ADVERTISEMENT

ಬಂದಿದೆ ಎಳನೀರಿನ ಐಸ್‌ಕ್ರೀಂ

ಶಿವರಾಂ
Published 18 ನವೆಂಬರ್ 2011, 19:30 IST
Last Updated 18 ನವೆಂಬರ್ 2011, 19:30 IST
ಬಂದಿದೆ ಎಳನೀರಿನ ಐಸ್‌ಕ್ರೀಂ
ಬಂದಿದೆ ಎಳನೀರಿನ ಐಸ್‌ಕ್ರೀಂ   

ಬೆಂಗಳೂರು: ಕಲ್ಪತರು ನಾಡಿನ ದಂಪತಿ ಎಳನೀರು, ಎಳನೀರು ಗಂಜಿ ಹಾಗೂ ಹಾಲಿನ ಕೆನೆಯಿಂದ ಐಸ್‌ಕ್ರೀಂ ತಯಾರಿಸುವ ಆವಿಷ್ಕಾರದಲ್ಲಿ ಸಫಲರಾಗಿ ಇದೀಗ ಉದ್ಯಮದ ಗಮನ ಸೆಳೆದಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿರುವ ರಾಷ್ಟ್ರೀಯ ಕೃಷಿ ಮೇಳದಲ್ಲಿ (ಸಾವಯವ ಕೃಷಿ ಮಳಿಗೆಗಳ ಸಾಲು) `ತೆಂಗು ಮನೆ~ ಎಂಬ ಹೆಸರಿನ ಮಳಿಗೆಯಲ್ಲಿ ನಿಮಗೆ ಇಂತಹ ಎಳನೀರಿನಿಂದ ತಯಾರಿಸಿದ ಐಸ್‌ಕ್ರೀಂ ಲಭ್ಯವಾಗಲಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಭೀಮಸಂದ್ರದ ಅನಿತಾ ಹಾಗೂ ಅವರ ಪತಿ ವಿನೋದ್ ಈ ಹೊಸ ಆವಿಷ್ಕಾರದ ಸೂತ್ರಧಾರರು. ಐಸ್‌ಕ್ರೀಂಗೆ ಬಳಸುವ ಯಾವುದೇ ಪೌಡರ್ ಅಥವಾ ಇನ್ನಿತರೆ ರಾಸಾಯನಿಕ ವಸ್ತುಗಳನ್ನು ಬಳಸದೆ ನೈಸರ್ಗಿಕವಾಗಿ ಬೆಳೆದ ಎಳನೀರು, ಎಳನೀರಿನ ಗಂಜಿ, ಹಾಲಿನ ಕೆನೆ ಹಾಗೂ ಸ್ವಲ್ಪ ಪ್ರಮಾಣದ ಸಕ್ಕರೆಯಿಂದ ಐಸ್‌ಕ್ರೀಂ ತಯಾರಿಸಿರುವುದು ವಿಶೇಷವೆನಿಸಿದೆ.

ನಗರದ ರಾಜಾಜಿನಗರ ಒಂದನೇ ಬ್ಲಾಕ್‌ನಲ್ಲಿ ನೆಲೆಸಿರುವ ಈ ಕುಟುಂಬ, ಎಲ್ಲ ಪ್ರಮುಖ ಮೇಳಗಳಲ್ಲಿ ಭಾಗವಹಿಸಿ ಎಳನೀರಿನಿಂದ ತಯಾರಿಸಿದ ಐಸ್‌ಕ್ರೀಂ ಮಾರಾಟ ಮಾಡುವ ಮೂಲಕ ವ್ಯಾಪಾರದಲ್ಲಿಯೂ ದಾಪುಗಾಲನ್ನಿಟ್ಟಿದೆ.

ಐಸ್‌ಕ್ರೀಂ ತಯಾರಿಸುವ ವಿಧಾನದ ಬಗ್ಗೆ ಹೆಚ್ಚಿನ ವಿವರ ನೀಡಲು ಅನಿತಾ ನಿರಾಕರಿಸಿದರಾದರೂ ಎಳನೀರಿನಿಂದ ಐಸ್‌ಕ್ರೀಂ ತಯಾರಿಸುವ ಹೊಸ ಚಿಂತನೆಯಲ್ಲಿ ಯಶ ಕಂಡಿರುವುದು ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.

ರಾಜ್ಯ ಸರ್ಕಾರದ ನೆರವು ಸಿಕ್ಕಲ್ಲಿ ತಂತ್ರಜ್ಞಾನದ ನೆರವಿನಿಂದ ಈ ಐಸ್ ಕ್ರೀಂ ಅನ್ನು ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸಲು ಈ ದಂಪತಿ ಚಿಂತನೆ ನಡೆಸಿದೆ. ಕಡೂರು, ದಾವಣಗೆರೆಗಳಲ್ಲಿ ನಡೆದ ಕೃಷಿ ಮೇಳ, ಶಿವಮೊಗ್ಗದಲ್ಲಿ ನಡೆದ ಕೊಡಚಾದ್ರಿ ಮೇಳ ಹಾಗೂ ಲಾಲ್‌ಬಾಗ್‌ನಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿಯೂ `ತೆಂಗು ಮನೆ~ ಮಳಿಗೆ ಸ್ಥಾಪಿಸಿ ಎಳನೀರಿನ ಐಸ್‌ಕ್ರೀಂ ಮಾರಾಟ ಮಾಡಲಾಗಿದೆ.

`ನಮ್ಮ ತೋಟದಲ್ಲಿ 800 ತೆಂಗಿನ ಮರಗಳಿವೆ. ಅಲ್ಲಿಂದ ತೆಂಗಿನಕಾಯಿ ತಂದು ಐಸ್‌ಕ್ರೀಂ ತಯಾರಿಕೆಗೆ ಬಳಸುತ್ತಿದ್ದೇವೆ. ಪ್ರತಿ ದಿನ 500 ಕಪ್ ಐಸ್‌ಕ್ರೀಂ ತಯಾರಿಸಬಹುದು. ಮೂರು ತೆಂಗಿನಕಾಯಿಗಳಿಂದ 750 ಮಿ.ಲೀ. ಎಳನೀರು ಲಭ್ಯವಾಗಲಿದೆ. ಇದರಿಂದ ಕನಿಷ್ಠ 10 ಐಸ್‌ಕ್ರೀಂ ತಯಾರಿಸಬಹುದು~ ಎನ್ನುತ್ತಾರೆ ಅನಿತಾ.

`ಖರ್ಚು-ವೆಚ್ಚ ಕಳೆದು ನಮಗೆ ಅರ್ಧಕ್ಕರ್ಧ ಲಾಭ ಸಿಗುತ್ತಿದೆ. ಪ್ರಸ್ತುತ 12, 15 ಹಾಗೂ 20 ರೂಪಾಯಿ ದರದ ಕಪ್ ಐಸ್‌ಕ್ರೀಂಗಳನ್ನು ಮಾರಾಟ ಮಾಡುತ್ತಿದ್ದೇವೆ. ಇದಲ್ಲದೆ, ತೆಂಗಿನಕಾಯಿಯಿಂದ ಬರ್ಫಿ ಇನ್ನಿತರ ತಿಂಡಿ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ~ ಎಂದು ವಿವರಿಸಿದರು.

ಪತಿ- ಪತ್ನಿಯದು ಸಮಪಾಲು: ಪತ್ನಿ ಎಳನೀರಿನಿಂದ ಐಸ್‌ಕ್ರೀಂ ತಯಾರಿಸುವುದರಲ್ಲಿ ಸಫಲರಾದರೆ, ಪತಿ ತಂಪೆಳ ನೀರಿನ `ಟೆಂಡರ್ ಓಪನರ್ ಹಾಗೂ ಇನ್‌ಸ್ಟ್ಯಾಂಟ್ ಕೂಲರ್~ ಯಂತ್ರ ತಯಾರಿಸುವ ಮೂಲಕ ಆವಿಷ್ಕಾರದಲ್ಲಿಯೂ ಸಮಪಾಲು ಹಂಚಿಕೊಂಡಿದ್ದಾರೆ.

 ಈ ಹೊಸ ಯಂತ್ರದ ಸಹಾಯದಿಂದ ತೆಂಗಿನಕಾಯಿ ಸುಲಿಯುವ ಅಗತ್ಯವಿಲ್ಲ. ಯಂತ್ರದ ಮಧ್ಯೆ ತೆಂಗಿನಕಾಯಿ ಸಿಕ್ಕಿಸಿದರೆ ಸಾಕು, ಯಂತ್ರವೇ ಕಾಯಿ ಸುಲಿಯಲಿದೆ. ತೆಂಗಿನಕಾಯಿನಿಂದ ಸೋರುವ ಎಳನೀರು ಒಂದು ನಿಮಿಷದೊಳಗೆ ತಂಪಾಗಿ ಹೊರ ಬರಲಿದೆ. ಒಂದು ನಿಮಿಷದಲ್ಲಿ 200 ಮಿ.ಲೀ.ನಷ್ಟು ಎಳನೀರು ತಂಪಾಗಲಿದೆ.

`ಗುಜರಾತ್, ಮಹಾರಾಷ್ಟ್ರ, ಅಸ್ಸಾಂನಿಂದಲೂ ಈ ಯಂತ್ರಕ್ಕೆ ಬೇಡಿಕೆ ಬಂದಿದೆ. ಈ ಯಂತ್ರ ತಯಾರಿಸಲು 35ರಿಂದ 40 ಸಾವಿರ ರೂಪಾಯಿ ವೆಚ್ಚ ತಗುಲಲಿದೆ. ಮಾರುಕಟ್ಟೆಯಲ್ಲಿ 45 ಸಾವಿರ ರೂಪಾಯಿ ಆಗಬಹುದು~ ಎಂದು ವಿನೋದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.