ADVERTISEMENT

ಬೀದರ್‌ನಲ್ಲಿ ಸಂಚಾರಿ ಜಿಲ್ಲಾಧಿಕಾರಿ ಕಚೇರಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಬೀದರ್:  ಅತ್ಯಾಧುನಿಕ ಸೌಲಭ್ಯ ಹಾಗೂ ಹವಾನಿಯಂತ್ರಿತ ವ್ಯವಸ್ಥೆ ಇರುವ ವಿನೂತನ ಮಾದರಿಯ ಬಸ್ಸನ್ನು ಬೀದರ್ ಜಿಲ್ಲಾಧಿಕಾರಿಗಳು `ಸಂಚಾರಿ ಜಿಲ್ಲಾಧಿಕಾರಿ ಕಚೇರಿ~ಯಾಗಿ ಪರಿವರ್ತಿಸಿದ್ದಾರೆ. 13 ಜನ ಕುಳಿತುಕೊಳ್ಳಲು ಅವಕಾಶ ಇರುವ ಈ ಬಸ್ಸನ್ನು ಜಿಲ್ಲಾಧಿಕಾರಿ ಕಚೇರಿಯ ಅಗತ್ಯಕ್ಕೆ ತಕ್ಕಂತೆ ಹೇಳಿ ಮಾಡಿಸಲಾಗಿದೆ.

ಬಸ್ಸು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತಿರುವಾಗಲೇ ಅಧಿಕಾರಿಗಳ ಸಭೆ ನಡೆಸಬಹುದು. ಅದಕ್ಕೆ ಅಗತ್ಯವಿರುವ `ಪರದೆ~, ಪ್ರೊಜೆಕ್ಟರ್, ಮೈಕ್, ಕಂಪ್ಯೂಟರ್, ಫೈಲುಗಳನ್ನು ಇರಿಸುವ ರ‌್ಯಾಕ್ ವ್ಯವಸ್ಥೆ ಇದೆ. ಇದಲ್ಲದೇ ಬಸ್ಸಿನ ಒಳಗಡೆಯೇ ಶೌಚಾಲಯ ಹಾಗೂ ಚಹಾ, ಪಾನೀಯದ ವ್ಯವಸ್ಥೆ ಕಲ್ಪಿಸುವುದಕ್ಕೆ ಅಗತ್ಯವಾಗಿರುವ ಪುಟ್ಟ ಕಿಚನ್ ಕೂಡ ಇದೆ. 26.38 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬಸ್ಸನ್ನು ಖರೀದಿಸಲಾಗಿದೆ.

`ಇದೊಂದು ವಿನೂತನ ಹಾಗೂ ಮೊದಲ ಬಾರಿಗೆ ಜಾರಿಗೆ ತಂದ ಪ್ರಯೋಗ. ಇದನ್ನು ರೂಪಿಸುವ ಬಿಲ್ಡರ್‌ಗಳನ್ನು ಹುಡುಕುವುದಕ್ಕೆ ಬಹಳ ಕಷ್ಟ ಪಡಬೇಕಾಯಿತು. ಐದು ಬಾರಿ ಬಸ್ಸಿನ ಒಳಗಿನ ವಿನ್ಯಾಸ ಬದಲಿಸಲಾಗಿದೆ. ಅದಕ್ಕಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳ ಸಲಹೆ ಪಡೆಯಲಾಯಿತು~ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ವಿವರಿಸಿದರು.

`ಪರಿಶೀಲನೆ ನಡೆಸುವುದಕ್ಕಾಗಿ ಜಿಲ್ಲಾ ಕೇಂದ್ರ ಹೊರತುಪಡಿಸಿ ಬೇರೆ ಕಡೆಗೆ ಹೋಗುವ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಹತ್ತಾರು ವಾಹನ ತೆಗೆದುಕೊಂಡು ಹೋಗಲಾಗುತ್ತಿತ್ತು. ಅದರಿಂದ ಅನಗತ್ಯವಾಗಿ ಹೆಚ್ಚು ಹಣ ಖರ್ಚಾಗುತ್ತಿತ್ತು. ಹಾಗೆಯೇ ಹಲವು ವಾಹನಗಳು  ಹೋಗುವುದರಿಂದ ಉಂಟಾಗುವ ವಾಲಿನ್ಯ ಕೂಡ ಆಗುತ್ತಿತ್ತು. ನೂತನ ಬಸ್ಸಿನ ಮೂಲಕ ಅದನ್ನು ಕಡಿಮೆ ಮಾಡಲಾಗಿದೆ. ಈ ಬಸ್ಸಿನಲ್ಲಿ ಮಾರ್ಗಮಧ್ಯದಲ್ಲಿಯೇ ಸಭೆ ನಡೆಸುತ್ತ ಮಾಹಿತಿ ಪಡೆಯುತ್ತ ಸಂಚರಿಸುವುದರಿಂದ ಮಹತ್ವದ ಸಮಯವನ್ನು ಬಳಸಿಕೊಳ್ಳಲು ಅವಕಾಶ ಆಗುತ್ತದೆ ಎನ್ನುವ ಉದ್ದೇಶದಿಂದ ಈ ಬಸ್ ರೂಪಿಸಲಾಗಿದೆ~ ಎಂದು ಶುಕ್ಲಾ ಅಭಿಪ್ರಾಯಪಡುತ್ತಾರೆ.

`ಮುಖ್ಯಮಂತ್ರಿಗಳು, ಸಚಿವರು ಮತ್ತು ಹಿರಿಯ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಸ್ಸಿನಲ್ಲಿ ಸಂಚರಿಸುತ್ತಿರುವಾಗಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಮಾಹಿತಿ ನೀಡಬಹುದು.

ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇರುವುದರಿಂದ ಬೇಸಿಗೆಯಲ್ಲಿಯೂ ಜಿಲ್ಲೆಯಾದ್ಯಂತ ಪ್ರಯಾಣ ಮಾಡುತ್ತಲೇ ಸಭೆ ನಡೆಸಬಹುದು ಮತ್ತು ನಿರ್ಣಯ ತೆಗೆದುಕೊಳ್ಳಬಹುದು ಎಂಬ ಆಶಯ ಬಸ್ ರೂಪಿಸುವಾಗ ಇತ್ತು~ ಎಂದು ಜಿಲ್ಲಾಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

`ರಾಜ್ಯದಲ್ಲಿಯೇ ಇದೊಂದು ಮೊದಲ ಪ್ರಯೋಗ ಆಗಿರುವುದರಿಂದ ಬೇರೆ ಬೇರೆ ಯಾವ್ಯಾವ ರೀತಿಯಲ್ಲಿ ಇದನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ನೋಡಬೇಕು. ಪಕ್ಕದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿಗಳ, ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿಯೂ ಬಳಸುವುದಕ್ಕೆ ತೆಗೆದುಕೊಂಡು ಹೋಗಬಹುದು~ ಎಂದ ಸಮೀರ್ ಶುಕ್ಲಾ ಅವರು `ಮುಂಬರುವ ದಿನಗಳಲ್ಲಿ ಬಸ್ಸಿಗೆ ಉಪಗ್ರಹ ಸಂಪರ್ಕ ಕಲ್ಪಿಸುವ ಬಗ್ಗೆ ಯೋಚಿಸಲಾಗುತ್ತಿದೆ~ ಎಂದರು.

`ಜಿಲ್ಲೆಯಾದ್ಯಂತ ಸರ್ಕಾರಿ ಆಡಳಿತ ವ್ಯವಸ್ಥೆ ಇದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿಯೂ ಹವಾನಿಯಂತ್ರಿತ ವ್ಯವಸ್ಥೆಯೊಂದನ್ನು ಹೊರತು ಪಡಿಸಿ ಈಗ ಬಸ್ಸಿನಲ್ಲಿ ಇರುವ ಎಲ್ಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿಯೂ ಸಭೆ ನಡೆಸುವುದಕ್ಕೆ ಅವಕಾಶ ಇದೆ. ಜನರ ಮಧ್ಯೆ ನಡೆಯುವ ಪ್ರಗತಿ ಪರಿಶೀಲನೆಗೆ ಒಂದು ಮಹತ್ವ ಇರುತ್ತದೆ. ಅದು ಬಿಟ್ಟು ಕೇವಲ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಮಾತ್ರ ಪರಸ್ಪರ ಮಾಹಿತಿ ನೀಡುವ ಮತ್ತು ಕೊಡುವಂತಹದ್ದು ಒಳ್ಳೆಯದೇನಲ್ಲ~ ಎಂಬ ಅಭಿಪ್ರಾಯ ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ್ ಅಲಿ ಅವರದ್ದು.

ಬಸ್ ಖರೀದಿಸಿದ ನಂತರ ಸಂಸತ್ ಸದಸ್ಯ ಧರ್ಮಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಿಚಕ್ಷಣಾ ಸಮಿತಿಯ ಸಭೆಯಲ್ಲಿ ಶಾಸಕ ಈಶ್ವರ ಖಂಡ್ರೆಯವರು ಕುಡಿಯುವ ನೀರಿನ ಯೋಜನೆಗಳ ವಿಷಯ ಪ್ರಸ್ತಾಪಿಸಿದರು. ಆಗ ಅಧಿಕಾರಿಗಳು ಅನುದಾನದ ಕೊರತೆಯ ಬಗ್ಗೆ ಹೇಳುತ್ತಿದ್ದಂತೆಯೇ `ಬಸ್ ಖರೀದಿಸುವುದಕ್ಕೆ ಹಣ ಇದೆ. ಅಭಿವೃದ್ಧಿಗೆ ಹಣ ಇಲ್ಲವೇ?~ ಎಂದು ಪ್ರಶ್ನಿಸಿದರು.

`ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದಕ್ಕೇ ಹಣ ಸಾಕಾಗುತ್ತಿಲ್ಲ. ಯಾವಾಗಲೂ `ಇಲ್ಲ~ ಎಂಬ ಉತ್ತರವೇ ಬರುತ್ತದೆ. ಅಂತಹುದ್ದರಲ್ಲಿ ಹಿಂದುಳಿದ ಪ್ರದೇಶದ ಅಭಿವೃದ್ಧಿಯ ಉದ್ದೇಶದಿಂದ ನೀಡಲಾದ ಬಿಆರ್‌ಜಿಎಫ್‌ನ (ಬ್ಯಾಕ್‌ವರ್ಡ್ ರೀಜನ್ ಗ್ರ್ಯಾಂಟ್ ಫಂಡ್) ಹಣವನ್ನು ಬಸ್ ಖರೀದಿಗೆ ಬಳಸುವುದು ಎಷ್ಟು ಸರಿ?~ ಎಂದು ಖಂಡ್ರೆ ಕೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.