ಬೆಂಗಳೂರು: ಆನ್‌ಲೈನ್ ಕೌನ್ಸೆಲಿಂಗ್ ಸೇರಿದಂತೆ ಯಾವುದೇ ರೀತಿಯ ಅನುಮಾನ, ಪ್ರಶ್ನೆಗಳಿಗೆ ಫೇಸ್‌ಬುಕ್ ಮೂಲಕ ಉತ್ತರ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಫೇಸ್‌ಬುಕ್‌ನಲ್ಲಿ ಉತ್ತರಿಸಲಿದ್ದಾರೆ.
ಸಹಾಯವಾಣಿ: ದಾಖಲೆಗಳ ಪರಿಶೀಲನೆ, ಆನ್‌ಲೈನ್ ಕೌನ್ಸೆಲಿಂಗ್, ದಾಖಲೆ ಪರಿಶೀಲನೆಯ ಕೇಂದ್ರಗಳು ಸೇರಿದಂತೆ ಯಾವುದೇ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಅನುಮಾನ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಸಹಾಯವಾಣಿಯ ದೂರವಾಣಿ ಸಂಖ್ಯೆಗಳು: 080-23461575, 23462599, 23462758, 23568201, 23568202
ಸಿ.ಡಿ-ಕೈಪಿಡಿ ವಿತರಣೆ: ರ‌್ಯಾಂಕ್‌ಗೆ ಅನುಗುಣವಾಗಿ ಮೂಲ ದಾಖಲೆಗಳ ಪರಿಶೀಲನೆಗೆ ಬರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೌನ್ಸೆಲಿಂಗ್‌ನ ಮಾಹಿತಿಯನ್ನು ಒಳಗೊಂಡ ಆಡಿಯೊ ಸಿ.ಡಿ ಮತ್ತು ಸೀಟು ಆಯ್ಕೆಯ ಸೂಚನೆಗಳನ್ನು ಒಳಗೊಂಡ ಕೈಪಿಡಿ ವಿತರಿಸಲಾಗುತ್ತದೆ. ಸೀಟು ಆಯ್ಕೆ ಕುರಿತ ಸಂಪೂರ್ಣವಾದ ವಿವರಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನೀಡಲಾಗಿದೆ.
ದಾಖಲೆ ಪರಿಶೀಲನೆ ನಂತರ ವಿದ್ಯಾರ್ಥಿಗಳಿಗೆ ಸ್ಪೀಕೃತಿ ಪತ್ರ, ರಹಸ್ಯ ಸಂಖ್ಯೆಯನ್ನು ನೀಡಲಾಗುತ್ತದೆ. ಕೌನ್ಸೆಲಿಂಗ್ ಮುಗಿದು ಪ್ರವೇಶ ಪಡೆಯುವವರೆಗೂ ಈ ಸಂಖ್ಯೆಯನ್ನು ಗೌಪ್ಯತೆಯಿಂದ ಕಾಪಾಡಬೇಕು. ಆನ್‌ಲೈನ್‌ನಲ್ಲಿ ಲಾಗಿನ್ ಆಗುತ್ತಿದ್ದಂತೆಯೇ ಈ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಸೂಪರ್‌ನ್ಯೂಮರರಿ ಕೋಟಾ: ಕಳೆದ ವರ್ಷದಂತೆ ಈ ವರ್ಷವೂ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಶೇ 5ರಷ್ಟು ಸೂಪರ್ ನ್ಯೂಮರರಿ ಕೋಟಾ ಸೀಟುಗಳು ಲಭ್ಯವಾಗಲಿವೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳ ಪ್ರತಿಯೊಂದು ಕೋರ್ಸ್‌ನಲ್ಲಿ ಶೇ 5ರಷ್ಟು ಸೀಟುಗಳು ಉಚಿತವಾಗಿ ಲಭ್ಯವಾಗಲಿವೆ.
ಪೋಷಕರ ವಾರ್ಷಿಕ ಆದಾಯ ರೂ 4.5 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಈ ಕೋಟಾದಡಿ ಪ್ರವೇಶಕ್ಕೆ ಅರ್ಹರು. ಪ್ರವೇಶ ಬಯಸುವವರು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.
ಆನ್‌ಲೈನ್‌ನಲ್ಲೇ ಮಾಹಿತಿ: ಸೀಟು ಲಭ್ಯವಾಗಿದೆಯೇ, ಇಲ್ಲವೇ ಎಂಬುದನ್ನು ಆನ್‌ಲೈನ್ ಮೂಲಕವೇ ತಿಳಿದುಕೊಳ್ಳಬಹುದು. ಪ್ರಾಧಿಕಾರ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಸಿಇಟಿ ಸಂಖ್ಯೆ, ರಹಸ್ಯ ಸಂಖ್ಯೆ ಇತ್ಯಾದಿ ನೀಡಿದರೆ ಸೀಟು ಆಯ್ಕೆ ವಿವರ ಗೊತ್ತಾಗುತ್ತದೆ.

ಸೀಟು ಖಾತರಿಯಾಗಿದ್ದರೆ ಹತ್ತಿರದ ದಾಖಲೆ ಪರಿಶೀಲನಾ ಕೇಂದ್ರಕ್ಕೆ ಹೋಗಿ, ನಿಗದಿತ ಶುಲ್ಕದ ಡಿ.ಡಿ.ಯನ್ನು ನೀಡಿ ಸೀಟು ಹಂಚಿಕೆಯ ಪತ್ರವನ್ನು ಪಡೆಯಬಹುದು. ಬಳಿಕ ಸಂಬಂಧಪಟ್ಟ ಕಾಲೇಜಿಗೆ ಹೋಗಿ ಪ್ರವೇಶ ಪಡೆಯಬೇಕು. ದಾಖಲಾದ ನಂತರ ಆನ್‌ಲೈನ್ ಮೂಲಕ ಪ್ರಾಧಿಕಾರಕ್ಕೆ ತಿಳಿಸಬೇಕು. ಹೀಗೆ ತಿಳಿಸದಿದ್ದರೆ ಸೀಟು ರದ್ದಾಗುತ್ತದೆ.
ಒಂದು ವೇಳೆ ಆಯ್ಕೆ ಮಾಡಿಕೊಂಡಿರುವ ಕಾಲೇಜು, ಕೋರ್ಸ್ ಇಷ್ಟವಾಗಿಲ್ಲ ಎಂಬ ಕಾರಣಕ್ಕೆ ಪ್ರವೇಶ ಪಡೆಯದಿದ್ದರೆ, ಮುಂದಿನ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವುದಾಗಿ ತಿಳಿಸಬೇಕು. ಪ್ರವೇಶ ಪಡೆದ ನಂತರ, ಅದಕ್ಕಿಂತ ಉತ್ತಮ ಕೋರ್ಸ್‌ನ ಸೀಟು ಬಯಸುವುದಾದರೆ ಆ ಬಗ್ಗೆಯೂ ತಿಳಿಸಬೇಕು.
ಆದ್ಯತೆಗಳನ್ನು ಗುರುತಿಸುವಾಗಲೇ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಇತ್ಯಾದಿ ನೀಡಬೇಕು. ಎಸ್‌ಎಂಎಸ್ ಮೂಲಕವೂ ಮಾಹಿತಿ ನೀಡುವುದರಿಂದ ಮೊಬೈಲ್ ಸಂಖ್ಯೆ ನೀಡುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.