ಗುಲ್ಬರ್ಗ/ ಚಿಕ್ಕಮಗಳೂರು: ಗುಲ್ಬರ್ಗ ತಾಲ್ಲೂಕಿನ ಆಳಂದ ಸಮೀಪದ ಖಜೂರಿ–ಉಮ್ಮರ್ಗಾ ರಸ್ತೆ ಮತ್ತು ಚಿಕ್ಕಮಗಳೂರು ಜಿಲ್ಲೆ ತರಿಕೇರೆ ರಸ್ತೆಯಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಹತ್ತು ಮಂದಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಗುಲ್ಬರ್ಗ ವರದಿ: ಆಳಂದ ಸಮೀಪದ ಖಜೂರಿ–ಉಮ್ಮರ್ಗಾ ರಸ್ತೆಯಲ್ಲಿ ಶನಿವಾರ ನಸುಕಿನಲ್ಲಿ ಲಾರಿ–ಕ್ರೂಸರ್ ಮಧ್ಯೆ ಡಿಕ್ಕಿ ಸಂಭವಿಸಿ ಐವರು ಯುವಕರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಲ್ಲೆಯ ಸೇಡಂ ಪಟ್ಟಣದ ಕೋಳಿವಾಡ ಪುರಾಣ್ ಬಜಾರ್ ನಿವಾಸಿಗಳಾದ ಮೌಲಾಲಿ ಹೈದರಸಾಬ ಮುಲ್ಲಾ (22), ಕ್ರೂಜರ್ ಚಾಲಕ ಮಜರ್ ರಫೀಕ್ ಶೇಖ್ (24) ಶೇಖ್ ಶೇರಅಲಿ ಶೇಖ್ ಮಕ್ಬುಲ್ (25), ಮಜೀದ್ ಅಹ್ಮದ್ ಶಾಲವಾಲೆ (22), ಅಫಜಲಪುರ ಪಟ್ಟಣದ ಮಹ್ಮದ್ ಅಮೀರುದ್ದೀನ್ ಮಹ್ಮದ್ ಸಲೀಂ (23) ಮೃತಪಟ್ಟವರು. ನಾಲ್ವರು ಸ್ಥಳದಲ್ಲೆ ಮೃತಪಟ್ಟರೆ, ಒಬ್ಬ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮಹ್ಮದ್ ರಿಯಾ ಶಾಲವಾಲೆ, ಮಹ್ಮದ್ ಬಿಲಾಲ್ ಮತ್ತು ಜಗನ್ನಾಥ ವಿ.ಠಾಗ್ರೆ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರು ಮಹಾರಾಷ್ಟ್ರ, ಗೋವಾ ಪ್ರವಾಸಕ್ಕೆ ತೆರಳಿದ್ದರು.
ಚಿಕ್ಕಮಗಳೂರು ವರದಿ: ಕಬ್ಬು ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದು ಲಾರಿಯಲ್ಲಿ ಕುಳಿತಿದ್ದ ಭದ್ರಾವತಿ ಮೂಲದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, 18 ಮಂದಿ ಗಾಯಗೊಂಡ ಘಟನೆ ತರೀಕೆರೆ ರಸ್ತೆಯ ಕಾಮೇನಹಳ್ಳಿ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಮೃತರು ಭದ್ರಾವತಿ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದವರಾಗಿದ್ದು, 35ರಿಂದ 40 ವರ್ಷದೊಳಗಿನವರು. ಮೃತರಲ್ಲಿ ಇಬ್ಬರು ಮಹಿಳೆಯರು, ಮೂವರು ಪುರುಷರು ಇದ್ದಾರೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಬ್ಬು ಕಟಾವಿಗೆ 22 ಮಂದಿ ಕಾರ್ಮಿಕರು ಕಾಮೇನಹಳ್ಳಿಗೆ ಬಂದಿದ್ದರು. ಕಬ್ಬು ತುಂಬಿಕೊಂಡು ಲಾರಿ ಸಖರಾಯಪಟ್ಟಣ ಮಾರ್ಗವಾಗಿ ಭದ್ರಾವತಿ ಸಕ್ಕರೆ ಕಾರ್ಖಾನೆಗೆ ಹೋಗುತ್ತಿತ್ತು. ಕುಮಾರಗಿರಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ. ಕಬ್ಬಿನ ಲೋಡ್ ಮೇಲೆ ಕುಳಿತಿದ್ದ ಕಾರ್ಮಿಕರು ಲಾರಿ ಅಡಿ ಸಿಲುಕಿಕೊಂಡಿದ್ದರು. ಚಾಲಕ ಮತ್ತು ಸಹಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.