ADVERTISEMENT

ಬಿಗ್‌ಬಾಸ್‌: ಈ ಬಾರಿ ಸಾಮಾನ್ಯರಿಗೂ ಅವಕಾಶ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ಚಿತ್ರನಟ ಸುದೀಪ್
ಚಿತ್ರನಟ ಸುದೀಪ್   

ಬೆಂಗಳೂರು: 'ಬಿಗ್‌ಬಾಸ್‌ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆಸಕ್ತಿ ನನಗೆ ಖುಷಿಕೊಟ್ಟಿದೆ' ಎಂದು ಕಿಚ್ಚ ಸುದೀಪ್ ಹೇಳಿದರು.

'ಸೂಪರ್ ಚಾನೆಲ್‌'ನಲ್ಲಿ ಇದೇ ಭಾನುವಾರದಿಂದ (ಅ.15) ಆರಂಭವಾಗಲಿರುವ ಬಿಗ್‌ಬಾಸ್‌ ರಿಯಾಲಿಟಿ ಶೋ ಕುರಿತು ಮಾಹಿತಿ ನೀಡಲು ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಟಿವಿ ಶೋಗಳು ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತವೆ. ಆದರೆ ಬಿಗ್‌ಬಾಸ್ ಹಾಗಲ್ಲ. ಪ್ರತಿ ಸೀಸನ್‌ಗೂ ಅದರ ಆಕರ್ಷಣೆ ಹೆಚ್ಚುತ್ತಿದೆ' ಎಂದು ತಮ್ಮ ಖುಷಿಯ ಕಾರಣಗಳನ್ನೂ ಹಂಚಿಕೊಂಡರು.

'ವರ್ಷದ ಹಿಂದೆ ಆರಂಭವಾದ 'ಕಲರ್ಸ್‌ ಸೂಪರ್‌' ಕನ್ನಡ ಟೆಲಿವಿಷನ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. ಐದನೇ ಸೀಸನ್‍ನ ಬಿಗ್‍ಬಾಸ್ ಕಾರ್ಯಕ್ರಮ ಚಾನೆಲ್‍ನ ಪ್ರಗತಿಯ ವೇಗಕ್ಕೆ ಸಹಕಾರಿ' ಎಂದು 'ವಯಾಕಾಂ 18'ನ ಪ್ರಾದೇಶಿಕ ಮನರಂಜನಾ ವಿಭಾಗದ ಮುಖ್ಯಸ್ಥ ರವೀಶ್ ಕುಮಾರ್ ಅಭಿಪ್ರಾಯಪಟ್ಟರು.

ADVERTISEMENT

'ಬಿಗ್‌ಬಾಸ್‌ಗಾಗಿ ಈ ಬಾರಿಯೂ ಹೊಸ ಮನೆ ನಿರ್ಮಿಸಲಾಗಿದೆ. ಸುದೀಪ್ ಅವರು ಈ ಮನೆಯನ್ನು ಭಾನುವಾರ ವೀಕ್ಷಕರಿಗೆ ಪರಿಚಯಿಸಲಿದ್ದಾರೆ. ಮನೆಯೊಳಗೆ ಸ್ಪರ್ಧಿಗಳನ್ನು ಕಳುಹಿಸಲಿದ್ದಾರೆ. ಈ ಬಾರಿಯ ಸ್ಪರ್ಧಿಗಳ ಸಂಖ್ಯೆ ಹದಿನೇಳು. ಅದರಲ್ಲಿ ಆರು ಮಂದಿ ಸಾಮಾನ್ಯ ಜನರು. ಬಿಗ್‌ಬಾಸ್ ಮನೆ ಪ್ರವೇಶಿಸಲು ಆಸಕ್ತಿ ತೋರಿ 'ವೂಟ್' ಆ್ಯಪ್‍ ಮೂಲಕ 40 ಸಾವಿರಕ್ಕೂ ಹೆಚ್ಚು ಜನರು ವಿಡಿಯೊ ಕಳಿಸಿದ್ದರು' ಎಂದು ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್‍ನ ಬ್ಯುಸಿನೆಸ್ ಹೆಡ್ ಹಾಗೂ ಬಿಗ್‍ಬಾಸ್ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ತಿಳಿಸಿದರು.

ಕಾರ್ಯಕ್ರಮವನ್ನು ನಿರ್ಮಿಸುತ್ತಿರುವ ಎಂಡೆಮಾಲ್ ಶೈನ್ ಇಂಡಿಯಾದ ಅಭಿಷೇಕ್ ರೇ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.