ADVERTISEMENT

ಬಳ್ಳಾರಿ ಬಂದ್: ದಾಂದಲೆ- 11 ಸೆರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಂಧನ ವಿರೋಧಿಸಿ ಬಿಜೆಪಿ ಮತ್ತು ರೆಡ್ಡಿ ಅಭಿಮಾನಿಗಳು ಕರೆ ನೀಡಿದ್ದ ಬಳ್ಳಾರಿ ಬಂದ್‌ನ್ನು ಬಲವಂತದ ಮೂಲಕ ಸಂಪೂರ್ಣ ಆಚರಿಸಲಾಯಿತು. ಬಂದ್ ವೇಳೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗಳಿಗೆ ನುಗ್ಗಿ ದಾಂದಲೆ ನಡೆಸಿದರು. ಅಲ್ಲದೇ, ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿಯ ಶಿರಸ್ತೇದಾರ್ ಕೊಠಡಿ, ಹೊಸಪೇಟೆ ರಸ್ತೆಯಲ್ಲಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ, ಅರಣ್ಯ ಇಲಾಖೆ ಕಚೇರಿಗಳ ಮೇಲೆ ದಾಳಿ ನಡೆಸಿರುವ ಪ್ರತಿಭಟನಾಕಾರರು, ಕೆಲವು ಕಂಪ್ಯೂಟರ್‌ಗಳು, ಪೀಠೋಪಕರಣ, ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ.

~ನಗರದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರಿ ಕಚೇರಿ ಸಿಬ್ಬಂದಿ ಕೆಲಸ ಮಾಡುವುದು ಬೇಡ ನೀವೆಲ್ಲ ಹೊರಗೆ ನಡೆಯಿರಿ~ ಎಂದು ಸಿಬ್ಬಂದಿಯನ್ನು ಬೆದರಿಸಿದ ಪಾಲಿಕೆ ಸದಸ್ಯ ದಿವಾಕರ್, ಸುನಿಲ್ ರೆಡ್ಡಿ ಹಾಗೂ ಇತರರು ಇದ್ದಕ್ಕಿದ್ದಂತೆಯೇ ಪೀಠೋಪಕರಣ ಧ್ವಂಸಗೊಳಿಸಿದ್ದಲ್ಲದೆ, ಕಂಪ್ಯೂಟರ್‌ಗಳನ್ನು ಕಿತ್ತು ಬಿಸಾಕಿದ್ದಾರೆ. ಈ ರೀತಿ ಗಲಭೆ ನಡೆಸಿದ ಈ ಇಬ್ಬರನ್ನೂ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ನಂತರ ಹೊಸ ಬಸ್ ನಿಲ್ದಾಣದ ಕಡೆ ಧಾವಿಸಿದ ಕೆಲ ಗುಂಪು, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಕಲ್ಲು ತೂರಿ ಗಾಜುಗಳನ್ನು ಒಡೆದರು. ನಗರದ ಪೆಟ್ರೋಲ್ ಬಂಕ್ ಒಂದರ ಮೇಲೂ ದಾಳಿ ನಡೆಸಿ, ಕಲ್ಲು ತೂರಿದ್ದಾರೆ.

ಒತ್ತಡ: ಬಂದ್ ಕರೆಯ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ನಗರದಾದ್ಯಂತ ಅಂಗಡಿ-  ಮುಂಗಟ್ಟುಗಳ ಬಾಗಿಲುಗಳನ್ನು ತೆರೆಯದ ವ್ಯಾಪಾರಿಗಳು, ತಮ್ಮ ಬೆಂಬಲ ಸೂಚಿಸಿದರೆ, ಬೆಂಗಳೂರು ರಸ್ತೆಯಲ್ಲಿ ಕೆಲವು ಅಂಗಡಿಗಳಲ್ಲಿ ವಹಿವಾಟು ನಡೆದಿದ್ದನ್ನು ಕಂಡು ಕುಪಿತರಾದ ಕೆಲವು ಪ್ರತಿಭಟನಾಕಾರರು, ಒತ್ತಾಯದಿಂದ ಅಂಗಡಿಗಳ ಬಾಗಿಲು ಹಾಕುವಂತೆ ಬೆದರಿಸುತ್ತಿದ್ದುದು ಕಂಡುಬಂತು.

ಕೆಲವು ಅಂಗಡಿಗಳ ಎದುರು ಪೊಲೀಸರ ಎದುರೇ ಮಾಲೀಕರ ಮೇಲೆ ಹಲ್ಲೆ ನಡೆಸಿದ ಕೆಲವರು ವಹಿವಾಟು ಸ್ಥಗಿತಗೊಳಿಸುವಂತೆ ಒತ್ತಡ ಹೇರಿದರು.

ಜನಜೀವನ ಅಸ್ತವ್ಯಸ್ತ: ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡಚಣೆ ಉಂಟಾಯಿತು.ನಾಲ್ಕೂ ದಿಕ್ಕಿನಿಂದ ನಗರದತ್ತ ಆಗಮಿಸಿದ ಸಾರಿಗೆ ಸಂಸ್ಥೆಯ ಬಸ್ ಮತ್ತಿತರ ವಾಹನಗಳನ್ನು ಹೊರ ವಲಯದಲ್ಲೇ ತಡೆದು, ಪ್ರಯಾಣಿಕರನ್ನು ಇಳಿಸಿದ್ದರಿಂದ ಅನೇಕರು ಮನೆ ತಲುಪಲು ಪರದಾಡಿದರು. ಬಂದ್ ಅಂಗವಾಗಿ ನಗರದ ಎಲ್ಲ ಶಾಲೆ- ಕಾಲೇಜುಗಳಿಗೆ ಜಿಲ್ಲಾಧಿಕಾರಿಯವರು ರಜೆ ಘೋಷಿಸಿದ್ದರು.

ಪ್ರತಿಭಟನೆ: ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬೆಳಿಗ್ಗೆ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಜನಾರ್ದನರೆಡ್ಡಿ ಬೆಂಬಲಿಗರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಘೋಷಣೆ ಕೂಗಿದರಲ್ಲದೆ, ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ 1.30ರವರೆಗೆ ನಡೆದ ಪ್ರತಿಭಟನೆಯ ವೇಳೆ ಟೈರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಬುಡಾ ಅಧ್ಯಕ್ಷ ಎಸ್.ಗುರುಲಿಂಗನ ಗೌಡ, ಜಿ.ಪಂ. ಮಾಜಿ ಅಧ್ಯಕ್ಷ ರುದ್ರಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ರಾಮಲಿಂಗಪ್ಪ, ಬಿಜೆಪಿ ಮುಖಂಡ ಡಾ.ಮಹಿಪಾಲ್, ಪಾಲಿಕೆ ಸದಸ್ಯ ಬಸವರಾಜ್, ಇಬ್ರಾಹಿಂಬಾಬು, ಬಾಲರಾಜ್,  ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬೆಳಿಗ್ಗೆ ಇದೇ ವೃತ್ತದಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಳ್ಳಲು ಯತ್ನಿಸುತ್ತಿದ್ದ ಪಾನಮತ್ತ ಅಭಿಮಾನಿಯೊಬ್ಬನನ್ನು ಪೊಲೀಸರು ತಡೆದು ಅಪಾಯದಿಂದ ರಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.