ADVERTISEMENT

ಮಂಗಳೂರು ಹೋಂ ಸ್ಟೇ ಪ್ರಕರಣ: ಪೊಲೀಸ್ ನಿರ್ಲಕ್ಷ್ಯವೇ ದಾಳಿಗೆ ಕಾರಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ಮಂಗಳೂರು: ಅಪರಿಚಿತರು ಸೇರಿಕೊಂಡು ಮುಗ್ಧ ಯುವತಿಯರನ್ನು ಪಾರ್ಟಿ ಹೆಸರಲ್ಲಿ ದಿಕ್ಕು ತಪ್ಪಿಸುವ ಪ್ರಯತ್ನ ಈ ಭಾಗದಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಪೊಲೀಸರು ಮುನ್ನೆಚ್ಚರಿಕೆ ವಹಿಸುತ್ತಿದ್ದರೆ ಇಂತಹ ಘಟನೆ ತಡೆಯಬಹುದಿತ್ತು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಹೇಳಿದ್ದಾರೆ.

ಪಡೀಲ್‌ನ `ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇನಲ್ಲಿ ಕಳೆದ ಶನಿವಾರ ಬರ್ತ್‌ಡೇ ಪಾರ್ಟಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯ ಹಿನ್ನೆಲೆಯಲ್ಲಿ ಬುಧವಾರ ನಗರಕ್ಕೆ ಬಂದಿದ್ದ  ಮಂಜುಳಾ ಅವರು ಇಬ್ಬರು ಯುವತಿಯರು, ಅವರ ಪೋಷಕರದೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ತಾವು ಕಂಡುಕೊಂಡು ಅಂಶಗಳನ್ನು  ಗುರುವಾರ ಬೆಳಿಗ್ಗೆ ಪತ್ರಕರ್ತರಿಗೆ  ವಿವರಿಸಿದರು. ಜನವಸತಿ ಪ್ರದೇಶಗಳಿಂದ ದೂರದಲ್ಲಿ, ಅಕ್ರಮವಾಗಿ ಮಾಡಿಕೊಂಡ ಹೋಂ ಸ್ಟೇಗಳಲ್ಲಿ ಪಾರ್ಟಿಗಳನ್ನು ನಡೆಸುವವರ ಬಗ್ಗೆ ಮಂಗಳೂರು ಪೊಲೀಸರು ನಿರ್ಲಕ್ಷ್ಯ ತೋರ್ದ್ದಿದಾರೆ ಎಂದರು.

`ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ತಮ್ಮ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ತನ್ನ ಪಿಯುಸಿ ಸ್ನೇಹಿತೆಯರನ್ನು ಆಹ್ವಾನಿಸಿದ್ದರು. ಉಳಿದ ಯುವತಿಯರು ಕಾಲೇಜು ಯೂನಿಫಾರಂನಲ್ಲೇ ಹೋಂ ಸ್ಟೇಗೆ ಬಂದಿದ್ದರು. ಅಲ್ಲಿ ಅವರಿಗಾಗಿ ಪಾರ್ಟಿ ಡ್ರೆಸ್ ಸಿದ್ಧಪಡಿಸಲಾಗಿತ್ತು. ಅವರೆಲ್ಲ ಯೂನಿಫಾರಂ ಕಳಚಿ ಪಾರ್ಟಿ ಡ್ರೆಸ್ ಧರಿಸಿದ್ದರು.  ಪಾರ್ಟಿ ಏರ್ಪಾಟು ಮಾಡಿದ್ದ ವಿಜಯ್ ಕುಮಾರ್ ಮತ್ತು ಗುರುದತ್ ಕಾಮತ್ ಅವರ ಪರಿಚಯ ಇತರ ಮೂವರು ಯುವತಿಯರಿಗೆ ಇರಲಿಲ್ಲ. ಅಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಇದ್ದುದು ಬಿಟ್ಟರೆ ಉಳಿದವರೆಲ್ಲ ವಿಜಯ್ ಮತ್ತು ಗುರುದತ್ ಅವರ ಮಿತ್ರರಾಗಿದ್ದರು. ಹೀಗಾಗಿ ಪಾರ್ಟಿಯಲ್ಲಿ ಇದ್ದವರೆಲ್ಲ ಒಬ್ಬರಿಗೊಬ್ಬರು ತಿಳಿದವರು ಎಂಬುದು ಸುಳ್ಳು~ ಎಂದು ಅವರು ಹೇಳಿದರು.

ಸರ್ಕಾರಕ್ಕೆ ಶಿಫಾರಸು
`ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ, ರಾಜ್ಯದ ಇತರ ಜಿಲ್ಲೆಗಳಲ್ಲೂ ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸುವ ಸಲುವಾಗಿ ಗೂಂಡಾಗಳನ್ನು, ರೌಡಿಗಳನ್ನು ಠಾಣೆಗೆ ಕರೆಸಿಕೊಂಡು ಬುದ್ಧಿವಾದ ಹೇಳುವಂತೆ, ಯುವತಿಯರ ಕಳ್ಳಸಾಗಾಟದಲ್ಲಿ ಶಾಮೀಲಾದವರನ್ನು, ಅಕ್ರಮ ಪಾರ್ಟಿಗಳನ್ನು ನಡೆಸಿ ಯುವತಿಯರ ಹಾದಿ ತಪ್ಪಿಸುವವರನ್ನು ಸಹ ಕರೆಸಿ ನಿರಂತರ ಬುದ್ಧಿವಾದ ಹೇಳುವ ನಿಟ್ಟಿನಲ್ಲಿ ನೀತಿಯೊಂದನ್ನು ರೂಪಿಸಬೇಕು ಎಂದು ನಾನು ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಲಿದ್ದೇನೆ. ಜತೆಗೆ ನಗರ ಪೊಲೀಸರು ಈಗಾಗಲೇ ತಮ್ಮ ನಿರ್ಲಕ್ಷ್ಯ ಸಾಬೀತುಪಡಿಸಿರುವುದರಿಂದ ಉನ್ನತ ಮಟ್ಟದ ಅಧಿಕಾರಿಗಳಿಂದಲೇ ಹೋಂ ಸ್ಟೇ ದಾಳಿಯ ಬಗ್ಗೆ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಲಿದ್ದೇನೆ~
-ಸಿ. ಮಂಜುಳಾ, ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

`ಜನವಸತಿ ಪ್ರದೇಶಗಳಿಗಿಂತ ದೂರದಲ್ಲಿ, ಅಕ್ರಮ ಹೋಂ ಸ್ಟೇಗಳಲ್ಲಿ ಪಾರ್ಟಿಗಳನ್ನು ಏರ್ಪಾಡು ಮಾಡುವವರು ಯುವತಿಯರನ್ನು ತಪ್ಪು ಹಾದಿಗೆ ಎಳೆಯುವ ಸಾಧ್ಯತೆ ಇದೆ. ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಎಂಟು ತಿಂಗಳ ಹಿಂದೆಯೇ ಸ್ಥಳೀಯ ಪೊಲೀಸರಿಗೆ ಮೌಖಿಕ ದೂರು ನೀಡಿದ್ದರು. ನಿನ್ನೆ ನನಗೆ ಲಿಖಿತ ದೂರು ನೀಡಿ ತಾವು ಈ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದನ್ನು ತಿಳಿಸಿದ್ದಾರೆ. ಪೊಲೀಸರು ಮೊದಲಾಗಿಯೇ ಇಂತಹ ಹೋಂ ಸ್ಟೇಗಳ ಬಗ್ಗೆ ನಿಗಾ ವಹಿಸುತ್ತಿದ್ದರೆ ಶನಿವಾರದ ಘಟನೆಗೆ ಆಸ್ಪದವೇ ಇರುತ್ತಿರಲಿಲ್ಲ~ ಎಂದರು.
 


`ಬರ್ತ್‌ಡೇ ಪಾರ್ಟಿ ನಡೆಸಿದ ವಿಜಯ್ ಕುಮಾರ್ ಮತ್ತು ಗುರುದತ್ ಕಾಮತ್ ಅವರ ಜತೆ ನಾನು ಮಾತನಾಡಿಲ್ಲ.  ಅವರ ಹಿನ್ನೆಲೆಯನ್ನು ತಿಳಿಯುವ ಪ್ರಯತ್ನ ಮಾಡಿದ್ದೇನೆ. ಅವರ ಚಟುವಟಿಕೆಗಳು ಅನುಮಾನಕ್ಕೆ ಎಡೆಮಾಡಿಕೊಡುವಂತಿವೆ. ನನ್ನ ಭೇಟಿಯ ಉದ್ದೇಶ ಯುವತಿಯರ ಬಗ್ಗೆ ವಿಚಾರಿಸಿಕೊಂಡು ಹೋಗುವುದು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಏನು ಕ್ರಮ ಕೈಗೊಳ್ಳಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡುವುದು~ ಎಂದು ಮಂಜುಳಾ ತಿಳಿಸಿದರು.

 ದುಷ್ಕರ್ಮಿಗಳು ಒಳಗೊಂಡ ಸಂಘಟನೆಯನ್ನು ನಿಷೇಧಿಸಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೀರಾ ಎಂದು ಕೇಳಿದಾಗ, ಪೊಲೀಸರು ಎಫ್‌ಐಆರ್‌ನಲ್ಲಿ ಆರೋಪಿಗಳು ಯಾವ ಸಂಘಟನೆಗೆ ಸೇರಿದವರು ಎಂಬುದನ್ನು ನಮೂದಿಸಿಲ್ಲ. ಸೂಕ್ತ ತನಿಖೆಯಿಂದಷ್ಟೇ ನಿಜ ಸಂಗತಿ ಬೆಳಕಿಗೆ ಬರಬಹುದಷ್ಟೇ, ಈ ಹಂತದಲ್ಲಿ ತನಿಖೆಯ ಬಗ್ಗೆ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದರು.

ಅಂದು ವಿದ್ಯಾರ್ಥಿಯೊಬ್ಬಳ ಜತೆಗೆ ವಿಜಯ್ ಕುಮಾರ್ ಕೂಡಾ ಬರ್ತ್‌ಡೇ ಆಚರಿಸಿದ್ದರು. ದುಷ್ಕರ್ಮಿಗಳು ಯುವತಿಯರ ಜತೆಗೆ ವಿಜಯ್ ಕುಮಾರ್ ಅವರ ಮೇಲೂ ಹಲ್ಲೆ ನಡೆಸಿದ್ದು ವಿಡಿಯೊ ಚಿತ್ರೀಕರಣದಲ್ಲಿ ದಾಖಲಾಗಿರುವುದನ್ನು ಅಧ್ಯಕ್ಷರ ಗಮನಕ್ಕೆ ತಂದಾಗ, `ನನ್ನ ಗಮನ ಏನಿದ್ದರೂ ಯುವತಿಯರಿಗೆ ಆಗಿರುವ ಅನ್ಯಾಯ ಅಲಿಸುವುದು ಮತ್ತು ಮುಂದೆ ಅವರ ಭವಿಷ್ಯಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು~ ಎಂದರು.

ADVERTISEMENT
ಮತ್ತೆ ಏಳು ಜನ ಬಂಧನ
ಪಡೀಲ್ ಹೋಂ ಸ್ಟೇನಲ್ಲಿ ಯುವತಿಯರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಗುರುವಾರ ಮತ್ತೆ ಏಳು ಮಂದಿ ಆರೋಪಿಗಳನ್ನು ನಗರ ಅಪರಾಧ ದಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವೀರನಗರದ ಸುರೇಶ್ ಪೂಜಾರಿ (24), ಮರೋಳಿಯ ಮಿಥುನ್ (21), ಗುರುಪುರ ಕೈಕಂಬದ ಸಂಪತ್ (23), ಮರೋಳಿಯ ದೀಪಕ್ (23), ಕಣ್ಣೂರಿನ ರಮೇಶ್ (40), ನಿತಿನ್ (28) ಮತ್ತು ಜಗದೀಶ್ (20) ಎಂದು ಗುರುತಿಸಲಾಗಿದೆ.
ಒಟ್ಟು 27 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಬಂಧಿತರ ಸಂಖ್ಯೆ 22ಕ್ಕೆ ಏರಿದೆ.

ಉದ್ವಿಗ್ನ ಪರಿಸ್ಥಿತಿ ಈಗಷ್ಟೇ ನಿಯಂತ್ರಣಕ್ಕೆ ಬರುತ್ತಿರುವ ಕಾರಣ ಈ ಯುವತಿಯರು ಓದುತ್ತಿರುವ ಕಾಲೇಜುಗಳ ಪ್ರಾಚಾರ್ಯರ ಜತೆಗೆ ಈ ಹಂತದಲ್ಲೇ ಮಾತನಾಡುವುದು ಬೇಡ ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಅದಕ್ಕಾಗಿ ವಾರ ಬಿಟ್ಟು ಅವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದಕ್ಕೆ ಅಡ್ಡಿಪಡಿಸುವಂತಹ ಯಾವುದೇ ಕೆಲಸವನ್ನು ಕಾಲೇಜುಗಳು ಮಾಡಬಾರದು, ಹೀಗೆ ಮಾಡಿರುವ ಬಗ್ಗೆ ತಮಗೆ ವರದಿ ಬಂದಿಲ್ಲ ಎಂದರು.

ಮಹಿಳಾ ಆಯೋಗದ ಅಧ್ಯಕ್ಷರು ಹಲ್ಲೆ ನಡೆಸಿದ ಪ್ರಸಂಗವನ್ನು ಬಹುತೇಕ ತೇಲಿಸಿ ಬಿಟ್ಟದ್ದು ಗೊತ್ತಾಗುವಂತಿತ್ತು. ಹಲ್ಲೆ ನಡೆಸಿದ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಮತ್ತೆ ಮತ್ತೆ ಕೇಳಿದಾಗ, ಇಂತಹ ಹಲ್ಲೆ ನಡೆದುದು ಖಂಡನೀಯ. ಮುಂದೆಯೂ ಇಂತಹ ಹಲ್ಲೆಗಳು ನಡೆಯಬಾರದು ಎಂಬ ಕಾರಣಕ್ಕೇ ತಾವು ಸರ್ಕಾರಕ್ಕೆ ಕೆಲ ಶಿಫಾರಸುಗಳನ್ನು ಮಾಡುತ್ತಿದ್ದು, ಹಲ್ಲೆಗೆ ಒಳಗಾದವರು ಭಯಪಡದೆ ಗಟ್ಟಿ ಸಾಕ್ಷಿಗಳಾಗಿ ನಿಂತುಕೊಂಡರೆ ಆರೋಪಿಗಳು ಶಿಕ್ಷೆಯಿಂದ ಪಾರಾಗುವುದು ಸಾಧ್ಯವಿಲ್ಲ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.