ADVERTISEMENT

ಬಾಬಾಬುಡನ್‌ ಗಿರಿ: ಸರ್ಕಾರದ ತೀರ್ಮಾನ ವಿರೋಧಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಸಿ.ಟಿ. ರವಿ (ಸಂಗ್ರಹ ಚಿತ್ರ)
ಸಿ.ಟಿ. ರವಿ (ಸಂಗ್ರಹ ಚಿತ್ರ)   

ಬೆಂಗಳೂರು: ‘ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ ವಿಷಯದಲ್ಲಿ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ವಿರೋಧಿಸಿ ಹೋರಾಟ ನಡೆಸಲಾಗುವುದು’ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದರು.

‘ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ಸಮಿತಿ ಶಿಫಾರಸು ಆಧರಿಸಿ ಸರ್ಕಾರ ಕೈಗೊಂಡಿರುವ ನಿರ್ಧಾರ ಹಿಂದೂಗಳನ್ನು ದಿಕ್ಕು ತಪ್ಪಿಸುವ ತಂತ್ರ. ದತ್ತಪೀಠದ ಪೂಜೆಯ ಜವಾಬ್ದಾರಿಯನ್ನು ಅರ್ಚಕರಿಗೆ ನೀಡಬೇಕು ಎಂಬ ಎರಡು ತಲೆಮಾರಿನ ಬೇಡಿಕೆಯನ್ನು ತಿರಸ್ಕರಿಸಿರುವ ಸರ್ಕಾರ ಹಿಂದೂಗಳಿಗೆ ಅನ್ಯಾಯ ಮಾಡಿದೆ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ದೂರಿದರು.

‘ದತ್ತಪೀಠದ ಉಸ್ತುವಾರಿ ಮೊದಲಿಂದಲೂ 1927ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲೇ ಇತ್ತು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೊರಗೆ ನೋಡುವುದಕ್ಕೆ ಇದು ಹಿಂದೂಗಳ ಪರ ನಿರ್ಧಾರ ಎಂದು ಬಿಂಬಿತವಾದರೂ ಒಳಗೆ ಇದು ಅಪ್ಪಟವಾಗಿ ಹಿಂದೂಗಳ ವಿರೋಧಿಯಾಗಿದೆ’ ಎಂದು ಜರಿದರು.

ADVERTISEMENT

‘ಪೂಜಾ ಕೈಂಕರ್ಯಗಳ ಜವಾಬ್ದಾರಿಯನ್ನು ಮುಜಾವರ್ ಅವರಿಂದ ಬಿಡಿಸಿ ಹಿಂದೂಗಳಿಗೆ ನೀಡುವಂತೆ ಆಗ್ರಹಿಸಿ ನಾಲ್ಕು ದಶಕಗಳಿಂದ ಹೋರಾಟ ನಡೆದಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ಅವರಿಂದ ತಮಗೆ ಬೇಕಾದಂತೆ ಸರ್ಕಾರ ವರದಿ ಬರೆಸಿಕೊಂಡಿದೆ. ಲಿಂಗಾಯತ ಧರ್ಮ ಹಾಗೂ ದತ್ತಪೀಠದ ವಿಷಯದಲ್ಲಿ ನೀಡಿರುವ ವರದಿ ನೋಡಿದರೆ, ಮಾನಸಿಕವಾಗಿ ಅವರು ಎಡಪಂಥೀಯ ಕಾರ್ಯಕರ್ತರಾಗಿದ್ದಾರೆ. ಕಾಂಗ್ರೆಸ್‌ ಪರವಾದ ನಿಲುವು ಅವರ ವ್ಯಕ್ತಿತ್ವದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಆರೋಪಿಸಿದರು.

‘ನ್ಯಾಯಮೂರ್ತಿ ವರದಿ ಹಾಗೂ ಸರ್ಕಾರದ ತೀರ್ಮಾನ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ದತ್ತಪೀಠ ಮುಕ್ತಿ ಹೋರಾಟವನ್ನು ಪಕ್ಷ ಮುಂದುವರಿಸಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಚಿವ ಸಂ‍ಪುಟ ಸಭೆಯ ತೀರ್ಮಾನವನ್ನು ಬದಲಾವಣೆ ಮಾಡುತ್ತೇವೆ’ ಎಂದು ಅವರು ಪ್ರತಿಪಾದಿಸಿದರು.

‘ಹಿಂದೂಗಳಿಗೆ ಮೋಸ ಮಾಡಬೇಕು ಎಂಬ ಏಕೈಕ ಕಾರಣಕ್ಕೆ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದರಿಂದ ನ್ಯಾಯ ಸಿಗಲು ಹೇಗೆ ಸಾಧ್ಯ. ಮೋಸದ ಪರಂ‍ಪರೆಯ ಭಾಗವಾಗಿಯೇ ಸಮಿತಿ ರಚಿಸಲಾಗಿದೆ. ಹಿಂದೂ ದೇವರಿಗೆ ಮುಜಾವರ್‌ರಿಂದ ಪೂಜೆ ನಡೆಯುವುದನ್ನು ಒಪ್ಪಲು ಹೇಗೆ ಸಾಧ್ಯ. ಮಸೀದಿಯಲ್ಲಿ ಹಿಂದೂ ಅರ್ಚಕರಿಂದ ಪೂಜೆ ಮಾಡಲು ಅವಕಾಶ ಕೊಡುತ್ತಾರೆಯೇ’ ಎಂದೂ ಅವರು ಪ್ರಶ್ನಿಸಿದರು.

**

ಅಲ್ಪಸಂಖ್ಯಾತರನ್ನು ಓಲೈಸುವುದನ್ನು ನಿಲ್ಲಿಸಲಿ. ಇಲ್ಲದಿದ್ದರೆ, ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನು ಅಮಾನುಲ್ಲಾ ಖಾನ್‌ ಎಂದು ಬದಲಿಸಿಕೊಳ್ಳಲಿ.
–ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.