ADVERTISEMENT

ಮಂಗಳೂರು ಘಟನೆ: ಯಾರವನು ನೀಲಿ ಅಂಗಿ ವ್ಯಕ್ತಿ?

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಬೆಂಗಳೂರು: ಮಂಗಳೂರಿನ `ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇದಲ್ಲಿ ಹುಟ್ಟುಹಬ್ಬದ ನಿಮಿತ್ತ ಶನಿವಾರ `ಪಾರ್ಟಿ~ ನಡೆಸುತ್ತಿದ್ದ ಯುವಕ- ಯುವತಿಯರ ಮೇಲೆ ಹಲ್ಲೆ ನಡೆಸಿದ ನೀಲಿ ಬಣ್ಣದ ಅಂಗಿ ಧರಿಸಿದ್ದ ವ್ಯಕ್ತಿ ಯಾರು ಎಂದು  ಸರ್ಕಾರವನ್ನು ಹೈಕೋರ್ಟ್ ಬುಧವಾರ ಕೇಳಿದೆ.

`ಈ ವ್ಯಕ್ತಿ ಯಾರು. ಘಟನಾ ಸ್ಥಳಕ್ಕೆ ಆತ ಬಂದದ್ದು ಏಕೆ. ಆತನ ವಿರುದ್ಧ ಏನಾದರೂ ಕ್ರಮ ತೆಗೆದುಕೊಳ್ಳಲಾಗಿದೆಯೇ~ ಎಂಬ ಮಾಹಿತಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರದಿಂದ ಬಯಸಿದೆ.

ಈ ವ್ಯಕ್ತಿ ಸೇರಿದಂತೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ತೆಗೆದುಕೊಂಡಿರುವ ಕ್ರಮ ಕುರಿತು ಏಳು ದಿನಗಳ ಒಳಗೆ ಮಾಹಿತಿ ನೀಡುವಂತೆಯೂ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. `ಈ ಘಟನೆಯಿಂದ ಎಲ್ಲರೂ ತಲೆತಗ್ಗಿಸುವಂತಾಗಿದೆ~ ಎಂದೂ ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಹಲ್ಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸುವಂತೆ ಕೋರಿ ವಕೀಲ ಎಸ್.ವಾಸುದೇವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಈ ಪೀಠ ನಡೆಸುತ್ತಿದೆ.

ವಕೀಲರ ವಾದ: `ಘಟನೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಲ್ಲಿ ವೀಕ್ಷಿಸಿದಾಗ ನನ್ನ ರಕ್ತ ಕುದಿಯತೊಡಗಿತು. ಇಂತಹ ಹೇಯ ಕೃತ್ಯ ಕರ್ನಾಟಕದಲ್ಲಿ ನಡೆದಿರುವುದು ದುರದೃಷ್ಟಕರ. ಪೊಲೀಸರು ಸ್ಥಳದಲ್ಲಿಯೇ ಇದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಮೂಕಪ್ರೇಕ್ಷಕರಾಗಿದ್ದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು~ ಎಂದು ವಾಸುದೇವ್ ಅವರು ವಾದಿಸಿದರು. ಆಗ ನ್ಯಾ.ಸೇನ್, `ಇದು ಎಲ್ಲರೂ ತಲೆತಗ್ಗಿಸುವ ವಿಷಯ~ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.