ADVERTISEMENT

ಪ್ರಧಾನಿ ನಗುಮುಖದ ಹಿಂದೆ ಏನಿದೆ ಗೊತ್ತಾ....

ನರೇಂದ್ರ ಮೋದಿ ವಿಶ್ರಾಂತಿ ಕೊಠಡಿಯಲ್ಲೊಂದು ಇಣುಕು ನೋಟ

ಡಿ.ಬಿ, ನಾಗರಾಜ
Published 10 ಮೇ 2018, 2:23 IST
Last Updated 10 ಮೇ 2018, 2:23 IST
ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಪ್ರಧಾನಮಂತ್ರಿ ಕಾರ್ಯಾಲಯ
ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಪ್ರಧಾನಮಂತ್ರಿ ಕಾರ್ಯಾಲಯ   

ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಗಾಗಿ, ದಣಿವರಿಯದ ಪ್ರಚಾರ ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯಾಸವಾಗುವುದಿಲ್ಲವೇ? ವಿಮಾನದಿಂದಿಳಿದು ಸಮಾವೇಶದ ಸ್ಥಳಕ್ಕೆ ಬರುವ ಅವರು, ಅದು ಮುಗಿಯುತ್ತಲೇ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡುವಾಗಲೂ ‘ಫ್ರೆಶ್‌’ ಆಗಿಯೇ ಇರುತ್ತಾರೆ ಹೇಗೆ? –ಇಂಥದ್ದೊಂದು ಪ್ರಶ್ನೆ ಸಾಕಷ್ಟು ಜನರಿಗೆ ಕಾಡಿರಬಹುದು. ಅದಕ್ಕೆ ಇಲ್ಲಿದೆ ಉತ್ತರ.

ಮಂಗಳವಾರ ಇಲ್ಲಿನ ಸಾರವಾಡದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮೋದಿ ಅವರಿಗೆ ವ್ಯವಸ್ಥೆ ಮಾಡಿದ್ದ ಸೌಕರ್ಯಗಳನ್ನು ನೋಡಿದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅವೆಲ್ಲವನ್ನೂ ಹಂಚಿಕೊಂಡರು. ಇಂಥ ಸೌಕರ್ಯಗಳನ್ನು ಮೋದಿ ಹೋದ ಕಡೆಯಲೆಲ್ಲ ಮಾಡುತ್ತಾರೆ.

ಸಮಾವೇಶದ ವೇದಿಕೆ ಹಿಂಭಾಗದಲ್ಲೇ ಹವಾನಿಯಂತ್ರಿತ– ಸುಸಜ್ಜಿತವಾದ ಮೂರು ಗ್ರೀನ್‌ ರೂಂ ಇದ್ದವು. ಈ ಮೂರರಲ್ಲಿ ಒಂದು, ಪ್ರಧಾನಿ ಬಳಸುವ ವಸ್ತುಗಳ ಪರಿಶೀಲನೆಗೆ, ಇನ್ನೊಂದು ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ಕಾರ್ಯನಿರ್ವಹಣೆಗೆ ಇತ್ತು. ಮತ್ತೊಂದು ಪ್ರಧಾನಿ ವಿಶ್ರಾಂತಿಗೆಂದೇ ವಿಶೇಷವಾಗಿ ರೂಪಿಸಲಾಗಿತ್ತು ಎಂದರು.

ADVERTISEMENT

ಪ್ರಧಾನಿ ತಂಗುವ ಕೊಠಡಿಯಲ್ಲಿ 25ಕ್ಕೂ ಹೆಚ್ಚು ಬಗೆಬಗೆಯ ವಸ್ತುಗಳನ್ನು ಇಟ್ಟಿದ್ದರು. ಅವರು ಕೂರಲು ದುಬಾರಿ ಬೆಲೆಯ ಸೋಫಾಸೆಟ್‌, ಟೀಪಾಯಿ ಹಾಕಲಾಗಿತ್ತು. ಪ್ರಧಾನಮಂತ್ರಿ ಕಚೇರಿ ಸಿಬ್ಬಂದಿ, ಎಸ್‌ಪಿಜಿ ಸಿಬ್ಬಂದಿಗಷ್ಟೇ ಇಲ್ಲಿಗೆ ಪ್ರವೇಶ ಇರುತ್ತದೆ ಎಂದು ಅವರು ವಿವರಿಸಿದರು.

‘ಮೋದಿ’ ಬ್ರ್ಯಾಂಡ್‌ ನೀರು ಅಲ್ಲಿತ್ತು!: ಮೋದಿಗಾಗಿ ಬೆಂಗಳೂರಿನಿಂದ ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ಹಿಮಾಲಯನ್‌ ನ್ಯಾಚುರಲ್‌ ಮಿನರಲ್ ವಾಟರ್‌ ಬಾಟಲಿ ತಂದಿದ್ದರು. ಈ ನೀರನ್ನು ಕುದಿಸಿದ ನಂತರ ಕುಡಿಯಲು ಇಡಲಾಗಿತ್ತು. ಎಸ್‌ಪಿಜಿ ಸಿಬ್ಬಂದಿಯೂ ಹೆಲಿಕಾಪ್ಟರ್‌ಗಳಲ್ಲಿ ಇದೇ ನೀರು ತಂದಿದ್ದರು. ಮೋದಿ ಬಳಸಿದ ಕಾರಿನಲ್ಲೂ ಇದೇ ಬ್ರ್ಯಾಂಡ್‌ನ ನೀರಿನ ಬಾಟಲಿ ಇದ್ದವು ಎಂದು ಮಾಹಿತಿ ನೀಡಿದರು. ಮೋದಿ ಬಳಸುವ ಟವೆಲ್‌ ಅನ್ನು ಇದೇ ನೀರಿನಲ್ಲೇ ತೊಳೆದು ಒಣಗಿಸಲಾಯಿತು. ನಂತರ ಪೇಪರ್‌ವೊಂದರಲ್ಲಿ ಸುತ್ತಿಡಲಾಯಿತು ಎಂದರು.

‘ಕಳೆದ ಸಲವೂ ಮುಂಬೈನಿಂದ ಹಿಮಾಲಯನ್‌ ನ್ಯಾಚುರಲ್‌ ಮಿನರಲ್ ವಾಟರ್‌ ನೀರು ತಂದಿದ್ದೆವು. ಆದರೆ ಕುಡಿದಿರಲಿಲ್ಲ. ಈ ಸಲ ನಾವು ತಂದಿದ್ದ ನೀರನ್ನೇ ಮೋದಿ ಕುಡಿದರು. ಗ್ರೀನ್‌ ಟೀ ಸಹ ಸೇವಿಸಿದರು’ ಎಂದರು.

ಕಚೇರಿಯಲ್ಲಿ ಏನಿತ್ತು?: ‘ಐದು ಕಂಪ್ಯೂಟರ್‌, ಪ್ರಿಂಟರ್‌, ಸ್ಕ್ಯಾನರ್, ಫ್ಯಾಕ್ಸ್‌, ಲ್ಯಾಂಡ್‌ ಲೈನ್‌ ಸಂಪರ್ಕ, ವೈಫೈ ಸೌಲಭ್ಯವುಳ್ಳ ಎಸ್‌ಪಿಜಿ ಸಿಬ್ಬಂದಿ ತಂಗುವ ಕೊಠಡಿಯಿಂದ ಮೋದಿ ಭಾಷಣದ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕ್ಷಣ ಕ್ಷಣದ ಮಾಹಿತಿ ಶರವೇಗದಲ್ಲಿ ರವಾನೆಯಾಗುತ್ತಿತ್ತು. ಈ ಕುರಿತಂತೆ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ, ‘ಪ್ರಧಾನಿ ಸಾಹೇಬರು ನಿತ್ಯ ನಾಲ್ಕು ಕಡೆ ರ‍್ಯಾಲಿ ನಡೆಸಿದರೂ, ಎಲ್ಲ ಕಡೆ ಇದೇ ವ್ಯವಸ್ಥೆ ಇರುತ್ತದೆ’ ಎಂದು ಅವರು ತಿಳಿಸಿದರು.

ಭಾಷಣವಷ್ಟೇ ಅಲ್ಲ; ತಂತ್ರಗಾರಿಕೆ..!
‘ಮೋದಿ ಭಾಷಣವನ್ನಷ್ಟೇ ಮಾಡಲಿಲ್ಲ. ತಂತ್ರಗಾರಿಕೆಯನ್ನು ರೂಪಿಸಿದರು. ಹೆಲಿಕಾಪ್ಟರ್‌ನಿಂದ ಇಳಿದು ನೇರವಾಗಿ ತಮ್ಮ ಕೊಠಡಿಗೆ ಬಂದರು. ಸ್ಥಳೀಯ ವಿದ್ಯಮಾನದ ಮಾಹಿತಿ ಪಡೆದರು. ಕೊಂಚ ಸಮಯ ವಿರಮಿಸಿದರು. ಅಲ್ಲಿಂದ ನೇರವಾಗಿ ವೇದಿಕೆಗೆ ತೆರಳಿದರು’ ಎಂದು ಆರ್‌ಎಸ್‌ಎಸ್‌ನ ಪ್ರಮುಖರೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿನ ಇದುವರೆಗಿನ ರಾಜಕೀಯ ಚಿತ್ರಣ ಏನಿತ್ತು? ಮುಂದೇನು ಮಾಡಬೇಕು ಎಂಬ ಸಲಹೆಯನ್ನು ಅವರ ಆಪ್ತ ಸಿಬ್ಬಂದಿ ನೀಡಿದರು. ಸಮಾವೇಶ ಆರಂಭಕ್ಕೂ 48 ತಾಸು ಮೊದಲು ಪ್ರಧಾನಿ ಕಚೇರಿಯಿಂದ ಈ ಮಾಹಿತಿ ಸಂಗ್ರಹಿಸಲಾಗಿತ್ತು ಎಂದರು.

‘ಆರ್‌ಎಸ್‌ಎಸ್‌ ಸ್ವಯಂಸೇವಕರು, ಬಿಜೆಪಿಯ ನಾಲ್ಕು ಮಂದಿ ಮುಖಂಡರಿಂದ ವಿಷಯ ಸಂಗ್ರಹಿಸಲಾಗಿತ್ತು. ಒಬ್ಬರು ಎರಡು ವಿಷಯವನ್ನಷ್ಟೇ ಪ್ರಸ್ತಾಪಿಸಲು ಅವಕಾಶವಿತ್ತು. ಈ ಮಾಹಿತಿ ಆಧರಿಸಿಯೇ ಸಮಾವೇಶದಲ್ಲಿ ಪ್ರಧಾನಿ ಮಾತನಾಡಿದರು. ಅವರು ಹೋಗುವ ಎಲ್ಲ ಕಡೆಯೂ ಹೀಗೆ ನಡೆಯುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.