ADVERTISEMENT

ಬೆಂಗಳೂರು ತಲುಪಿದ 51 ಯಾತ್ರಿಗಳು

ರಾಜ್ಯದ 14 ಜನ ಉತ್ತರಾಖಂಡದಲ್ಲಿ ಇನ್ನೂ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST
ಬೆಂಗಳೂರು ತಲುಪಿದ 51 ಯಾತ್ರಿಗಳು
ಬೆಂಗಳೂರು ತಲುಪಿದ 51 ಯಾತ್ರಿಗಳು   

ಬೆಂಗಳೂರು: ಪ್ರವಾಹ ಪೀಡಿತ ಉತ್ತರಾಖಂಡದ ಬದರಿನಾಥದಲ್ಲಿ ರಕ್ಷಿಸಲಾದ ರಾಜ್ಯದ 51 ಮಂದಿ ಯಾತ್ರಾರ್ಥಿಗಳ ಕೊನೆಯ ತಂಡ ಮಂಗಳವಾರ ಡೆಹ್ರಾಡೂನ್‌ನಿಂದ ಮಧ್ಯಾಹ್ನ 12 ಗಂಟೆಗೆ ಜೆಟ್ ಏರ್‌ವೇಸ್ ವಿಮಾನದಲ್ಲಿ ಹೊರಟು ಸಂಜೆ 4.45ಕ್ಕೆ ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.

ನಿಲ್ದಾಣದಲ್ಲಿ ಕಾದಿದ್ದ ಸಂಬಂಧಿಕರು ಹಾರ ಹಾಗೂ ಹೂಗುಚ್ಛ ನೀಡುವ ಮೂಲಕ ಯಾತ್ರಾರ್ಥಿಗಳನ್ನು ಬರಮಾಡಿಕೊಂಡರು. ಹೆಚ್ಚಿನ ತೊಂದರೆಯಾಗದೇ ಬದುಕಿಬಂದ ಕುಟುಂಬ ಸದಸ್ಯರನ್ನು ಕಂಡು ಹಲವರ ಕಣ್ಣುಗಳು ತೇವಗೊಂಡವು.

ರಾಜ್ಯದ ಯಾತ್ರಿಗಳ ರಕ್ಷಣೆಗೆ ತೆರಳಿದ್ದ ವಾರ್ತಾ ಸಚಿವ ಸಂತೋಷ್ ಲಾಡ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, `ಉತ್ತರಾಖಂಡದಲ್ಲಿ ನೆರೆಗೆ ಸಿಲುಕಿದ್ದ ರಾಜ್ಯದ ಒಟ್ಟು 450 ಯಾತ್ರಾರ್ಥಿಗಳನ್ನು ಈವರೆಗೆ ರಕ್ಷಿಸಿದಂತಾಗಿದೆ. ಕಣ್ಮರೆಯಾಗಿರುವ 14 ಮಂದಿ ಯಾತ್ರಾರ್ಥಿಗಳ ಪತ್ತೆ ಸಾಧ್ಯವಾಗಿಲ್ಲ. ಉತ್ತರಾಖಂಡ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಕಣ್ಮರೆಯಾದವರ ಭಾವಚಿತ್ರ ಹಾಗೂ ವಿವರಗಳನ್ನು ಕಳುಹಿಸಲಾಗಿದೆ' ಎಂದು ತಿಳಿಸಿದರು.

`ಜೂನ್19ರಿಂದ 30ರವರೆಗೆ ಬದರಿನಾಥದಲ್ಲಿದ್ದು ಯಾತ್ರಾರ್ಥಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು ಒಂದು ಅಪೂರ್ವ ಅನುಭವ. 12 ದಿನಗಳ ಕಾಲ ಪ್ರತಿಕೂಲ ಹವಾಮಾನದಲ್ಲಿ ಯಾತ್ರಾರ್ಥಿಗಳನ್ನು ರಕ್ಷಿಸಿ ರಾಜ್ಯಕ್ಕೆ ಕಳಿಸುವ ಕಾರ್ಯ ಸವಾಲಿನಂತಿತ್ತು. ನನ್ನ ಮೇಲೆ ಭರವಸೆ ಇರಿಸಿ ಮುಖ್ಯಮಂತ್ರಿಯವರು ಈ ಕಾರ್ಯಕ್ಕೆ ನಿಯೋಜಿಸಿದ್ದರು. ಸವಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಬಗ್ಗೆ ಹೆಮ್ಮೆ ಇದೆ' ಎಂದು ಅವರು ಹೇಳಿದರು.

`ಯಾತ್ರಾರ್ಥಿಗಳನ್ನು ರಕ್ಷಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಿತ್ತು. ಯಾತ್ರಾರ್ಥಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ರಕ್ಷಣಾ ಇಲಾಖೆಯ ಬಾವಾ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಸಹಾಯ ಹೆಚ್ಚಿನದಾಗಿತ್ತು. ರಸ್ತೆಗಳೆಲ್ಲ ಕುಸಿದು ಹೋಗಿದ್ದ ಹಾಗೂ ಸದಾ ಮಳೆ ಬೀಳುತ್ತಿದ್ದ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯ ನಡೆಸಿ ಯಾತ್ರಾರ್ಥಿಗಳನ್ನು ರಕ್ಷಿಸಿದ್ದು ಹೆಮ್ಮೆ ಎನಿಸುತ್ತಿದೆ. ನನ್ನ ಜತೆಗಿದ್ದ 10 ಮಂದಿ ರಾಜ್ಯ ಸರ್ಕಾರಿ ಅಧಿಕಾರಿಗಳ ತಂಡವೂ ಹಗಲಿರುಳು ಕಷ್ಟಪಟ್ಟಿದೆ' ಎಂದರು.

ಬದರಿನಾಥದಲ್ಲಿ ಕಳೆದ 15 ದಿನಗಳ ಬಗ್ಗೆ ಮಾತನಾಡಿದ ರಾಯಚೂರಿನ ಯಾತ್ರಾರ್ಥಿ ಶ್ರೀನಿವಾಸಾಚಾರ್ಯ, `ಮಹಾಮಳೆಯಲ್ಲಿ ಕಳೆದ ದಿನಗಳು ಕಷ್ಟಕರವಾಗಿದ್ದವು. ನಾವು ಬದರಿನಾಥ ತಲುಪಿದ ದಿನ (ಜೂ.15) ಮಳೆ ಜೋರಾಗಿತ್ತು. ಮಾರನೆಯ ದಿನ ರಸ್ತೆಗಳೆಲ್ಲ ಕುಸಿದು ಹೋಗಿವೆ ಎಂಬ ಸುದ್ದಿ ತಿಳಿಯಿತು. ಬದರಿನಾಥದಿಂದ ಜೋಶಿಮಠಕ್ಕೆ ಹೋಗುವ ಮಾರ್ಗ ಗುಡ್ಡ ಕುಸಿದು ಮುಚ್ಚಿಹೋಗಿತ್ತು. ಹೀಗಾಗಿ 15 ದಿನಗಳ ಕಾಲ ಬದರಿನಾಥದ ಬಾಂಗ್ಡಾ ಧರ್ಮಶಾಲೆಯಲ್ಲಿ ಉಳಿದುಕೊಂಡಿದ್ದೆವು' ಎಂದು ಹೇಳಿದರು.

`ಬದರಿನಾಥದ ಪೇಜಾವರ ಮಠದಲ್ಲಿ ನಮಗೆ ಊಟದ ವ್ಯವಸ್ಥೆ ಮಾಡಿದ್ದರು. ಸಂಕಷ್ಟದಲ್ಲಿದ್ದ ಯಾತ್ರಾರ್ಥಿಗಳಿಗೆ ಮಠದಲ್ಲಿ ನಿತ್ಯ ಊಟ ನೀಡುತ್ತಿದ್ದರು. ರಕ್ಷಣಾ ತಂಡದ ಸದಸ್ಯರು ಹೆಲಿಕಾಪ್ಟರ್ ಮೂಲಕ ನಮ್ಮನ್ನು ರಕ್ಷಿಸದೇ ಹೋಗಿದ್ದರೆ ನಾವು ಬದುಕುವುದೇ ಕಷ್ಟವಾಗಿತ್ತು' ಎಂದು ವಿಜಾಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಜಯತೀರ್ಥ ಕಟ್ಟಿ ತಿಳಿಸಿದರು.

ನಂತರ ಯಾತ್ರಾರ್ಥಿಗಳ ತಂಡ ವಾಯುವಜ್ರ ಬಸ್ ಮೂಲಕ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾ ತಲುಪಿತು. ಕೊಲ್ಹಾರ ಗ್ರಾಮದ ಜಯತೀರ್ಥ ಕಟ್ಟಿ ಕುಟುಂಬದ ಏಳು ಮಂದಿ ನಗರದ ಕೆ.ಜಿ.ರಸ್ತೆಯ ಶಿಕ್ಷಕರ ಸದನದಲ್ಲಿ ಮಂಗಳವಾರ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಉಳಿದ ಯಾತ್ರಾರ್ಥಿಗಳು ತಂತಮ್ಮ ಊರು ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿದರು.

ಕಣ್ಮರೆಯಾದವರು
ರಾಜ್ಯದ 14 ಮಂದಿ ಯಾತ್ರಾರ್ಥಿಗಳು ಕಣ್ಮರೆಯಾಗಿದ್ದು ಅವರ ಹುಡುಕಾಟ ಮುಂದುವರೆದಿದೆ. ಮಂಗಳೂರಿನ ಒಬ್ಬ ಹಾಗೂ ಮಂಡ್ಯ ಜಿಲ್ಲೆ ಮದ್ದೂರಿನ ಒಂದೇ ಕುಟುಂಬದ 13 ಮಂದಿ ಯಾತ್ರಾರ್ಥಿಗಳ ಬಗ್ಗೆ ಈವರೆಗೆ ಯಾವುದೇ ಮಾಹಿತಿ ದೊರಕಿಲ್ಲ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ದೂರಿನ ಯಾತ್ರಾರ್ಥಿಗಳು: ಎಂ.ಜಿ.ನಾಗರಾಜ್ (66), ಸುಮಾ ನಾಗರಾಜ್ (55), ಎಂ.ಎನ್.ನಾಗಶ್ರೀ (33), ಅತುಲ್ ಚಂದ್ರ (10), ಹಮೀತ್ ಚಂದ್ರ (5), ಲತಾ ಸೀತಾರಾಮ್ (52), ಎಂ.ಜಿ.ಗುರುರಾಜ (58), ಉಮಾ ಗುರುರಾಜ (51),   ಎಸ್.ಪಿ.ವಸಂತ ಕುಮಾರ್ (59), ಗೀತಾ (53), ಎಂ.ಜಿ. ರಮೇಶ್ (49), ಲಕ್ಷ್ಮೀ (40), ಅನಿರುದ್ಧ (11) ಹಾಗೂ ಮಂಗಳೂರಿನ  ರವಿ ಕಿರಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.