯ ಹಸಿವು ಪ್ರಧಾನ ಭೂಮಿಕೆಯಾಗಿತ್ತು. ಆದರೆ, ಈಗಿನವರೂ ಇದನ್ನೇ ಪ್ರಧಾನ ಕಾಳಜಿಯನ್ನಾಗಿ ಇಟ್ಟುಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ದೇಶಕ್ಕೆ ಸಿಕ್ಕಿದೆ. ನಮಗೆ ಸಿಕ್ಕಿಲ್ಲ. ದೇಶದ ಶೇ 50 ಜನರಿಗೆ ಸ್ವಾತಂತ್ರ್ಯ ಬಂದಿಲ್ಲ. ಶೇ 35 ಜನರು ಬಡತನ ರೇಖೆಯ ಕೆಳಗಿದ್ದಾರೆ, ಅವರಿಗೆ ಸ್ವಾತಂತ್ರ್ಯ ಬಂದಿಲ್ಲ' ಎಂದರು.
`70-80ರ ದಶಕದಲ್ಲಿ `ಕಾವ್ಯವಾಗಲಿ ಖಡ್ಗ' ಎನ್ನುತ್ತಿದ್ದರು. ಆದರೆ, ಈಗ `ಖಡ್ಗ ಹರಿತವಾಗಲಿ' ಎನ್ನಬೇಕಾಗಿದೆ. ಮನುಷ್ಯ, ರಾಜಕಾರಣಿಗಳ ಬಳಿಗೆ ಹೋದರೆ ಸಾಲದು. ನಾವು ಅವರ ಒಳಗೆ ಪ್ರವೇಶ ಮಾಡಬೇಕಿದೆ. ದೀನ ದಲಿತರ ಮನೆಗೆ ಹೋದರೆ ಸಾಲದು ಅವರ ಒಳಗೆ ಹೋಗಬೇಕಿದೆ. ಕಣ್ಣಿಗೆ ಕಾಣುವ ವ್ಯವಸ್ಥೆಯ ಬಗ್ಗೆ ಕವಿತೆ ಬರೆಯಬೇಕಿಲ್ಲ. ಕಣ್ಣಿಗೆ ಕಾಣದ ಕೊಳಕು ಮನಸ್ಸುಗಳನ್ನು ದುರ್ಬೀನು ಹಾಕಿ ಹುಡುಕಬೇಕಿದೆ' ಎಂದು ಅಭಿಪ್ರಾಯಪಟ್ಟರು.
`ಕೇವಲ ಕವಿತೆ ಬರೆದು ಮುದ್ರಿಸಿದರೆ ಅದಕ್ಕೆ ಓದುವ ಬೆಲೆ ಮಾತ್ರ ಇರುತ್ತದೆ. ಅದರಲ್ಲಿ ಹೇಳಿದ ಮಾತನ್ನು ಆಂದೋಲನ ಮಾಡಿ ಸಮಾಜ ಪರಿವರ್ತನೆ ಮಾಡಬೇಕು. ಬಂಡಾಯ ಎಲ್ಲರ ಮನಸ್ಥಿತಿಯಲ್ಲಿದೆ. ಅದು ಹದವಾದ ರೀತಿಯಲ್ಲಿ ವ್ಯಕ್ತವಾಗಬೇಕಿದೆ' ಎಂದ ಅವರು `ಅರಳುವುದು ಅಕ್ಷರವು ಹೂವೇ ಆಗಿ ಪ್ರೀತಿ ಇರುವವರೆಗೆ ಕಾವ್ಯ ಸಾಯುವುದಿಲ್ಲ...' ಎಂದು ತಮ್ಮ ಕವಿತೆಯ ಕೆಲ ಸಾಲುಗಳನ್ನು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.