ADVERTISEMENT

ಬಂಧನಕ್ಕೆ ಸಿ.ಎಂ ಆದೇಶಿಸಬಹುದೇ?

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಬೆಂಗಳೂರು: ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸಿ ಬಿಡದಿಯ ಧ್ಯಾನಪೀಠ ಆಶ್ರಮವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಆದೇಶ ಹೊರಡಿಸಿರುವ ಸಂಬಂಧ ಪೊಲೀಸ್ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳಿಂದ ಪರ- ವಿರೋಧ ಅಭಿಪ್ರಾಯಗಳು ಕೇಳಿ ಬಂದಿವೆ.

ಯಾವುದೇ ವ್ಯಕ್ತಿಯ ವಿರುದ್ಧ ಆರೋಪಗಳು ಕೇಳಿ ಬಂದಾಗ, ಅಂತಹ ವ್ಯಕ್ತಿಯನ್ನು ಬಂಧಿಸುವಂತೆ ರಾಜ್ಯದ ಮುಖ್ಯಮಂತ್ರಿ ಆದೇಶ ಹೊರಡಿಸುವುದು ಎಷ್ಟು ಸರಿ ಹಾಗೂ ಅಂತಹ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆಯೇ ಎಂಬ ಪ್ರಶ್ನೆಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

`ಪ್ರಕರಣದ ತನಿಖೆ ಮತ್ತು ಪುರಾವೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ತನಿಖಾಧಿಕಾರಿ ನಿರ್ಧಾರ ಕೈಗೊಳ್ಳಬೇಕು. ಸ್ವತಃ ವಕೀಲಿ ವೃತ್ತಿ ಮಾಡುತ್ತಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಈ ಸಂಗತಿ ಗೊತ್ತಿದೆ. ಆದರೂ ಅವರು ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸುವಂತೆ ಆದೇಶಿಸಿದ್ದು ಆಶ್ಚರ್ಯ ಉಂಟು ಮಾಡಿದೆ.

ಅವರು ಈ ರೀತಿ ಆದೇಶ ಹೊರಡಿಸಿದ್ದು ಸರಿಯಲ್ಲ. ಬದಲಿಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಬಹುದಿತ್ತು~ ಎಂದು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಮತ್ತೊಬ್ಬ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಟಿ.ಮಡಿಯಾಳ್, `ಮುಖ್ಯಮಂತ್ರಿಗಳ ಆದೇಶದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಯಾವುದೇ ವ್ಯಕ್ತಿಯ ವಿರುದ್ಧ ಆರೋಪಗಳಿದ್ದರೆ, ಆ ವ್ಯಕ್ತಿಯಿಂದ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದರೆ, ಆ ವ್ಯಕ್ತಿ ತಪ್ಪಿಸಿಕೊಂಡು ಪರಾರಿಯಾಗುವ ಅಥವಾ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದ್ದರೆ ಅಂತಹ ವ್ಯಕ್ತಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲು ಕಾನೂನಿನಲ್ಲಿ ಅವಕಾಶವಿದೆ~ ಎಂದರು.

ನಿವೃತ್ತ ಡಿಸಿಪಿ ಜಿ.ಎ.ಬಾವ ಪ್ರಕಾರ, `ಆರೋಪಿಯನ್ನು ಬಂಧಿಸುವುದು ಅಥವಾ ಬಂಧಿಸದೇ ಇರುವುದು ಪ್ರಕರಣದ ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟದ್ದು~. `ನಿತ್ಯಾನಂದ ಸ್ವಾಮೀಜಿ ಪ್ರಕರಣದಲ್ಲೂ ಸ್ಥಳೀಯ ಪೊಲೀಸರೇ ಬಂಧನದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಲಿ, ಗೃಹ ಸಚಿವರಾಗಲಿ ಅಥವಾ ಮುಖ್ಯಮಂತ್ರಿಗಳಾಗಲಿ ಮೂಗು ತೂರಿಸುವಂತಿಲ್ಲ.

ಆದರೆ, ಅವರು ಪ್ರಕರಣದ ತನಿಖಾ ಕಾರ್ಯ, ತನಿಖಾ ಪ್ರಗತಿ ಮತ್ತಿತರ ಸಂಗತಿಗಳ ಮೇಲ್ವಿಚಾರಣೆ ನಡೆಸಬಹುದು. ಮುಖ್ಯಮಂತ್ರಿಗಳು ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸುವಂತೆ ಆದೇಶಿಸಿರುವುದು ಕಾನೂನು ಪ್ರಕಾರ ಸರಿಯಲ್ಲ. ಯಾವುದೇ ವ್ಯಕ್ತಿಯನ್ನು ಬಂಧಿಸಿ ಅಥವಾ ಬಂಧಿಸಬೇಡಿ ಎಂದು ಪೊಲೀಸರ ಮೇಲೆ ಒತ್ತಡ ಹೇರುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇಲ್ಲ~ ಎಂದರು.

ಕಾನೂನು ಸಲಹೆಗೆ ಮೊರೆ (ರಾಮನಗರ ವರದಿ): ಆಶ್ರಮದಲ್ಲಿ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಖಾತರಿ ಆಗದ ಹೊರತು ಸರ್ಕಾರ ಏಕಾ ಏಕಿ ಆಶ್ರಮಕ್ಕೆ ಬೀಗ ಮುದ್ರೆ ಹಾಕುವುದಕ್ಕೆ ಬರುವುದಿಲ್ಲ.  ಅದಕ್ಕೆ ಪೂರಕವಾದ ಆಧಾರ ಮತ್ತು ದಾಖಲೆಗಳು ಸರ್ಕಾರದ ಬಳಿ ಲಭ್ಯವಿರಬೇಕು.
 
ಆಶ್ರಮಕ್ಕೆ ಬೀಗ ಜಡಿದರೆ ಮುಂದೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳುವ ಪ್ರಸಂಗ ಎದುರಾಗಬಹುದು ಎನ್ನಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಹೊರಡಿಸಿಸರ್ಕಾರ ಅಡ್ವೊಕೇಟ್ ಜನರಲ್ ಅವರಲ್ಲಿ ಕಾನೂನು ಸಲಹೆ ಕೋರಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ದಾಖಲಾಗಿರುವ ಪ್ರಕರಣಗಳು ಯಾವವು?
ರಾಮನಗರ: 
ನಿತ್ಯಾನಂದ ಸ್ವಾಮೀಜಿ ವಿರುದ್ಧ ಭಾರತೀಯ ದಂಡ ಸಂಹಿತೆ  (ಐಪಿಸಿ) 5 ಕಲಂಗಳ ಅಡಿ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ 7ರಂದು ಆಶ್ರಮದಲ್ಲಿ ಸುದ್ದಿಗೋಷ್ಠಿ ಸಂದರ್ಭದಲ್ಲಿ ಉಂಟಾದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿಯ ಪ್ರತಿನಿಧಿ ಸ್ವಾಮೀಜಿ ಮತ್ತು ಅವರ ಶಿಷ್ಯರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದರು. 

 ಐಪಿಸಿ ಕಲಂ 143 (ಕಾನೂನು ಬಾಹಿರವಾಗಿ ಗುಂಪು ಕಟ್ಟಿ ಹಲ್ಲೆಗೆ ಪ್ರಯತ್ನ), ಕಲಂ 341 (ನಿರ್ಬಂಧಿತ ಪ್ರದೇಶದಲ್ಲಿ ಕಾನೂನು ಬಾಹಿರ ಪ್ರವೇಶ), ಕಲಂ 323 (ಸ್ವಯಂ ಹಾನಿ), ಕಲಂ 504 (ಉದ್ದೇಶ ಪೂರ್ವಕವಾಗಿ ಶಾಂತಿ ಭಂಗ ಮಾಡುವುದು), ಕಲಂ 506 (ಪ್ರಾಣಭಯ)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧನ ಹೇಗೆ?
`ಮುಖ್ಯಮಂತ್ರಿಗಳ ಆದೇಶದಿಂದ ಒತ್ತಡಕ್ಕೆ ಸಿಲುಕಿದ್ದೇವೆ. ಪ್ರಕರಣದ ತನಿಖೆ ನಡೆಸದೆ ಮತ್ತು ಸಾಕ್ಷ್ಯಗಳನ್ನು ಕಲೆ ಹಾಕದೆ ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.  ಮತ್ತೊಂದೆಡೆ ಸಿ.ಎಂ ಆದೇಶ ಪಾಲಿಸಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ದಿಕ್ಕು ತೋಚದಂತಾಗಿದೆ~ ಎಂದು  ರಾಮನಗರ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ಅಳಲು  ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.