ADVERTISEMENT

2025ರ ಜನಗಣತಿ ಆಧರಿಸಿ ಒಳ ಮೀಸಲಾತಿ ಕಲ್ಪಿಸಬೇಕು: ಬೋವಿ ಪರಿಷತ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 16:38 IST
Last Updated 21 ಜನವರಿ 2025, 16:38 IST
<div class="paragraphs"><p>ನ್ಯಾಯಮೂರ್ತಿ ನಾಗಮೋಹನದಾಸ್‌</p></div>

ನ್ಯಾಯಮೂರ್ತಿ ನಾಗಮೋಹನದಾಸ್‌

   

ಬೆಂಗಳೂರು: ‘ಕೇಂದ್ರ ಸರ್ಕಾರ ಹೊಸತಾಗಿ 2025ರ ಜನಗಣತಿ ಮಾಡುತ್ತಿದ್ದು, ಈ ಜನಗಣತಿಯ ದತ್ತಾಂಶಗಳನ್ನು ಪರಿಗಣಿಸಿ ಎಲ್ಲ ಸಮುದಾಯಗಳಿಗೆ ನ್ಯಾಯುತವಾಗಿ ಒಳ ಮೀಸಲಾತಿ ನಿರ್ಣಯಿಸಬೇಕು’ ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ಎಚ್‌.ಎನ್. ನಾಗಮೋಹನ್‌ದಾಸ್‌ ಅವರಿಗೆ ಭಾರತೀಯ ಬೋವಿ ಜನಾಂಗದ ಪರಿಷತ್‌ (ಒಡಿ ಕಮ್ಯೂನಿಟಿ ಆಫ್‌ ಇಂಡಿಯಾ ಇಂಟರ್‌ನ್ಯಾಷನಲ್‌) ಮನವಿ ಸಲ್ಲಿಸಿದೆ.

‘2011ರ ಜನಗಣತಿಯಲ್ಲಿರುವ ಜಾತಿ ಸಮುದಾಯಗಳ ದತ್ತಾಂಶಗಳು 14–15 ವರ್ಷಗಳ ಹಿಂದಿನದ್ದು. ಅದರಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸದಾಶಿವ ಆಯೋಗ ಕೂಡಾ ಜಾತಿ ಸಮುದಾಯಗಳ ದತ್ತಾಂಶದ ಆಧಾರದಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡಿತ್ತು. ಅದೇ ದತ್ತಾಂಶವನ್ನು ಪರಿಗಣಿಸಿ ಜೆ.ಸಿ. ಮಾಧುಸ್ವಾಮಿಯವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಈ ವರದಿಗಳನ್ನು ಆಧರಿಸಿ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ’ ಎಂದೂ ಪರಿಷತ್‌ ಅಭಿಪ್ರಾಯಪಟ್ಟಿದೆ.

ADVERTISEMENT

‘ಮಾಧುಸ್ವಾಮಿ ಅವರ ಅಧ್ಯಕ್ಷತೆಯ ಸಮಿತಿಯು 2022ರಲ್ಲಿ ನೀಡಿದ್ದ ವರದಿ ಅವೈಜ್ಞಾನಿಕವಾಗಿದೆ. ಯಾವುದೇ ಸರ್ಕಾರಿ ಇಲಾಖೆ ಕಡೆಯಿಂದ ಜಾತಿ ಸಮುದಾಯದಿಂದ ದತ್ತಾಂಶ ಪಡೆಯದೆ ತರಾತುರಿಯಲ್ಲಿ ವರದಿಯನ್ನು ಸಲ್ಲಿಸಲಾಗಿತ್ತು. ಹೀಗಾಗಿ, ಆ ವರದಿಯನ್ನು ರದ್ದುಪಡಿಸಬೇಕು’ ಎಂದೂ ಪರಿಷತ್‌ ಆಗ್ರಹಿಸಿದೆ.

ಪರಿಷತ್‌ನ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ ಮತ್ತು ಸಲಹಾ ಸಮಿತಿಯ ಅಧ್ಯಕ್ಷ ಎಚ್‌. ರವಿ ಅವರು ಈ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.