ADVERTISEMENT

ಮಠದಲ್ಲಿ ಅನ್ನ–ಸಾಂಬಾರ ಜಪ್ತಿ

ಬಿಜೆಪಿ ಅಭ್ಯರ್ಥಿ ಪ್ರಚಾರಸಭೆಗೆ ಊಟ!

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ರಾಯಚೂರು: ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ ಪರ ಪ್ರಚಾರ ಸಭೆಗೆ ಬರುವ ಜನರ ಊಟಕ್ಕೆ ನಗರದ ಕೋಟೆ ಬಡಾವಣೆಯ ರಾಘವೇಂದ್ರ ಸ್ವಾಮಿ ಮಠ ಹಾಗೂ ಮುಂಗ್ಲಿ ಪ್ರಾಣ­ದೇವರ ದೇವಸ್ಥಾನದಲ್ಲಿ ಸಿದ್ಧಪಡಿಸಿ­ಟ್ಟಿದ್ದಾರೆ ಎನ್ನಲಾದ ಅನ್ನ ಮತ್ತು ಸಾಂಬಾ­ರನ್ನು ಪೊಲೀಸರು ಮಂಗಳ­ವಾರ ಮಧ್ಯಾಹ್ನ ಜಪ್ತಿ ಮಾಡಿದರು.

ಚುನಾವಣಾ ವಿಭಾಗದ ಸಮನ್ವಯ ಅಧಿಕಾರಿಗಳು ಹಾಗೂ ಸದರ ಬಜಾರ ಠಾಣೆ ಪೊಲೀಸರು ಸಿಬ್ಬಂದಿ ಜತೆಗೆ  ತೆರಳಿ ಅನ್ನ ಮತ್ತು ಸಾಂಬಾರ ಜಪ್ತಿ ಮಾಡಿ, ಟಂಟಂ ವಾಹನದಲ್ಲಿ ಠಾಣೆಗೆ ಸಾಗಿಸಿದರು.

ಪ್ರಕರಣ ದಾಖಲು: ಬಿಜೆಪಿ ಅಭ್ಯರ್ಥಿ ಪ್ರಚಾರ ಸಭೆಗೆ ಬರುವ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂಬ ವಿಷಯ ತಿಳಿದ ಹಿನ್ನೆಲೆಯಲ್ಲಿ ತೆರಳಿ ಅಲ್ಲಿದ್ದ ಅನ್ನ ಮತ್ತು ಸಾಂಬಾರ ವಶಕ್ಕೆ ಪಡೆಯಲಾಗಿದೆ. ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಬಿಜೆಪಿ ಪಕ್ಷದ ನಗರ ಘಟಕ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು ಮಾಡಿ­ಕೊಳ್ಳಲಾಗಿದೆ ಎಂದು ಸದರ ಬಜಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ದಾದಾವಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೇವಸ್ಥಾನ ಕಾರ್ಯದರ್ಶಿ ಹೇಳಿಕೆ: ಕೋಟೆ ಬಡಾವಣೆಯಲ್ಲಿರುವ ರಾಯರಮಠದಲ್ಲಿ ಪ್ರತಿನಿತ್ಯ ಹಸ್ತೋದಕ ನಡೆಯುತ್ತಿದೆ. ಕನಿಷ್ಠ 15–20 ಜನರಿಗೆ ನಿತ್ಯ ಅಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಹೀಗಾಗಿ ಅನ್ನ ಮತ್ತು ಸಾಂಬಾರ ಅಡುಗೆ ಮಾಡಿಡಲಾಗಿತ್ತು.

ರಾಜಕೀಯ ಪಕ್ಷಗಳ ಪ್ರಚಾರ ಸಭೆಗೆ ಮಾಡಿರಲಿಲ್ಲ. ಪೊಲೀಸರು, ಚುನಾವಣೆ ವಿಭಾಗದ ಅಧಿಕಾರಿಗಳು ಏಕಾಏಕಿ ಬಂದು ಅನ್ನ ಮತ್ತು ಸಾಂಬಾರ ತೆಗೆದುಕೊಂಡು ಹೋದರು ಎಂದು ಕಾರ್ಯದರ್ಶಿ ಬಿ. ನರಸಿಂಗರಾವ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.