ADVERTISEMENT

ಬೆಂಗಳೂರಲ್ಲೂ ಬಾಂಬ್ ಸ್ಫೋಟ

ಬೈಕ್‌ನಲ್ಲಿ ಸ್ಫೋಟಕ ಇಟ್ಟಿದ್ದ ದುಷ್ಕರ್ಮಿಗಳು * ಉಗ್ರರ ಕೃತ್ಯ- ಗೃಹಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಬೆಂಗಳೂರು:  ನಗರದ ಮಲ್ಲೇಶ್ವರದ 3ನೇ ಅಡ್ಡರಸ್ತೆಯಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಬಳಿ ಬುಧವಾರ ಬೆಳಿಗ್ಗೆ ತೀವ್ರ ಸ್ವರೂಪದ ಬಾಂಬ್ ಸ್ಫೋಟಿಸಿದ್ದು, ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಸಿಬ್ಬಂದಿ ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ.

ಸ್ಥಳದಲ್ಲಿದ್ದ ನಾಲ್ಕು ಕಾರು ಮತ್ತು ಮೂರು ಬೈಕ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಕೆಎಸ್‌ಆರ್‌ಪಿ ವಾಹನವೂ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾರುಗಳು ಜಖಂಗೊಂಡಿವೆ. ಸ್ಫೋಟದ ತೀವ್ರತೆಗೆ ಘಟನಾ ಸ್ಥಳದಿಂದ ಸುಮಾರು ಎರಡು ಕಿ.ಮೀ ವ್ಯಾಪ್ತಿಯಲ್ಲಿನ ಅನೇಕ ಮನೆಗಳ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಗೋಡೆಗಳು ಬಿರುಕು ಬಿಟ್ಟಿವೆ. ಪೀಠೋಪಕರಣಗಳು ಹಾಗೂ ಬಾಗಿಲುಗಳಿಗೆ ಹಾನಿಯಾಗಿದೆ.

ಬಿಜೆಪಿ ಕಚೇರಿ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಕೆಎಸ್‌ಆರ್‌ಪಿ ಸಿಬ್ಬಂದಿ ಕಚೇರಿಯಿಂದ ಸ್ವಲ್ಪ ದೂರದಲ್ಲಿ ರಸ್ತೆ ಪಕ್ಕ ವಾಹನದಲ್ಲಿ ಕುಳಿತಿದ್ದರು. ಆ ವಾಹನದ ಮುಂಭಾಗದಲ್ಲಿ ಸ್ಥಳೀಯರು ಕಾರು ಹಾಗೂ ಬೈಕ್‌ಗಳನ್ನು ನಿಲ್ಲಿಸಿದ್ದರು. ಅದೇ ಜಾಗದಲ್ಲಿ ನಿಂತಿದ್ದ ಇಂಡ್ ಸುಜುಕಿ ಬೈಕ್‌ನಲ್ಲಿ (ಟಿಎನ್ 22, ಆರ್- 3769) ಅಡಗಿಸಿಟ್ಟಿದ್ದ ಬಾಂಬ್ ಬೆಳಿಗ್ಗೆ 10.28ರ ಸುಮಾರಿಗೆ ಸ್ಫೋಟಗೊಂಡಿತು.

ಘಟನಾ ಸ್ಥಳದ ಅಕ್ಕಪಕ್ಕದಲ್ಲಿರುವ ದಿನಸಿ ಅಂಗಡಿ, ವಾಣಿಜ್ಯ ಮಳಿಗೆ, ಚಾರ್ಟೆಡ್ ಅಕೌಂಟೆಂಟ್ ಕಚೇರಿ, ಅಪಾರ್ಟ್‌ಮೆಂಟ್ ಮತ್ತು ಮನೆಗಳಲ್ಲಿ ಇದ್ದವರು ಗಾಜು ಹಾಗೂ ಕಬ್ಬಿಣದ ಚೂರುಗಳು ಹೊಕ್ಕಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಕೆಎಸ್‌ಆರ್‌ಪಿ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಸಮೀಪದಲ್ಲೇ ನಡೆದು ಹೋಗುತ್ತಿದ್ದ ಮೂರ‌್ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಬಾಂಬ್ ಅಡಗಿಸಿಟ್ಟಿದ್ದ ಬೈಕ್ ಸ್ಫೋಟದ ತೀವ್ರತೆಗೆ ಸಂಪೂರ್ಣ ಛಿದ್ರಗೊಂಡಿದ್ದು, ಅದರ ಬಿಡಿ ಭಾಗಗಳು ಘಟನಾ ಸ್ಥಳದ ಸುತ್ತಮುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ವಾಹನಗಳು ಹಾಗೂ ಮನೆಗಳ ಕಿಟಕಿ ಗಾಜಿನ ಚೂರು ರಸ್ತೆ ತುಂಬೆಲ್ಲಾ ಹರಡಿತ್ತು. ಇಡೀ ಪ್ರದೇಶದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಆಂತರಿಕ ಭದ್ರತಾ ವಿಭಾಗ, ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಸ್ಫೋಟದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ, `ದುಷ್ಕರ್ಮಿಗಳು ಬೈಕ್‌ನಲ್ಲಿ ಬಾಂಬ್ ಅಡಗಿಸಿಟ್ಟು ಸ್ಫೋಟ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಬಾಂಬ್‌ನಲ್ಲಿ ಬಳಸಿರುವ ಸ್ಫೋಟಕಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ' ಎಂದರು.

ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್, `ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಘಟನಾ ಸ್ಥಳದಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಬಾಂಬ್ ಸ್ಫೋಟ ಸಂಭವಿಸಿರುವುದು ಗೊತ್ತಾಯಿತು' ಎಂದು ಹೇಳಿದರು. ಸ್ಥಳದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಘಟನೆ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳುಗಳ ವಿವರ:  ಕೆಎಸ್‌ಆರ್‌ಪಿ ಹೆಡ್ ಕಾನ್‌ಸ್ಟೆಬಲ್‌ಗಳಾದ ಗಣೇಶ್‌ರಾವ್ (50), ಪ್ರಭಾಕರ್ ಸಬ್ನೀಸ್ (53), ಎಸ್.ಬಿ.ಕೋನಿ (50), ರಾಮೇಗೌಡ (50), ಆರ್.ಬಾಲಕೃಷ್ಣಯ್ಯ (50), ವೈ.ಎನ್.ವೆಂಕಟೇಶಪ್ಪ (51), ಕೆ.ವಿ.ಜಯಣ್ಣ (48), ಮೀಲಣ್ಣನವರ್ (49), ವಿಶ್ವೇಶ್ವರಯ್ಯ (50), ಎಸ್.ಚೌಡಪ್ಪ (51), ಮೌಲಾಬಾಸ್ ನದಾಫ್ (45), ಎಎಸ್‌ಐ ಬಿ.ಸಿ.ಕುಂಜಪ್ಪ (55).

ಪಿಯುಸಿ ವಿದ್ಯಾರ್ಥಿನಿಯರಾದ ಲಿಷಾ (17) ಮತ್ತು ರಕ್ಷಿತಾ (17) ಎಂಬುವರು ಗಾಯಗೊಂಡಿದ್ದಾರೆ. ಲಿಷಾ ಅವರ ಎಡಗಾಲಿಗೆ ಹಾಗೂ ರಕ್ಷಿತಾ ಅವರ ಬಲಗಾಲಿನ ಪಾದಕ್ಕೆ ತೀವ್ರ ಪೆಟ್ಟಾಗಿದೆ. ಮಲ್ಲೇಶ್ವರ ಸಂಚಾರ ಠಾಣೆ ಕಾನ್‌ಸ್ಟೆಬಲ್ ಕೃಷ್ಣಮೂರ್ತಿ, ಮಲ್ಲೇಶ್ವರ 13ನೇ ಅಡ್ಡರಸ್ತೆ ನಿವಾಸಿಗಳಾದ ಮೂರ್ತಿ, ಇಂದಿರಾ ಪಾರ್ಥಸಾರಥಿ, ನಾಗರಾಜು ಮತ್ತು ರಂಜಿತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ADVERTISEMENT

ಸುಧಾರಿತ ಸಾಧನ
ಮಲ್ಲೇಶ್ವರದಲ್ಲಿ ಸ್ಫೋಟಗೊಂಡ ಬಾಂಬ್‌ನಲ್ಲಿ ಸುಧಾರಿತ ಸ್ಫೋಟಕ ವಸ್ತುಗಳಾದ (ಐಇಡಿ) ಅಮೋನಿಯಂ ನೈಟ್ರೇಟ್, ಅಲ್ಯುಮಿನಿಯಂ ಮತ್ತು ಕಬ್ಬಿಣದ ಚೂರುಗಳು, ಡಿಟೋನೇಟರ್, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಚಿಪ್ ಬಳಸಿದ್ದಾರೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರು ಮಾಹಿತಿ ನೀಡಿದ್ದಾರೆ.ಸ್ಫೋಟದ ಹಿಂದೆ ಲಷ್ಕರ್-ಎ-ತೊಯ್ಬಾ ಅಥವಾ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳ ಕೈವಾಡವಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.