ADVERTISEMENT

ಬಾಯ್ಲರ್ ಸ್ಫೋಟ: ನಾಲ್ವರು ಕಾರ್ಮಿಕರ ಸಾವು

ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ: ತೆರವು ಕಾರ್ಯಾಚರಣೆ

ವೆಂಕಟೇಶ್ ಜಿ.ಎಚ್
Published 16 ಡಿಸೆಂಬರ್ 2018, 19:28 IST
Last Updated 16 ಡಿಸೆಂಬರ್ 2018, 19:28 IST
ಮುಧೋಳದ ನಿರಾಣಿ ಶುಗರ್ಸ್‌ನಲ್ಲಿ ಭಾನುವಾರ ನಡೆದ ಸ್ಫೋಟದ ನಂತರ ಕುಸಿದುಬಿದ್ದ ಪ್ಲಾಂಟ್‌ನಲ್ಲಿ ತೆರವು ಕಾರ್ಯಾಚರಣೆ ನೋಟ.ಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ 
ಮುಧೋಳದ ನಿರಾಣಿ ಶುಗರ್ಸ್‌ನಲ್ಲಿ ಭಾನುವಾರ ನಡೆದ ಸ್ಫೋಟದ ನಂತರ ಕುಸಿದುಬಿದ್ದ ಪ್ಲಾಂಟ್‌ನಲ್ಲಿ ತೆರವು ಕಾರ್ಯಾಚರಣೆ ನೋಟ.ಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ    

ಮುಧೋಳ (ಬಾಗಲಕೋಟೆ): ಇಲ್ಲಿನ ನಿರಾಣಿ ಶುಗರ್ಸ್‌ನ ಡಿಸ್ಟಿಲರಿ ಘಟಕದ ಎಫ್ಲ್ಯುಯೆಂಟ್‌ ಟ್ರೀಟ್‌ಮೆಂಟ್ ಪ್ಲಾಂಟ್‌ನ (ಇಟಿಪಿ) ಬಾಯ್ಲರ್ ಸ್ಫೋಟಗೊಂಡು ಭಾನುವಾರ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ಲಾಂಟ್‌ನ ವ್ಯವಸ್ಥಾಪಕ, ಕಲಬುರ್ಗಿ ಜಿಲ್ಲೆಯ ಅಫಜಲಪುರದ ಶರಣಬಸಪ್ಪ ತೋಟದ (35), ಆಪರೇಟರ್‌ಗಳಾದ ಜಮಖಂಡಿ ತಾಲ್ಲೂಕು ನಾವಲಗಿಯ ಜಗದೀಶ ಪಟ್ಟಣಶೆಟ್ಟಿ (34), ಮುಧೋಳ ತಾಲ್ಲೂಕು ಯಡಹಳ್ಳಿಯ ಶಿವಾನಂದ ಹೊಸಮಠ (43), ಫಿಟ್ಟರ್ ಆಪರೇಟರ್ ಕುಳಲಿಯ ನಾಗಪ್ಪ ಧರ್ಮಟ್ಟಿ (38) ಸಾವಿಗೀಡಾದವರು.

ಮೃತಪಟ್ಟ ಶಿವಾನಂದ ಹೊಸಮಠ ಅವರ ಪುತ್ರ 9 ವರ್ಷದ ಮನೋಜ್‌ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ. ಅವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಮುಧೋಳ ಹಾಗೂ ಬೆಳಗಾವಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ADVERTISEMENT

ಸ್ಫೋಟದ ರಭಸಕ್ಕೆ ಇಡೀ ಘಟಕ ನೆಲಕಚ್ಚಿದ್ದು, ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.

ಭಾರೀ ಸದ್ದು: ಮಧ್ಯಾಹ್ನ 12.15ಕ್ಕೆ ದಿನದ ಎರಡನೇ ಪಾಳಿ ಆರಂಭವಾದ ಕೆಲ ಹೊತ್ತಿನಲ್ಲಿಯೇ ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಮುಧೋಳ ನಗರ ಸೇರಿದಂತೆ ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯ ಮಾಲಾಪುರ, ಕುಳಲಿ, ಮುಗಳಖೋಡದಲ್ಲಿ ಮನೆಗಳು ಕಂಪಿಸಿವೆ.

ಸಮೀಪದ ಶಾಲಾ ಕಟ್ಟಡದ ಕಿಟಕಿಯ ಗಾಜುಗಳು ಒಡೆದಿವೆ. ಕಟ್ಟಡ ಸಿಡಿದ ಪರಿಣಾಮ ದೊಡ್ಡ ಕಲ್ಲೊಂದು ಹೈಮಾಸ್ಟ್ ದೀಪದ ತುದಿಯಲ್ಲಿ ಸಿಲುಕಿತ್ತು. ಕಟ್ಟಡದ ಪಿಲ್ಲರ್ ಮಾತ್ರ ಇದ್ದು, ಉಳಿದ ಭಾಗ ನೆಲಸಮವಾಗಿದ್ದು ಸ್ಫೋಟದ ತೀವ್ರತೆ ಸಾರುತ್ತಿತ್ತು. ಅವಘಡದ ನಂತರ ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಉತ್ತರ ವಲಯ ಐಜಿಪಿ ಎಚ್.ಎಸ್. ರೇವಣ್ಣ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಹಾರ ಕಾರ್ಯದ ಮೇಲ್ವಿಚಾರಣೆ ವಹಿಸಿದ್ದಾರೆ.

ಅವಶೇಷ ತೆರವು ನಂತರ ಸ್ಪಷ್ಟ ಚಿತ್ರಣ: ‘ಸೇಫ್ಟಿ ವಾಲ್ವ್‌ ಕೆಲಸ ನಿರ್ವಹಿ ಸದೇ ಒತ್ತಡ ಹೆಚ್ಚಾಗಿ ಬಾಯ್ಲರ್ ಸ್ಫೋಟಗೊಂಡಿದೆ. ಸತ್ತವರು, ಗಾಯಗೊಂಡವರ ಹೊರತಾಗಿ ಆ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಉಳಿದವರೆಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ತಿಳಿಸಿದ್ದಾರೆ. ಆದರೂ ಅವಶೇಷಗಳ ತೆರವು ಕಾರ್ಯಾಚರಣೆ ಮುಗಿದ ನಂತರವೇ ವಾಸ್ತವ ಚಿತ್ರಣ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಗಾವಿ ವಿಭಾಗದ ಬಾಯ್ಲರ್‌ಗಳ ಇನ್‌ಸ್ಪೆಕ್ಟರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸುರಕ್ಷತಾ ಕ್ರಮಗಳ ಉಲ್ಲಂಘನೆಯ ಬಗ್ಗೆ ತನಿಖೆ ಕೈಗೊಳ್ಳಲಿದ್ದಾರೆ ಎಂದರು.

ತಲಾ ₹5 ಲಕ್ಷ ಪರಿಹಾರ–ನಿರಾಣಿ: ‘ಪ್ಲಾಂಟ್‌ನ ಸೇಫ್ಟಿವಾಲ್ ಕೆಲಸ ಮಾಡಿಲ್ಲ. ಇದರಲ್ಲಿ ಕಿಡಿಗೇಡಿಗಳು ಕೃತ್ಯವೂ ಇರಬಹುದು. ಸಂಪೂರ್ಣ ತನಿಖೆಯ ನಂತರ ಆ ಬಗ್ಗೆ ಪ್ರತಿಕ್ರಿಯಿಸುವೆ’ ಎಂದು ನಿರಾಣಿ ಉದ್ಯಮ ಸಮೂಹದ ಮುಖ್ಯಸ್ಥರೂ ಆದ ಶಾಸಕ ಮುರುಗೇಶ್ ನಿರಾಣಿ ಸುದ್ದಿಗಾರರಿಗೆ ತಿಳಿಸಿದರು.

‘ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು.ಮೃತಪಟ್ಟವರ ಕುಟುಂಬಗಳಿಗೆ ಜೀವವಿಮೆ ಅನುಕೂಲ‌ ಕಲ್ಪಿಸಲಾಗುವುದು. ಕುಟುಂಬದವರಿಗೆ ಕೆಲಸ‌ ನೀಡಲಾಗುವುದು’ ಎಂದರು.

ಮಗನ ಎದುರೇ ಅಪ್ಪನ ಸಾವು..

ಪ್ಲಾಂಟ್‌ನ ಆಪರೇಟರ್ ಶಿವಾನಂದ ಹೊಸಮಠ, ಮೊದಲ ಪಾಳಿಯಲ್ಲಿ ಕೆಲಸ ಮುಗಿಸಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ದುರಸ್ತಿಗಾಗಿ ಕರೆ ಬಂದ ಕಾರಣ, ಮಗ ಮನೋಜ್‌ನೊಂದಿಗೆ ಮದುವೆ ಮನೆಯಿಂದಲೇ ಪ್ಲಾಂಟ್‌ಗೆ ಮರಳಿದ್ದಾರೆ.

ಕೆಲಸ ಮುಗಿಸಿ ಮನೆಗೆ ತೆರಳಲು ಬೈಕ್‌ ಹತ್ತುತ್ತಿದ್ದಂತೆಯೇ ಸ್ಫೋಟ ಸಂಭವಿಸಿದೆ. ಅವರ ಮೇಲೆ ಕಟ್ಟಡದ ಅವಶೇಷ ಬಿದ್ದಿದ್ದು, ಬೈಕ್ ಸಮೇತ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ’ಜೋರಾಗಿ ಸದ್ದು ಆತ್ರಿ. ಅಪ್ಪ ನನ್ನ ಅವಚಿಕೊಂಡು ಕೆಳಗೆ ಬಿದ್ರು. ಅವರ ಮೈ ಮ್ಯಾಲ ಹೆಂಡಿ (ಇಟ್ಟಿಗೆ) ಬಿದ್ದಾವ್ರಿ’ ಎಂದು ಘಟನೆ ವಿವರಿಸಿದ ಮನೋಜ್‌ಗೆ ಅಪ್ಪನ ಸಾವಿನ ಬಗ್ಗೆ ಗೊತ್ತಿರಲಿಲ್ಲ.

ತನಿಖೆಗೆ ಮುಖ್ಯಮಂತ್ರಿ ಸೂಚನೆ

ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ಸಕ್ಕರೆ ಕಾರ್ಖಾನೆ ಸಂಸ್ಕರಣಾ ಘಟಕದಲ್ಲಿ ನಡೆದ ಸ್ಫೋಟದಲ್ಲಿ ಆದ ಸಾವು ನೋವುಗಳಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ಬಗ್ಗೆತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ದೂರವಾಣಿ ಮೂಲಕಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಮಾತನಾಡಿ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಜಿಲ್ಲೆಗಳಿಂದ ಅಂಬ್ಯುಲೆನ್ಸ್‌ಗಳನ್ನು ಕಳುಹಿಸಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಬೇಕು. ಮೃತರ ಕುಟುಂಬಗಳಿಗೆ ಅಗತ್ಯ ನೆರವು ಹಾಗೂ ಪರಿಹಾರ ಒದಗಿಸಲು ಅವರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.