ADVERTISEMENT

ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರದ ವಿನೂತನ ಯೋಜನೆ

ಕೆ.ಎಂ.ಸಂತೋಷಕುಮಾರ್
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ತುಮಕೂರು: ಬಡತನದ ರೇಖೆಗಿಂತ ಕೆಳಗಿನ ಕುಟುಂಬಗಳ ಆರ್ಥಿಕ ಮಟ್ಟ ಸುಧಾರಣೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಎಲ್‌ಎಂ (ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್) ಯೋಜನೆ ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ಬರಲಿದೆ. ಈ ಪ್ರಾಯೋಗಿಕ ಯೋಜನೆಗೆ ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳು ಆಯ್ಕೆಯಾಗಿವೆ. ಯೋಜನೆ ಅನುಷ್ಠಾನಕ್ಕೆ ತಾತ್ಕಾಲಿಕ ಅನುಮೋದನೆ ಸಿಕ್ಕಿದ್ದು, ಏಪ್ರಿಲ್ 1ರಿಂದ ಯೋಜನೆ ಜಾರಿಗೆ ಬರಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಯೋಗಿ ಸಿ.ಕಳಸದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಈಗಾಗಲೇ ಒಡಿಶಾ, ಬಿಹಾರ, ಕೇರಳ ರಾಜ್ಯಗಳಲ್ಲಿ ಆರಂಭವಾಗಿದೆ. ಯೋಜನೆಯ ಸಾಧಕಬಾಧಕಗಳ ಫಲಿತಾಂಶ ಕಂಡುಕೊಳ್ಳಲು ಪ್ರಾರಂಭಿಕವಾಗಿ ತುಮಕೂರು, ಬೆಳಗಾವಿ ಆಯ್ದುಕೊಳ್ಳಲಾಗಿದೆ. ಇಲ್ಲಿನ ಫಲಿತಾಂಶ ಆಧರಿಸಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಆರ್ಥಿಕ ಮಟ್ಟ ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶ. ಸ್ವಸಹಾಯ ಗುಂಪುಗಳ ಮೂಲಕ ಕಿರು ಸಾಲ ಮತ್ತು ಸಹಾಯ ಧನವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆಗೆ ಆಯ್ಕೆಯಾಗುವ ಕುಟುಂಬಗಳಿಗೆ ಆದಾಯ ಹೆಚ್ಚಿಸಿಕೊಳ್ಳಲು ಸಹಾಯ ಧನ ಲಭ್ಯವಾಗಲಿದೆ. ಗುಡಿ ಕೈಗಾರಿಕೆ, ಕರಕುಶಲ ಉದ್ಯಮ, ಸ್ವ ಉದ್ಯೋಗ ಇತ್ಯಾದಿ ಕೈಗೊಳ್ಳಬಹುದು.

ಸ್ವಸಹಾಯ ಸಂಘ, ಸ್ವಸಹಾಯ ಸಂಘಗಳ ಒಕ್ಕೂಟಗಳು ಇಂತಹ ಉದ್ದೇಶಕ್ಕೆ ಇಂತಿಷ್ಟು ನೆರವು ಬೇಕೆಂದು ಬೇಡಿಕೆ ಸಲ್ಲಿಸಬೇಕಾಗುತ್ತದೆ. ಪ್ರತಿ ಸ್ವಸಹಾಯ ಸಂಘಗಳ ಗುಂಪಿಗೆ ರೂ. 2ರಿಂದ 3 ಲಕ್ಷದವರೆಗೂ ಸುತ್ತು ನಿಧಿ ನೀಡಲು ಅವಕಾಶ ಇದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.