ADVERTISEMENT

ಬೈಕ್‌ಗೆ ಬಸ್ ಡಿಕ್ಕಿ: ನಾಲ್ವರ ದಾರುಣ ಸಾವು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ಸಾಲಿಗ್ರಾಮ (ಮೈಸೂರು ಜಿಲ್ಲೆ): ಹಸುಗೂಸಿಗೆ ಚಿಕಿತ್ಸೆ ಕೊಡಿಸಲು ಅಣ್ಣ, ತಂಗಿ ಬೈಕಿನಲ್ಲಿ ಆಸ್ಪತ್ರೆಗೆ ಹೋಗುತ್ತಿದಾಗ ಬೈಕ್‌ನ ಹಿಂಬದಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಸುಗೂಸು ಸೇರಿದಂತೆ ನಾಲ್ವರು ಮರಣ ಹೊಂದಿದ ದುರ್ಘಟನೆ ಕೆ.ಆರ್.ನಗರ ತಾಲ್ಲೂಕು ಚುಂಚನಕಟ್ಟೆ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಚುಂಚನಕಟ್ಟೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ಮಹದೇವ (40), ಈತನ ತಂಗಿ ಮಂಜುಳ (31), ಈಕೆಯ ಗಂಡು ಮಗು ಧನು (5) ಮತ್ತು 1 ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದಾರೆ.

ತಂಗಿಯ ಮಗುವಿಗೆ ಕೆ.ಆರ್.ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಮಹದೇವ ಬೈಕ್‌ನಲ್ಲಿ ತಂಗಿ ಮಂಜುಳ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಚುಂಚನಕಟ್ಟೆಯ ಹೊರವ ವಲಯದಲ್ಲಿ ಇರುವ ಚಾಮರಾಜ ನಾಲೆಯ ಇಳಿಜಾರಿನಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆಯಿತು. ಅಪಘಾತದಿಂದ ಕೆರಳಿದ ಜನರು ಸ್ಥಳದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ಗೆ ಕಲ್ಲು ತೂರಿ ಗಾಜುಗಳನ್ನು ಪುಡಿ ಪುಡಿ ಮಾಡಿದರು.

ಪರಿಸ್ಥಿತಿ  ಕೈಮೀರಿ ಹೋಗುವಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕೆ.ಆರ್.ನಗರ ಠಾಣೆಯ ಪಿಎಸ್‌ಐ ಅನಿಲ್‌ಕುಮಾರ್ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಕುಮಾರ್ ಉದ್ರಿಕ್ತ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಶಾಸಕ ಸಾ.ರಾ.ಮಹೇಶ್ ಅವರು ಜನರನ್ನು ಸಮಾಧಾನ ಪಡಿಸಿ ‘ಖಾಸಗಿ ಬಸ್ ಮಠಕ್ಕೆ  ಸೇರಿದ್ದು ಸ್ವಾಮಿಜಿ ಅವರ ಪರವಾಗಿ ಸಾವನ್ನಪ್ಪಿರುವ ಮಹದೇವ ಮತ್ತು ಮಂಜುಳ ಅವರಿಗೆ ತಲಾ ರೂ.1 ಲಕ್ಷ ಹಾಗೂ ಮುದ್ದು  ಕಂದಮ್ಮಗಳಿಗೆ ತಲಾ ರೂ. 50 ಸಾವಿರ ಪರಿಹಾರವನ್ನು ನಾನು ನೀಡುತ್ತೇನೆ’ ಎಂದು ಭರವಸೆ ನೀಡಿದರು. ಮೃತಪಟ್ಟವರ ಕುಟುಂಬಗಳಿಗೆ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಹಾಗೂ ಶಾಸಕ ಸಾ.ರಾ.ಮಹೇಶ್, ಬಿಜೆಪಿ ಮುಖಂಡ ದೊಡ್ಡ ಸ್ವಾಮಿಗೌಡ ಅವರು ವೈಯಕ್ತಿಕವಾಗಿ ಪರಿಹಾರವನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.