ADVERTISEMENT

ಬೆಲೆ ಏರಿಕೆಯಿಂದ ಬಡವರು ಕಂಗಾಲು: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಬೆಂಗಳೂರು: ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ನೀತಿಯಿಂದಾಗಿ ದೇಶದ ಬಡವರು ಕಂಗಾಲಾಗಿದ್ದಾರೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯನ್ನು ವಿರೋಧಿಸಿ ಜೆಡಿಎಸ್, ಸಿಪಿಐ, ಸಿಪಿಎಂ ಮತ್ತು ಫಾರ್ವರ್ಡ್ ಬ್ಲಾಕ್ ಪಕ್ಷಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಹೋರಾಟ ಅಧಿಕಾರಕ್ಕಾಗಿ ಅಲ್ಲ’ ಎಂದರು.

ರಾಜ್ಯ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ ದೇವೇಗೌಡರು, ‘ಯಾವ ಮುಖ್ಯಮಂತ್ರಿ ಕೂಡ ಇಷ್ಟೊಂದು ಕೆಟ್ಟ ಕೆಲಸ ಮಾಡಿರಲಿಲ್ಲ. ಈ ರಾಜ್ಯ ಇಷ್ಟೊಂದು ಕೆಡುತ್ತೆ ಅಂತ ಎಂದೂ ಭಾವಿಸಿರಲಿಲ್ಲ’ ಎಂದರು.

‘ಬಿಜೆಪಿಯ ಹೈಕಮಾಂಡ್ ನಿರ್ಜೀವವಾಗಿದೆ. ಬಿಜೆಪಿ ಈಗ ರಾಷ್ಟ್ರೀಯ ಪಕ್ಷವೂ ಅಲ್ಲ, ಅದು ಈಗ ಯಡಿಯೂರಪ್ಪ ಪಕ್ಷ ಆಗಿದೆ. ಆ ಪಕ್ಷದ ನಾಯಕರು ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಅಥವಾ ಅಡ್ವಾಣಿ ಅಲ್ಲ. ನನ್ನಿಂದಲೇ ಈ ಪಕ್ಷ ಅಂತ ಭಾವಿಸಿರುವವರೇ ಅದರ ಈಗಿನ ನಾಯಕರು’ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸಿಪಿಎಂನ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯ ಜಿ.ವಿ. ಶ್ರೀರಾಮ ರೆಡ್ಡಿ ಮಾತನಾಡಿ, ‘ಕೇಂದ್ರ ಸರ್ಕಾರದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯನ್ನು ಖಂಡಿಸಿ ಯುಪಿಎ ಮತ್ತು ಎನ್‌ಡಿಎ ಮೈತ್ರಿಕೂಟದಲ್ಲಿ ಇಲ್ಲದ ಪಕ್ಷಗಳು ರಾಷ್ಟ್ರವ್ಯಾಪಿ ಹೋರಾಟ ನಡೆಸಲಿವೆ. ಅದರ ಭಾಗವಾಗಿ ಈ ಪ್ರತಿಭಟನೆ’ ಎಂದರು.

‘ಕಳೆದ ಒಂದೂವರೆ ವರ್ಷದಿಂದ ಅಗತ್ಯ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬೆಲೆ ಏರಿಕೆ ಕುರಿತು ಪ್ರಧಾನ ಮಂತ್ರಿಗಳು ಕೃಷಿ ಸಚಿವ ಶರದ್ ಪವಾರ್ ಬಳಿ ವಿವರಣೆ ಕೇಳುತ್ತಾರೆ. ಬೆಲೆ ಏರಿಕೆಯೆಂಬುದು ಒಂದು ಇಲಾಖೆಗೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಗಳೇ ಬೆಲೆ ಏರಿಕೆಗೆ ಕಾರಣ’ ಎಂದು ಆರೋಪಿಸಿದರು.

ಮಾಜಿ ಸಂಸದ ಬಸವರಾಜ ಪಾಟೀಲ್ ಯತ್ನಾಳ್ ಮಾತನಾಡಿ, ‘ಈಜಿಪ್ಟ್‌ನಲ್ಲಿ ನಡೆದ ಕ್ರಾಂತಿಯ ಮಾದರಿಯಲ್ಲಿ ಭಾರತದಲ್ಲಿ ದೇವೇಗೌಡರ ನೇತೃತ್ವದಲ್ಲಿ ಕ್ರಾಂತಿ ಆಗಬೇಕಾದ ಅವಶ್ಯಕತೆ ಇದೆ’ ಎಂದರು.

ನಗರದ ಆನಂದರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾದ ಪ್ರತಿಭಟನಾ ರ್ಯಾಲಿ, ಫ್ರೀಡಂ ಪಾರ್ಕ್‌ವರೆಗೆ ಸಾಗಿತು. ರಾಜಭವನದ ಎದುರು ಧರಣಿ ನಡೆಸಬೇಕು ಎಂಬ ಉದ್ದೇಶ ಪ್ರತಿಭಟನಾಕಾರರಿಗೆ ಇತ್ತು. ಆದರೆ ಸ್ವಾತಂತ್ರ್ಯ ಉದ್ಯಾನಕ್ಕಿಂತ ಮುಂದಕ್ಕೆ ರ್ಯಾಲಿಯನ್ನು ಕೊಂಡೊಯ್ಯಲು ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದೇವೇಗೌಡ, ಎಸ್. ಬಂಗಾರಪ್ಪ, ಶ್ರೀರಾಮ ರೆಡ್ಡಿ, ಜಿ.ಎನ್. ನಾಗರಾಜ್, ವಿ.ಜೆ.ಕೆ. ನಾಯರ್ ಮತ್ತಿತರರನ್ನು ಪೊಲೀಸರು ಸ್ವಾತಂತ್ರ್ಯ ಉದ್ಯಾನದಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಿದರು.

ರಾಜ್ಯ ಪ್ರವಾಸ: ಇದೇ 15ರಿಂದ ರಾಜ್ಯ ಪ್ರವಾಸ ಮಾಡಿ ಪಕ್ಷದ ಸಂಘಟನೆ ಮಾಡುವುದಾಗಿ ದೇವೇಗೌಡ ಅವರು ಈ ಸಂದರ್ಭದಲ್ಲಿ ತಿಳಿಸಿದರು.

‘ನಾನು ಮತ್ತು ಬಂಗಾರಪ್ಪನವರು ಸೇರಿದಂತೆ ಪಕ್ಷದ ಮುಖಂಡರು ತಂಡಗಳಲ್ಲಿ ತೆರಳಿ ಪಕ್ಷದ ಸಂಘಟನೆ ಮಾಡುತ್ತೇವೆ. ಪಕ್ಷ ನಿಷ್ಠರನ್ನು ಉಳಿಸಿಕೊಂಡು, ಅಧಿಕಾರಕ್ಕಾಗಿ ಮಾತ್ರ ಪಕ್ಷದಲ್ಲಿರುವವರಿಗೆ ನಿರ್ಗಮನ ದ್ವಾರ ತೋರಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.