ADVERTISEMENT

ಮಂಗಳೂರಿನ ನಂಟು ಕಡಿದುಕೊಂಡಿದ್ದ ಜಾರ್ಜ್ ಕುಟುಂಬ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 7:46 IST
Last Updated 29 ಜನವರಿ 2019, 7:46 IST
1967ರಲ್ಲಿ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಕಚೇರಿಯಲ್ಲಿ ಜಾರ್ಜ್ ಫರ್ನಾಂಡಿಸ್‌– ಚಿತ್ರ:ಟಿ.ಎಲ್‌.ರಾಮಸ್ವಾಮಿ
1967ರಲ್ಲಿ ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ ಕಚೇರಿಯಲ್ಲಿ ಜಾರ್ಜ್ ಫರ್ನಾಂಡಿಸ್‌– ಚಿತ್ರ:ಟಿ.ಎಲ್‌.ರಾಮಸ್ವಾಮಿ   

ಮಂಗಳೂರು: ಹಿರಿಯ ಸಮಾಜವಾದಿ ನೇತಾರ ಜಾರ್ಜ್‌ ಫರ್ನಾಂಡಿಸ್‌ ಹುಟ್ಟಿದ್ದು ಮಂಗಳೂರಿನಲ್ಲಿ. ಬಾಲ್ಯದ ದಿನಗಳನ್ನು ಇಲ್ಲಿ ಕಳೆದು, ಯೌವ್ವನದಲ್ಲಿ ಬೆಂಗಳೂರು ಸೇರಿದ್ದ ಅವರು, ಕೆಲವು ದಶಕಗಳಿಂದ ಕರಾವಳಿಯ ನಂಟನ್ನು ಬಹುತೇಕ ಕಡಿದುಕೊಂಡಿದ್ದರು.

1930ರ ಜೂನ್ 3ರಂದು ಜಾರ್ಜ್‌ ಬಿಜೈನಲ್ಲಿ ಜನಿಸಿದ್ದರು. ಜಾನ್‌ ಜೋಸೆಫ್‌ ಫರ್ನಾಂಡಿಸ್‌ ಮತ್ತು ಅಲೀಸ್‌ ಮಾರ್ತಾ ಫರ್ನಾಂಡಿಸ್‌ ದಂಪತಿಯ ಆರು ಮಕ್ಕಳ ಪೈಕಿ ಹಿರಿಯ ಮಗ. ಬಿಜೈನಲ್ಲಿದ್ದ ಅವರ ಪೂರ್ವಜರ ಮನೆ ಕೂಡ ಈಗ ಇಲ್ಲ. ಆ ನಿವೇಶನ ಮೂವರು ಮಾಲೀಕರ ಕೈ ಬದಲಾಗಿ ಬೃಹತ್ತಾದ ವಸತಿ ಸಮುಚ್ಛಯವೊಂದು ಅಲ್ಲಿ ಎದ್ದು ನಿಂತಿದೆ.

ಜಾರ್ಜ್‌ ಫರ್ನಾಂಡಿಸ್‌ ಐದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ಶಿಕ್ಷಣವನ್ನು ನಗರದ ಸೇಂಟ್‌ ಅಲೋಶಿಯಸ್‌ ಶಿಕ್ಷಣ ಸಂಸ್ಥೆಯನ್ನು ಪಡೆದಿದ್ದರು. ಆ ಬಳಿಕ ಅವರನ್ನು ಧಾರ್ಮಿಕ ಶಿಕ್ಷಣ ಪಡೆಯುವುದಕ್ಕಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಹಿಂದಿರುಗಿ ಕೆಲಕಾಲ ಮಂಗಳೂರಿನ ಸಾರಿಗೆ ಮತ್ತು ಹೋಟೆಲ್‌ ಉದ್ದಿಮೆಗಳ ನೌಕರರನ್ನು ಸಂಘಟಿಸಿ ಶೋಷಣೆಯ ವಿರುದ್ಧ ಹೋರಾಟ ಆರಂಭಿಸಿದ್ದರು ಎಂಬ ಮಾಹಿತಿಯಷ್ಟೇ ಜನರ ನೆನಪಿನಲ್ಲಿ ಉಳಿದಿದೆ.

ADVERTISEMENT

ಇವನ್ನೂ ಓದಿ

1950ರ ದಶಕದಿಂದ ಈಚೆಗೆ ಸುದೀರ್ಘ ಕಾಲ ಕಾರ್ಮಿಕ ಹೋರಾಟಗಳನ್ನು ಮುನ್ನಡೆಸಿದ್ದ ಜಾರ್ಜ್‌, ಮುಂಬೈ ಮಹಾನಗರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ಆ ಬಳಿಕ ಬಿಹಾರ, ಪಶ್ಚಿಮ ಬಂಗಾಳದವರೆಗೆ ಅದನ್ನು ವಿಸ್ತರಿಸಿಕೊಂಡಿದ್ದರು. ಸುದೀರ್ಘ ಕಾಲ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರೂ, ಅವರು ಮಂಗಳೂರಿನ ನೆಲದಲ್ಲಿ ಒಮ್ಮೆಯೂ ಚುನಾವಣೆ ಎದುರಿಸಿದವರಲ್ಲ. ಮುಂಬೈ ಮತ್ತು ಬಿಹಾರದಿಂದಲೇ ಆಯ್ಕೆಯಾಗಿದ್ದರು.

ಜಾರ್ಜ್‌ ಫರ್ನಾಂಡಿಸ್‌ ಅವರು ಕರ್ನಾಟಕದ ಹೊರಗಡೆ ಹೆಚ್ಚು ಸಕ್ರಿಯವಾಗಿದ್ದವರು. ಮಂಗಳೂರಿನಲ್ಲಿ ಹುಟ್ಟಿದರೂ, ಅವರ ಕಾರ್ಯಕ್ಷೇತ್ರ ಮುಂಬೈ, ಬಿಹಾರವೇ ಆಗಿತ್ತು. ಸಮಾಜವಾದಿ ಚಳವಳಿಯಿಂದ ಅವರು ಬಂದವರು. ಆದರೆ, ಮಂಗಳೂರಿನಲ್ಲಿ ಅವರ ಒಡನಾಡಿಗಳಾಗಿದ್ದವರು ಈಗ ಯಾರೂ ಉಳಿದಂತೆ ಕಾಣುತ್ತಿಲ್ಲ. ಇಲ್ಲಿಯ ನಂಟನ್ನು ಅವರು ಬಹಳ ಹಿಂದೆಯೇ ಕಡಿದುಕೊಂಡಿದ್ದರು ಎಂಬುದು ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಸಿಪಿಎಂ ಹಿರಿಯ ಮುಖಂಡ ವಾಸುದೇವ ಉಚ್ಚಿಲ ಅವರ ಮಾತು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.