ADVERTISEMENT

ಬಡ್ತಿ ಪಡೆದವರಿಗೆ ಹಿಂಬಡ್ತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ಬೆಂಗಳೂರು:‍ ಒಂದು ತಿಂಗಳೊಳಗೆ (ಏಪ್ರಿಲ್‌ 19) ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು ಎಂದು ಸುಪ್ರೀಂಕೋರ್ಟ್‌ ತಾಕೀತು ಮಾಡಿರುವ ಬೆನ್ನಲ್ಲೇ, ಬಡ್ತಿ ಮೀಸಲಾತಿ ಕಾಯ್ದೆ 2002ರ ಅನ್ವಯ ಮುಂಬಡ್ತಿ ಪಡೆದವರಿಗೆ ಹಿಂಬಡ್ತಿ ನೀಡಲು ಸರ್ಕಾರ ಮುಂದಾಗಿದೆ.

ಎಲ್ಲ ಇಲಾಖೆಗಳಲ್ಲಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧವಾಗಿದೆ. ಮೀಸಲಾತಿ ಕಾಯ್ದೆ ಅನ್ವಯ ಬಡ್ತಿ ಪಡೆದಿದ್ದ ಪರಿಶಿಷ್ಟ ಜಾತಿಯ ನೌಕರರಿಗೆ ಮುಂದಿನ ಎರಡು ವಾರದೊಳಗೆ ಹಿಂಬಡ್ತಿ ನೀಡಲಾಗುವುದು. ಸುಪ್ರೀಂಕೋರ್ಟ್‌ ನೀಡಿದ ಗಡುವಿನೊಳಗೆ ಆದೇಶ ಪಾಲಿಸಲು ಪರಿಶಿಷ್ಟೇತರ ಜಾತಿಗಳ ನೌಕರರಿಗೆ ಮುಂಬಡ್ತಿ ನೀಡಲಾಗುವುದು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.

ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಆರು ತಿಂಗಳು ಸಮಯಾವಕಾಶ ಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಮಾ. 20ರಂದು ನಿರಾಕರಿಸಿರುವ ಸುಪ್ರೀಂಕೋರ್ಟ್‌ ನ್ಯಾಯಪೀಠ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು ಎಂದು ಕಟ್ಟಪ್ಪಣೆ ವಿಧಿಸಿದೆ. ಇಲ್ಲದೇ ಇದ್ದರೆ ಏಪ್ರಿಲ್ 25ರಂದು ನಡೆಯಲಿರುವ ವಿಚಾರಣೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಜರಾಗಬೇಕು ಎಂದು ತಾಕೀತು ಮಾಡಿದೆ.

ADVERTISEMENT

ಈ ಬೆಳವಣಿಗೆಯ ಬೆನ್ನಲ್ಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಝಾ ಅವರನ್ನು ತಮ್ಮ ಕಚೇರಿಗೆ ಬುಧವಾರ ಕರೆಸಿಕೊಂಡ ಮುಖ್ಯಕಾರ್ಯದರ್ಶಿ ರತ್ನಪ್ರಭಾ, ಮುಂದೇನು ಮಾಡಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಬಡ್ತಿ ನೀಡುವುದು ಅನಿವಾರ್ಯವಾಗಲಿದೆ. ಅದು ಬಿಟ್ಟರೆ ಬೇರೆ ದಾರಿಯಿಲ್ಲ ಎಂಬ ಅಭಿಪ್ರಾಯಕ್ಕೆ ಇಬ್ಬರೂ ಅಧಿಕಾರಿಗಳು ಬಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಹಿಂಬಡ್ತಿ ಭೀತಿಯಲ್ಲಿರುವ ನೌಕರರ ರಕ್ಷಣೆಯ ಎಲ್ಲ ದಾರಿಗಳೂ ಮುಚ್ಚಿದ್ದು, ನೆಪ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಗೆ ಗುರಿಯಾಗುವ ಆತಂಕ ಸರ್ಕಾರಕ್ಕಿದೆ ಎಂದು ಡಿಪಿಎಆರ್‌ ಅಧಿಕಾರಿಯೊಬ್ಬರು ತಿಳಿಸಿದರು.

ಎರಡು ವಾರದೊಳಗೆ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಸೇವಾ ಜ್ಯೇಷ್ಠತಾ ಪಟ್ಟಿ ಪೂರ್ಣಗೊಳಿಸಬೇಕು. ಹಿಂಬಡ್ತಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಏಪ್ರಿಲ್ 20ರೊಳಗೆ ಪರಿಷ್ಕೃತ ಪಟ್ಟಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು ಎಂಬ ನಿರ್ಣಯಕ್ಕೂ ಬರಲಾಗಿದೆ ಎಂದು ಅವರು ಹೇಳಿದರು.

ಚುನಾವಣೆ ನೀತಿ ಸಂಹಿತೆ ಮುಂದಿಟ್ಟುಕೊಂಡು ಚುನಾವಣೆ ಮುಗಿಯುವರೆಗೆ ಹಿಂಬಡ್ತಿ– ಮುಂಬಡ್ತಿ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸರ್ಕಾರದ ಪ್ರಯತ್ನವೂ ವಿಫಲವಾಗಿದೆ. ಇದು ಕೋರ್ಟ್ ಆದೇಶ ಪಾಲನೆ ವಿಷಯ ಆಗಿರುವುದರಿಂದ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ.

2017ರ ಫೆಬ್ರುವರಿ 9ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ, ರಾಜ್ಯ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕಾಯ್ದೆ 2002 ಅನ್ನು ರದ್ದುಪಡಿಸಿತ್ತು. ಅಲ್ಲದೇ, ಮುಂದಿನ ಆರು ತಿಂಗಳೊಳಗೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಕಟ್ಟಪ್ಪಣೆ ವಿಧಿಸಿತ್ತು.

ಹಿಂಬಡ್ತಿ ಭೀತಿಯಲ್ಲಿದ್ದ ನೌಕರರ ಹಿತ ಕಾಯಲು ಮುಂದಾಗಿದ್ದ ರಾಜ್ಯ ಸರ್ಕಾರ, ಪುನರ್‌ಪರಿಶೀಲನಾ  ಅರ್ಜಿ ಸಲ್ಲಿಸಿತ್ತು. ಬಡ್ತಿಯಲ್ಲಿ ಮೀಸಲಾತಿ ನೀಡಿದ ಕ್ರಮ ಸಮರ್ಥಿಸಿಕೊಳ್ಳಲು ಪರಿಶಿಷ್ಟ ಜಾತಿಯವರ ಹಿಂದುಳಿದಿರುವಿಕೆ, ಬಡ್ತಿ ಮೀಸಲಾತಿ ಪಡೆದ ನೌಕರರ ಶೇಕಡಾವಾರು ಪ್ರಮಾಣ, ಆಡಳಿತದ ಕಾರ್ಯದಕ್ಷತೆ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿ ಬಡ್ತಿ ಮೀಸಲಾತಿಯನ್ನು ಸಮರ್ಥಿಸಿಕೊಂಡಿತ್ತು. ಆದರೆ, ಅದನ್ನು ಕೋರ್ಟ್ ಒಪ್ಪಿರಲಿಲ್ಲ.

ಬಡ್ತಿ ಮೀಸಲಾತಿ ಕಾಯ್ದೆಯಿಂದ ಮುಂಬಡ್ತಿ ಪಡೆದವರ ರಕ್ಷಣೆಗಾಗಿ ಮಸೂದೆಯೊಂದನ್ನು ಮಂಡಿಸಿದ್ದ ಸರ್ಕಾರ, ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ, ಅದಕ್ಕೆ ಅಂಕಿತ ಹಾಕದ ರಾಜ್ಯಪಾಲ ವಜುಭಾಯಿ ವಾಲಾ ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಈ ಮಸೂದೆ ಇನ್ನೂ ಕೇಂದ್ರ ಸರ್ಕಾರದ ಮುಂದಿದೆ.

ಇನ್ನೂ ಸಿದ್ಧವಾಗದ ಪಟ್ಟಿ

2017ರ ಫೆಬ್ರುವರಿ 9ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ 1978ರಿಂದ 2016 ಡಿಸೆಂಬರ್‌ವರೆಗಿನ ಸೇವಾವಧಿ ಪರಿಗಣಿಸಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಆರು ತಿಂಗಳ ಗಡುವು ನೀಡಿತ್ತು.  ಬಳಿಕ ಈ ವರ್ಷದ ಜನವರಿ 15ರವರೆಗೆ ಅವಧಿ ವಿಸ್ತರಿಸಿತ್ತು.

ಎಲ್ಲ ಇಲಾಖೆಗಳ ಜ್ಯೇಷ್ಠತಾ ಪಟ್ಟಿ ಸಿದ್ಧವಾಗಿದೆ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ, ಕೆಲವು ಇಲಾಖೆಗಳಲ್ಲಿ ಇನ್ನೂ ಪಟ್ಟಿ ತಯಾರಾಗಿಲ್ಲ ಎಂದು ಮೂಲಗಳು ಹೇಳಿವೆ.

ತೀರ್ಪು ನೀಡಿ ಒಂದು ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆಯಲ್ಲಿ ಜ್ಯೇಷ್ಠತಾ ಪಟ್ಟಿ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ. 2002ರವರೆಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, 2009ರವರೆಗೆ ಕಾರ್ಯಪಾಲಕ ಎಂಜಿನಿಯರ್‌, 2007ರವರೆಗೆ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಹಾಗೂ 2015ರವರೆಗೆ ಮುಖ್ಯ ಎಂಜಿನಿಯರ್ ಹುದ್ದೆಗಳ ಪರಿಷ್ಕೃತ ಪಟ್ಟಿ ಪ್ರಕಟಿಸಲಾಗಿದೆ.

ಸುಮಾರು ಎರಡೂವರೆ ಲಕ್ಷ ನೌಕರರಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಪಟ್ಟಿ ಸಿದ್ಧವಾಗಿಲ್ಲ. ಶಿಕ್ಷಕರಿಗೆ ಜಿಲ್ಲಾ ಮಟ್ಟದಲ್ಲಿ ಸೇವಾ ಜ್ಯೇಷ್ಠತೆ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಇದು ಲಭ್ಯವಿಲ್ಲ. ಹೀಗಾಗಿ ಈ ಇಲಾಖೆಯಲ್ಲೂ ಪಟ್ಟಿ ತಯಾರಾಗಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.