ADVERTISEMENT

ಭೂ ಸ್ವಾಧೀನ ವಿರೋಧಿಸಿ ಹೋರಾಟಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 19:30 IST
Last Updated 25 ಜೂನ್ 2011, 19:30 IST
ಭೂ ಸ್ವಾಧೀನ ವಿರೋಧಿಸಿ ಹೋರಾಟಕ್ಕೆ ಸಜ್ಜು
ಭೂ ಸ್ವಾಧೀನ ವಿರೋಧಿಸಿ ಹೋರಾಟಕ್ಕೆ ಸಜ್ಜು   

ಗದಗ: ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾದ ಮುಂಡರಗಿ ತಾಲ್ಲೂಕಿನಲ್ಲಿ ದಕ್ಷಿಣ ಕೊರಿಯಾ ಮೂಲದ ಪೊಹಾಂಗ್ ಸ್ಟೀಲ್ ಕಂಪೆನಿ (ಪೋಸ್ಕೊ) ಸುಮಾರು 32,000 ಕೋಟಿ ರೂಪಾಯಿ ವೆಚ್ಚದಲ್ಲಿ  60 ಲಕ್ಷ ಟನ್ ಸಾಮರ್ಥ್ಯದ ಉಕ್ಕು ತಯಾರಿಕಾ ಕಾರ್ಖಾನೆ ಸ್ಥಾಪಿಸಲಿದೆ. ಇದಕ್ಕೆ ಅಗತ್ಯವಾದ 3300 ಎಕರೆಯಷ್ಟು ಭೂಮಿಗಾಗಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ.

ಅದರಂತೆ ರಾಜ್ಯ ಸರ್ಕಾರವು  ಭೂ ಸ್ವಾಧೀನಕ್ಕಾಗಿ ಕೆಐಎಡಿಬಿ ಮೂಲಕ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಭೂಮಿ ಕಳೆದುಕೊಳ್ಳಲಿರುವ ರೈತರು ಇದರ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ರಾಜ್ಯ ಸರ್ಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ಅಡಿ ಕಳೆದ ಮಾರ್ಚ್ 28ರಂದು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಪ್ರಾಥಮಿಕ ಹಂತದಲ್ಲಿ ಮುಂಡರಗಿ ತಾಲ್ಲೂಕಿನ ಸುಮಾರು 5,632 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದೆ.

ಆದೇಶದ ಅನ್ವಯ ತಾಲ್ಲೂಕಿನ ಹಳ್ಳಿಗುಡಿಯ 3300 ಎಕರೆ, ಶಿರೂರಿನ 1600 ಎಕರೆ ಹಾಗೂ ಮೇವುಂಡಿ ಗ್ರಾಮದ 732 ಎಕರೆ  ಜಮೀನು ಸ್ವಾಧೀನವಾಗಲಿದೆ. ಈ ಕುರಿತು ಸಂಬಂಧಿಸಿದ ಗ್ರಾಮಗಳ ರೈತರಿಗೆ ಕಳೆದ ಏಪ್ರಿಲ್ 15ರಂದು ಧಾರವಾಡದ ಭೂಸ್ವಾಧೀನ ಅಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿಯಾಗಿದೆ. ಎರಡನೇ ಹಂತದ ನೋಟಿಸ್ ಇನ್ನೊಂದು ವಾರದಲ್ಲಿ ಜಾರಿಯಾಗುವ ಸಾಧ್ಯತೆ ಇದೆ.
ಸರ್ಕಾರದ ನಿರ್ಧಾರದಿಂದಾಗಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಲಿವೆ. ಈ ಕಂಪೆನಿಗೆ ಅಗತ್ಯವಾದ ಜಮೀನನ್ನು ಹಳ್ಳಿಗುಡಿ ಗ್ರಾಮವೊಂದರಲ್ಲೇ ಪಡೆಯಲಾಗುತ್ತಿದೆ.

ಸುಮಾರು 4000 ಜನಸಂಖ್ಯೆ ಹೊಂದಿರುವ ಹಳ್ಳಿಗುಡಿಯ ಜನರಿಗೆ 7-8 ಸಾವಿರ ಎಕರೆ ಭೂಮಿ ಇದೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಜಮೀನು ಸ್ವಾಧೀನಕ್ಕೆ ನೋಟಿಸ್ ಜಾರಿಯಾಗಿದೆ. ಆದರೆ ಇಲ್ಲಿನ ಜನರಿಗೆ ತಮ್ಮ ಫಲವತ್ತಾದ ಜಮೀನು ಕಳೆದುಕೊಳ್ಳುವುದು ಇಷ್ಟವಿಲ್ಲ.

`ಕೃಷಿ ನಮ್ಮ ಬದುಕು. ಇದನ್ನೇ ನಂಬಿಕೊಂಡಿದ್ದೇವೆ. ಹುಲಿಗುಡ್ಡ ಯೋಜನೆಯಿಂದ ನೀರು ಹರಿದು ನಮ್ಮ ಜಮೀನು ಹಸನಾಗಬಹುದು ಎಂದು ನಂಬಿದ್ದೆವು. ಈಗ ಜಮೀನು ಕಿತ್ತುಕೊಳ್ಳಲು ಸರ್ಕಾರ ಹುನ್ನಾರ ನಡೆಸಿದೆ. ಸುದ್ದಿ ತಿಳಿದದ್ದೇ ಮಧ್ಯವರ್ತಿಗಳು ಗ್ರಾಮಕ್ಕೆ ಬಂದು ಜಮೀನು ಕೊಡುವಂತೆ ಪೀಡಿಸುತ್ತಿದ್ದಾರೆ.

ಭೂ ಸ್ವಾಧೀನ ಕೈಬಿಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಭೂಮಿ ಕೊಡಲು ಯಾವುದೇ ಕಾರಣಕ್ಕೂ ನಾವು ಸಿದ್ಧರಿಲ್ಲ. ಅಗತ್ಯಬಿದ್ದರೆ ಧರಣಿ, ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಪ್ರಾಣ ಬೇಕಾದರೂ ಕೊಟ್ಟೆವು. ಭೂಮಿ ಕೊಡೆವು~ ಎನ್ನುತ್ತಾರೆ ಹಳ್ಳಿಗುಡಿ ಗ್ರಾಮದ ನಿವಾಸಿಗಳಾದ ಸಿದ್ದಪ್ಪ ಮುದ್ಲಾಪುರ, ಎಸ್. ಎಸ್. ಬೇವೂರ, ಎಂ.ಸಿ. ಪುರದ ಹಾಗೂ ಗ್ರಾಮಸ್ಥರು.

ಇನ್ನೊಂದೆಡೆ ಈ ದೈತ್ಯ ಕಂಪೆನಿಗೆ ಬೇಕಾದ ನೀರಿನಿಂದ ಗದಗ ಹಾಗೂ ನೆರೆಯ ಜಿಲ್ಲೆಗಳ ಕೃಷಿಗೆ ನೀರು ಪೂರೈಕೆಗೂ ಅಡಚಣೆಯಾಗುವ ಸಂಭವವಿದೆ. ಇದು ರೈತರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.