ADVERTISEMENT

ಮಂಗಳೂರಿನಲ್ಲಿ ತೃತೀಯ ಲಿಂಗಿಗಳ ಮೊದಲ ಮತದಾನ

​ಪ್ರಜಾವಾಣಿ ವಾರ್ತೆ
Published 12 ಮೇ 2018, 11:14 IST
Last Updated 12 ಮೇ 2018, 11:14 IST
ಮಂಗಳೂರಿನ ಮಿಲಾಗ್ರಿಸ್‌ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದ ತೃತೀಯ ಲಿಂಗಿಗಳು
ಮಂಗಳೂರಿನ ಮಿಲಾಗ್ರಿಸ್‌ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದ ತೃತೀಯ ಲಿಂಗಿಗಳು   

ಮಂಗಳೂರು: ತೃತೀಯ ಲಿಂಗಿಗಳಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಈ ಸಮುದಾಯದ 41 ಸದಸ್ಯರು ಜಿಲ್ಲೆಯಲ್ಲಿ ಶನಿವಾರ ತಮ್ಮ ಹಕ್ಕು ಚಲಾಯಿಸಿದರು.

ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಿಲಾಗ್ರಿಸ್‌ ಕಾಲೇಜಿನ ಮತಗಟ್ಟೆಯಲ್ಲಿ ಗುರುತಿನ ಚೀಟಿಯೊಂದಿಗೆ ಬೆಳಿಗ್ಗೆ ಸರತಿ ಸಾಲಿನಲ್ಲಿ ನಿಂತು ತೃತೀಯ ಲಿಂಗಿಗಳು ಮತದಾನ ಮಾಡಿದರು. ಮತದಾನ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಅವರ ಮುಖದಲ್ಲಿ ಸಂತೋಷ ಮತ್ತು ಹುಮ್ಮಸ್ಸು ಎದ್ದು ಕಾಣುತ್ತಿತ್ತು.

ಬೆಳ್ತಂಗಡಿ ಕ್ಷೇತ್ರದಲ್ಲಿ 1, ಮೂಡುಬಿದಿರೆಯಲ್ಲಿ 13, ಮಂಗಳೂರು ನಗರ ಉತ್ತರದಲ್ಲಿ 8, ಮಂಗಳೂರು ನಗರ ದಕ್ಷಿಣದಲ್ಲಿ 56, ಮಂಗಳೂರು ಕ್ಷೇತ್ರದಲ್ಲಿ 13, ಬಂಟ್ವಾಳದಲ್ಲಿ 6, ಪುತ್ತೂರಿನಲ್ಲಿ 3 ಮಂಗಳಮುಖಿಯರು ಮತದಾನಕ್ಕೆ ಅರ್ಹರಾಗಿದ್ದರು.

ADVERTISEMENT

‘ಇದೇ ಪ್ರಥಮ ಬಾರಿಗೆ ನಮಗೆ ಮತದಾನದ ಹಕ್ಕು ನೀಡಿರುವುದು ಸಂತಸ ತಂದಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಸಮುದಾಯದ 41 ಜನರು ಮತದಾನ ಮಾಡಿದ್ದೇವೆ. ನಮ್ಮನ್ನು ಮನುಷ್ಯರಂತೆ ಪರಿಗಣಿಸಿದ್ದಕ್ಕೆ ಚುನಾವಣಾ ಆಯೋಗಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಸಂಜನಾ ಮತ ಹಾಕಿದ ಬಳಿಕ ಅನಿಸಿಕೆ ತಿಳಿಸಿದರು.

ಸಸಿನೆಟ್ಟು ಮೊದಲ ಮತದಾನ: ಮಂಗಳೂರು ವಿಧಾನಸಭಾ ಕ್ಷೇತ್ರದ ತೊಕ್ಕೊಟ್ಟು ಸಮೀಪದ ಕಲ್ಲಾಪು ಪಟ್ಲದ 19 ವರ್ಷದ ಯುವಕ ಯೂಸುಫ್ ಸುನೈಫ್, ಗಿಡ ನೆಡುವ ಮೂಲಕ ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ. ಮಾತ್ರವಲ್ಲ ಮೊದಲ ಮತದಾನದ ಸವಿನೆನಪಿಗಾಗಿ ನೆಟ್ಟಿರುವ ಗಿಡವನ್ನು ಮರವಾಗುವ ತನಕ ಪೋಷಿಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದ್ದಾರೆ.

ಮತ ಚಲಾಯಿಸಿದ 100ರ ವೃದ್ಧೆಯರು: ನಗರದ ಪಾಂಡೇಶ್ವರದಲ್ಲಿ 100 ವಯಸ್ಸಿನ ವೃದ್ಧೆ ಕೆ. ಕಮಲಬಾಯಿ ಮತ ಚಲಾವಣೆ ಮಾಡುವ ಮೂಲಕ ಮಾದರಿಯಾದರು. ಸ್ಟೇಟ್‌ಬ್ಯಾಂಕ್‌ ಸಮೀಪದ ಮತಗಟ್ಟೆಯಲ್ಲಿ ರೊಸಾರಿಯೊ ನಿವಾಸಿ ಗ್ಲೇಡಿಯಸ್‌ ಡಿಸೋಜ (100 ವರ್ಷ) ಮತ ಚಲಾಯಿಸಿದರು.

ಎಂಡೊ ಪೀಡಿತರಿಂದ ಮತದಾನ: ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಮತಗಟ್ಟೆಯಲ್ಲಿ 11 ಮಂದಿ ಎಂಡೋಸಲ್ಫಾನ್ ಪೀಡಿತರು ಉತ್ಸಾಹದಿಂದ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.